ರಮೇಶ್ ಬಿದರಕೆರೆ
ತಾಲೂಕಿನ ಹಳ್ಳಿಗಳು ಅಕ್ರಮ ಮದ್ಯದ ಅಡ್ಡೆಗಳಾಗಿದ್ದು ಬಾರುಗಳಿಂದ ನಿರಂತರವಾಗಿ ಹಳ್ಳಿಗಳಿಗೆ ಅಕ್ರಮ ಮದ್ಯ ಸರಬರಾಜು ಆಗುತ್ತಿದೆ. ಮಂಗಳವಾರ ರಾತ್ರಿ ತಾಲೂಕಿನ ಹರ್ತಿಕೋಟೆ ಗ್ರಾಮದ ಮಹಿಳೆಯರು, ಗ್ರಾಮಸ್ಥರು ಸೇರಿ ಗ್ರಾಮದ ಅಕ್ರಮ ಮದ್ಯ ಮಾರುವ ಅಂಗಡಿಗಳ ಮೇಲೆ ತಾವೇ ದಾಳಿ ನಡೆಸಿ ಸುಮಾರು 50ಕ್ಕೂ ಹೆಚ್ಚು ಮದ್ಯದ ಪಾಕೆಟ್‌ಗಳನ್ನು ವಶಕ್ಕೆ ಪಡೆದು ನಡು ರಸ್ತೆಯಲ್ಲೇ ಸುಟ್ಟು ಹಾಕಿದ್ದಾರೆ.
ದುರಂತ ಎಂದರೆ ಈ ಕೆಲಸ ಮಾಡಬೇಕಾದ ಅಬಕಾರಿ ಅಧಿಕಾರಿಗಳಿಗೆ ಜಾಣ ಕುರುಡು. ಹಳ್ಳಿಯ ಮಹಿಳೆಯರು ಅಕ್ರಮ ಮದ್ಯ ತಡೆಗಟ್ಟಿ ಎಂದು ತಿರುಗದ ಕಚೇರಿಯೇ ಇಲ್ಲದಂತಾಗಿದೆ. ಕೂಲಿ ಕೆಲಸವನ್ನೂ ಸಹ ಬದಿಗಿಟ್ಟು ಅಬಕಾರಿ ಇಲಾಖೆಗೆ, ಕೆಲವು ಬಾರಿ ಪೊಲೀಸ್ ಇಲಾಖೆಗೆ, ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಮನವಿ ಮಾಡುತ್ತಲೇ ಇದ್ದಾರೆ. ಕೊನೆಗೆ ಅಬಕಾರಿಯವರ ಕಾರ್ಯ ವೈಖರಿಗೆ ಬೇಸತ್ತ ಗ್ರಾಮಸ್ಥರು ಮಂಗಳವಾರ ಸಂಜೆ ತಾವೇ ಪ್ರತಿ ಅಂಗಡಿಗಳಿಗೂ ಹೋಗಿ ಅಕ್ರಮ ಮದ್ಯದ ಪಾಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಹಳ್ಳಿಯ ಮಹಿಳೆಯರಿಗೆ, ಗ್ರಾಮಸ್ಥರಿಗೆ ಸಿಗುವ ಅಕ್ರಮ ಮದ್ಯ ಮಾರಾಟಗಾರರು, ಸರಬರಾಜುದಾರರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಯಾಕೆ ಸಿಗುವುದಿಲ್ಲ ಎಂಬುದೇನು ಯಕ್ಷ ಪ್ರಶ್ನೆಯಲ್ಲ. ಹಳ್ಳಿಗಳಿಗೆ ಅಕ್ರಮವಾಗಿ ಬಾರುಗಳಿಂದ ಮದ್ಯ ಸರಬರಾಜು ಮಾಡುವ ತಂಡಗಳೇ ಇವೆ ಎಂಬ ಸತ್ಯವೂ ಸಹ ಹಳೆಯದು. ಆದರೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಪುರುಸೊತ್ತು ಇದ್ದಂತಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಹಳ್ಳಿಗಳಲ್ಲಿನ ಅಕ್ರಮ ಮದ್ಯ ಮಾರಾಟದಿಂದ ಹೆಣ್ಣು ಮಕ್ಕಳು ನೆಮ್ಮದಿಯಿಂದ ಗ್ರಾಮದಲ್ಲಿ ಓಡಾಡಲಾಗುತ್ತಿಲ್ಲ ಎಂದು ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು.ಅದಕ್ಕೂ ಮುನ್ನ ಗ್ರಾಮದ ಯುವಕನೊಬ್ಬ ಅಕ್ರಮ ಮದ್ಯ ಸೇವನೆಯಿಂದಲೇ ಸತ್ತದ್ದು, ಹೆಣ ತಂದು ಅಬಕಾರಿ ಇಲಾಖೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಪ್ರತಿಭಟನೆ ನಡೆಸಿದ್ದರು. ಕೂನಿಕೆರೆ ಗ್ರಾಮದ ಮಹಿಳೆಯರು ಬೆಳ್ಳಂಬೆಳಗ್ಗೆಯೇ ಅಕ್ರಮ ಮದ್ಯ ಸಾಗಾಟ ಮಾಡುವವರನ್ನು ಗ್ರಾಮದಲ್ಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಹಳ್ಳಿಗಳವರು ಅಕ್ರಮ ಮದ್ಯ ಮಾರಾಟ ತಡೆಗಟ್ಟಿ ಎಂದು ದುಂಬಾಲು ಬಿದ್ದಾಗ ಒಂದೆರಡು ಬಾರಿ ದಾಳಿ ಮಾಡಿದಂತೆ ಮಾಡಿ ಸುಮ್ಮನಾಗುವುದು ಅಬಕಾರಿ ಇಲಾಖೆಯವರಿಗೆ ಅಭ್ಯಾಸವಾಗಿದೆ. ಅಕಸ್ಮಾತ್ ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯ ಹಿಡಿದರು ಸಹ ಅದು ಕೇಸು ದಾಖಲಿಸುವಷ್ಟು ಪ್ರಮಾಣದಲ್ಲಿ ಇರುವುದಿಲ್ಲ. ಅಕ್ರಮ ಮದ್ಯ ಮಾರಾಟಗಾರರು ಬುದ್ಧಿವಂತರಾಗಿದ್ದಾರೆ. ಕೇಸು ಬೀಳದಷ್ಟು ಪ್ರಮಾಣದ ಮದ್ಯವನ್ನು ಅಂಗಡಿಗಳಲ್ಲಿ ಇಟ್ಟುಕೊಂಡು ಉಳಿದದ್ದನ್ನು ಎಲ್ಲಾದರೂ ಸಂಗ್ರಹಿಸಿ ಇಟ್ಟಿರುತ್ತಾರೆ.
ಮದ್ಯ ಮಾರಾಟಗಾರರಿಗೆ ಯಾವ ಭಯವೂ ಇಲ್ಲದಂತಾಗಿ ಹಳ್ಳಿಗಳೆಲ್ಲಾ ಅನಾರೋಗ್ಯದ, ಅಶಾಂತಿಯ ಅಡ್ಡೆಗಳಾಗುತ್ತಿವೆ. ಪೊಲೀಸರು ತಮ್ಮ ಕೆಲಸವಲ್ಲದಿದ್ದರೂ ಸಹ ಕೆಲವೊಮ್ಮೆ ಗ್ರಾಮಸ್ಥರ ಮನವಿ ಮೇರೆಗೆ ದಾಳಿ ಮಾಡುತ್ತಿರುವುದು ಬಿಟ್ಟರೆ ಅಬಕಾರಿ ಇಲಾಖೆಯ ಕಾರ್ಯವೈಖರಿ ಬಗ್ಗೆಯೇ ಅನುಮಾನಗಳೇಳುತ್ತಿವೆ.
ದಲಿತ ಮುಖಂಡ ಹರ್ತಿಕೋಟೆ ದಯಾನಂದ್ ಪ್ರತಿಕ್ರಿಯಿಸಿ, ಬಹಳಷ್ಟು ದಿನಗಳಿಂದ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಿ ಎಂದು ಮಹಿಳೆಯರು, ಗ್ರಾಮಸ್ಥರು ಮನವಿ ಮಾಡುತ್ತಾ ಬಂದಿದ್ದರೂ ಸಹ ಗ್ರಾಮದ ಕೆಲವು ಅಂಗಡಿಗಳಲ್ಲಿ ನಿರಂತರವಾಗಿ ಅಕ್ರಮ ಮದ್ಯ ಮಾರಾಟ ನಡೆದೇ ಇತ್ತು. ಶಾಲೆಯ ಪಕ್ಕದಲ್ಲೇ ಮದ್ಯ ಮಾರಾಟ ಮಾಡುತ್ತಿದ್ದುದರಿಂದ ಮದ್ಯ ವ್ಯಸನಿಗಳು ಸರ್ಕಾರಿ ಶಾಲಾ ಅವರಣದಲ್ಲೇ ಕುಳಿತು ಮದ್ಯ ಸೇವಿಸುವುದು ಮಾಮೂಲಾಗಿತ್ತು.