ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಅಣತಿ ಗ್ರಾಮದಲ್ಲಿ ಬಿಜಿಎಸ್ ಪಬ್ಲಿಕ್ ಶಾಲೆ ಹಾಗೂ ಶ್ರೀದಿಗಂಬರೇಶ್ವರ ಪ್ರೌಢಶಾಲೆ ವತಿಯಿಂದ ನಡೆದ ಸರಸ್ವತಿ ಪೂಜೆ ಹಾಗೂ ಮಾತಾ- ಪಿತೃ ಪಾದಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅವರು ಆಶೀರ್ವಚನ ನೀಡಿದರು. ಪರೀಕ್ಷೆಯ ಭಯದಲ್ಲಿ ಹಗಲು- ಇರುಳು ಓದುವುದರಿಂದ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ವಿದ್ಯಾರ್ಥಿಗಳು ಇಷ್ಟಪಟ್ಟು ಓದಿದರೆ ಪರೀಕ್ಷೆಯಲ್ಲಿ ಉತ್ತಮ ಅಂಕ ಬರುತ್ತವೆ ಎಂದರು.
ಪರೀಕ್ಷೆಯ ಸಮಯದಲ್ಲಿ ಗುರುಗಳು, ಪೋಷಕರು ಶುಭ ಹಾರೈಸುತ್ತಾರೆ. ಉತ್ತಮ ಹಾದಿಯಲ್ಲಿ ಮಕ್ಕಳು ಸಾಗಬೇಕು ಎಂದು ಸಾಕಷ್ಟು ಮಾರ್ಗದರ್ಶನ ನೀಡುತ್ತಾರೆ, ಇದನ್ನು ಮಕ್ಕಳು ಪಾಲನೆ ಮಾಡಿದರೆ ಮುಂದಿನ ಬದುಕು ಹಸನಾಗಲಿದೆ, ಮಕ್ಕಳಿಗೆ ಪವಿತ್ರ ಭಾವನೆಗಳಿರುತ್ತವೆ. ಆದರೆ ಇತ್ತೀಚೆಗೆ ಮೊಬೈಲ್, ಸೋಷಿಯಲ್ ಮೀಡಿಯಾಗಳು ಮಕ್ಕಳ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿವೆ ಎಂದರು.ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಯಲ್ಲಿ ಸಂಸ್ಕಾರ ನೀಡುತ್ತೇವೆ, ಮನೆಯಲ್ಲಿ ಪೋಷಕರು ಸಹ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಎಲ್ಲಾ ವಿಷಯಕ್ಕೂ ಶಾಲೆ ಕಡೆ ಕೈ ತೋರಿಸಿದರೆ ಸಾಲದು, ನಮ್ಮ ಸಂಸ್ಕಾರ ಮನೆಯಿಂದ ಆರಂಭವಾಗಬೇಕು, ಈ ಮಣ್ಣಿನ ಸಂಪ್ರದಾಯವನ್ನು ಮಕ್ಕಳಿಗೆ ಬಿತ್ತಿದರೆ ಅವರು ಎಂದಿಗೂ ಹಾದಿ ತಪ್ಪುವುದಿಲ್ಲ, ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಸಾಲದು, ಜೀವನದಲ್ಲಿಯೂ ಉತ್ತೀರ್ಣರಾಗಬೇಕು ಎಂದು ಸಲಹೆ ನೀಡಿದರು.
ಉದ್ಯೋಗ ಪಡೆಯುವಾಗ ನಿಮ್ಮ ಅಂಕಪಟ್ಟಿ, ಪದವಿ ಪಟ್ಟಿಗಳನ್ನು ವಿದೇಶಿ ಕಂಪನಿಗಳು ಪರಿಗಣಿಸುವುದಿಲ್ಲ, ನಿಮ್ಮಲ್ಲಿ ಇರುವ ಕೌಶಲ್ಯ ಮನೋಭಾವ, ಗುಣ ಹಾಗೂ ನಡತೆಯನ್ನು ಮಾನದಂಡವಾಗಿ ಇಟ್ಟುಕೊಂಡು ಉದ್ಯೋಗ ಕೊಡುತ್ತವೆ, ಸಾಕಷ್ಟು ಮಂದಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳು ವಿದೇಶಿ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಇದನ್ನು ಮನದಲ್ಲಿ ಇಟ್ಟುಕೊಂಡು ಶಿಕ್ಷಣದ ಜೊತೆಯಲ್ಲಿ ಕೌಶಲ್ಯವನ್ನೂ ರೂಢಿಸಿಕೊಳ್ಳಬೇಕು ಎಂದರು.