ಶಿಕ್ಷಕರನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದ ವಿದ್ಯಾರ್ಥಿಗಳು

KannadaprabhaNewsNetwork |  
Published : Oct 06, 2025, 01:01 AM IST
5ಎಚ್‌ವಿಆರ್2 | Kannada Prabha

ಸಾರಾಂಶ

ಹಾವೇರಿ ತಾಲೂಕಿನ ಹೊಸರಿತ್ತಿಯ ಜಿ.ವಿ. ಹಳ್ಳಿಕೇರಿ ಸಂಯುಕ್ತ ಪ್ರೌಢಶಾಲೆ 1993-94ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ನೇಹ ಮಿಲನ ಹಾಗೂ ಗುರು ವಂದನೆ ಶಾಲೆಯ ಆವರಣದಲ್ಲಿ ಭಾನುವಾರ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯಿತು.

ಹಾವೇರಿ:ತಾಲೂಕಿನ ಹೊಸರಿತ್ತಿಯ ಜಿ.ವಿ. ಹಳ್ಳಿಕೇರಿ ಸಂಯುಕ್ತ ಪ್ರೌಢಶಾಲೆ 1993-94ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ನೇಹ ಮಿಲನ ಹಾಗೂ ಗುರು ವಂದನೆ ಶಾಲೆಯ ಆವರಣದಲ್ಲಿ ಭಾನುವಾರ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯಿತು.

ತಮ್ಮ ಜೀವನಕ್ಕೆ ದಾರಿ ತೋರಿದ ಅಧ್ಯಾಪಕರನ್ನು ಗ್ರಾಮದ ಬಸ್ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಶಾಲಾ ಆವರಣದವರೆಗೂ ಸಾರೋಟು ಹಾಗೂ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತಂದು ಶಿಷ್ಯರು ಸಂಭ್ರಮಿಸಿದರು.ಮೂರು ದಶಕಗಳ ನಂತರ ಒಂದೆಡೆ ಸೇರಿದ ಸ್ನೇಹಿತರೆಲ್ಲಾ ತಮ್ಮ ಹಳೆಯ ನೆನಪುಗಳನ್ನ ಮೆಲುಕು ಹಾಕಿದರು. ಒಟ್ಟು 80 ವಿದ್ಯಾರ್ಥಿಗಳಿದ್ದ ಬ್ಯಾಚ್‌ನಲ್ಲಿ ಬಹುತೇಕರು ಪಾಲ್ಗೊಂಡಿದ್ದರು. ಜೊತೆಗೆ ಪತ್ನಿ, ಮಕ್ಕಳು ಸೇರಿದಂತೆ ಕುಟುಂಬಸ್ಥರೆಲ್ಲಾ ಸೇರಿ ಪರಸ್ಪರ ಕುಶಲೋಪಚರಿ ವಿನಿಮಯ, ಭಕ್ಷ್ಯ ಭೋಜನ ಸೇವನೆ, ಹರಟೆ ಸೇರಿದಂತೆ ತಮ್ಮ ಶಾಲಾ ದಿನಗಳ ಮಂಥನ ಮಾಡಿದರು. ತಮ್ಮ ಶಾಲಾ ದಿನಗಳಲ್ಲಿ ತಿಳಿಯದೇ ಮಾಡಿದ ತುಂಟಾಟದ ಕ್ಷಣಗಳ ನೆನೆದು ಸಂಭ್ರಮಿಸಿದರಲ್ಲದೆ ಕೆಲವೊಂದು ಘಟನೆಗಳಿಗೆ ತಮ್ಮನ್ನೇ ತಾವು ಶಪಿಸಿಕೊಂಡಿದ್ದೂ ನಡೆಯಿತು. ಈ ಬ್ಯಾಚ್‌ನಲ್ಲಿ ಮಠಾಧೀಶರಿಂದ ಹಿಡಿದು ಕೆಎಎಸ್ ಅಧಿಕಾರಿವರೆಗೂ ಇದ್ದಾರೆ. ಅರಣ್ಯ ಅಧಿಕಾರಿ, ವೈದ್ಯರು, ಉಪನ್ಯಾಸಕರು, ಶಿಕ್ಷಕರು, ಪೊಲೀಸರು, ಪುರೋಹಿತರು, ರೈತರು, ವ್ಯಾಪಾರಸ್ಥರು, ರಾಜಕಾರಣಿ ಹೀಗೆ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಹುದ್ದೆ, ಅಧಿಕಾರ, ಅಂತಸ್ತುಗಳನ್ನ ಮೆರೆತು ಪರಸ್ಪರ ಬೇರೆಯುವ ಅಪರೂಪದ ಕ್ಷಣಗಳು ದಿನವಿಡೀ ನಡೆದವು.ಇದಕ್ಕೂ ಮುನ್ನ ತಮಗೆ ಪಾಠ ಮಾಡಿದ ಗುರುಗಳನ್ನ ವಂದಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದರು. ವಿವಿಧ ಕಲಾ ತಂಡಗಳು ಹಾಗೂ ಸಂಗೀತ ವಾದ್ಯಗಳು ಮೆರವಣಿಗೆಗೆ ರಂಗು ತುಂಬಿದವು. ತಲೆಗೆ ಪೇಟ ಧರಿಸಿದ್ದ ಎಲ್ಲ ಸಹಪಾಠಿಗಳು ಮೆರವಣಿಗೆಯಲ್ಲಿ ನೃತ್ಯದ ಮೂಲಕ ಗಮನ ಸೆಳೆದರು. ಗುರುಗಳಾದ ಎಂ.ಎಫ್. ಶಿಗ್ಲಿ, ಎಸ್.ಬಿ. ಸಬಾವಡಿಯವರಮಠ, ಎಂ.ಎಂ. ವಗ್ಗಣ್ಣನವರ, ಬಿ.ಎನ್. ಕಿತ್ತೂರ, ಎ.ಬಿ. ಬೂದಿಹಾಳ, ಗುರುಸಿದ್ಧಪ್ಪ ಪವಾಡಶೆಟ್ಟರ್, ಪ್ರಭಾವತಿ ವಡವಿ, ವಸುಧಾ ಅಂಗಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೇ ಅಗಲಿದ ಶಿಕ್ಷಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಶಿಕ್ಷಣದಲ್ಲಿ ಗುರುವಿನ ಪಾತ್ರ ಅತ್ಯಂತ ದೊಡ್ಡದು, ಅಕ್ಷರದೊಂದಿಗೆ ಸಂಸ್ಕೃತಿಯನ್ನೂ ಧಾರೆ ಎರೆಯುವ ಶಿಕ್ಷಕರಿಗೆ ಇಂತಹ ಸನ್ಮಾನ ಅತ್ಯಂತ ಸೂಕ್ತವಾಗಿದ್ದು, ಇದನ್ನು ಆಯೋಜಿಸಿರುವ ಹಳೆಯ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ. ಒಬ್ಬ ಉತ್ತಮ ಗುರುವಿಗೆ ಸಲ್ಲುವ ಅತ್ಯಂತ ದೊಡ್ಡ ಸನ್ಮಾನ ಶಿಷ್ಯರ ಸಾಧನೆ. ಹೀಗೆ ಸಾಧನೆ ಮಾಡಿ ದೊಡ್ಡ ಹುದ್ದೆಗಳಲ್ಲಿ ಇರುವ ವಿದ್ಯಾರ್ಥಿಗಳು ತಮ್ಮ ಹುದ್ದೆ, ಅಧಿಕಾರ ಎಲ್ಲವನ್ನೂ ಮರೆತು ಒಂದಡೆ ಸೇರಿ ಇಂಥ ಕಾರ‍್ಯಕ್ರಮ ಆಯೋಜಿಸಿರುವುದು ನಿಮಗೆ ಕಲಿಸಿರುವ ಗುರುಗಳ ಪುಣ್ಯ ಗುದ್ದಲೀ ಶಿವಯೋಗೀಶ್ವರ ಹೇಳಿದರು.ಪ್ರೌಢಶಾಲಾ ಸಮಯದಲ್ಲಿ ಸ್ನೇಹಿತರೊಂದಿಗೆ ಬೆರೆತ್ತಿದ್ದೆ ಕೊನೆ. ಮಠದ ವಾತಾವರಣದಲ್ಲಿ ಬೆಳೆದ ನಾನು ಆಧ್ಯಾತ್ಮ ಮಾರ್ಗದಲ್ಲಿ ನಡೆದು ಈಗ ಮಠಾಧೀಶನಾಗಿದ್ದೇನೆ. ಆದರೂ ಹಳೆ ದಿನಗಳನ್ನ ಮೆಲಕು ಹಾಕುವ ಈ ಸುಸಂದರ್ಭಕ್ಕೆ ಅಂದಿನ ನನ್ನ ಎಲ್ಲ ಸ್ನೇಹಿತರು ಕಾರಣರಾಗಿದ್ದಾರೆ. ಇಂಥ ಅಪರೂಪದ ಕಾರ್ಯಕ್ರಮ ನನ್ನ ಜೀವನದಲ್ಲಿ ಇನ್ನೊಂದಿಲ್ಲ ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಹೇಳಿದರು.ನಾವು ಈಗ ಎಷ್ಟೇ ದೊಡ್ಡ ಹುದ್ದೆಯಲ್ಲಿ ಇರಬಹುದು, ಆದರೆ, ಬಾಲ್ಯದ ಸ್ನೇಹಿತರೊಂದಿಗೆ ಕಳೆಯುವ ಕ್ಷಣ ಸ್ವರ್ಗಕ್ಕೆ ಸಮ. ಈ ಕ್ಷಣಕ್ಕಾಗಿ ನಾನು ಕಳೆದ ಆರು ತಿಂಗಳಿAದ ಕಾತರನಾಗಿ ಕಾಯುತ್ತಿದ್ದೆ. ಹುದ್ದೆ, ಅಧಿಕಾರ, ಅಂತಸ್ತುಗಳಿಗಿಂತ ಹಸಿವಿನಿಂದ ಕೂಡಿದ ಹಳೇ ನೆನಪುಗಳೇ ಸಾರ್ಥಕ ಜೀವನದ ಅಪರೂಪದ ಕ್ಷಣಗಳು ಎಂದು ಸಹಪಾಠಿ ನಾಗರಾಜ ಬಾಳೆಹೊಸೂರು ಹೇಳಿದರು.

PREV

Recommended Stories

5 ವರ್ಷ ಸಿಎಂ ಎಂದೇ ಸಿದ್ದುಗೆ ಮತ ಹಾಕಿದ್ದೇವೆ : ರಾಯರಡ್ಡಿ
ಹಸು ಕೊಂದಿದ್ದಕ್ಕೆ ಎಂ.ಎಂ.ಹಿಲ್ಸ್‌ ಹುಲಿಯ ಹತ್ಯೆಗೈದು ಪ್ರತೀಕಾರ!