ವಿದ್ಯಾರ್ಥಿಗಳು ರಾಷ್ಟ್ರಪ್ರೇಮ ಬೆಳೆಸಿಕೊಳ್ಳಿ: ಡಾ.ಗುರುಪ್ರಸಾದ ಹೂಗಾರ

KannadaprabhaNewsNetwork | Published : Jan 3, 2024 1:45 AM

ಸಾರಾಂಶ

ಬೀದರ್ ನಗರದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಗುರುಪ್ರಸಾದ ಹೂಗಾರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೀದರ್

ಇಂದಿನ ವಿದ್ಯಾರ್ಥಿಗಳಲ್ಲಿ ದೇಶದ ಬಗ್ಗೆ ಅಭಿಮಾನ ಕಡಿಮೆಯಾಗುತ್ತಿದ್ದು, ವಿದ್ಯಾರ್ಥಿಗಳು ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕೆಂದು ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಗುರುಪ್ರಸಾದ ಹೂಗಾರ ಹೇಳಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳು ತಮ್ಮ ಶ್ರೇಯಸ್ಸನ್ನು ಹಿರಿಯರಿಗೆ ಅರ್ಪಿಸಬೇಕು. ರಾಮಾಯಣ, ಮಹಾಭಾರತದಿಂದ ಅನೇಕ ಪಾಠಗಳನ್ನು ಕಲಿಯಬಹುದು, ಬ್ರಿಟೀಷರು ನಮಗೆ ಆಂಗ್ಲ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದರು. ಆ ಮೂಲಕ ಭಯದ ಶಿಕ್ಷಣಕ್ಕೆ ನಾಂದಿ ಹಾಡಿದರು. ಇಂಗ್ಲಿಷ್‌ ಬರದೇ ಇರುವುದರಿಂದ ಮಕ್ಕಳು ಪ್ರಶ್ನೆ ಕೇಳುವುದಕ್ಕೆ ಹಿಂಜರಿಯುತ್ತಾರೆ. ಭಯವೇ ಇಂಗ್ಲಿಷ್ ಶಿಕ್ಷಣದ ಮೂಲ ಎಂದು ಹೇಳಿದರು.

ಒಂದು ದೇಶದ ಸಂಸ್ಕೃತಿಯ ನಾಶ ಮಾಡಲು ಅಥವಾ ಉತ್ತಮ ಪಡಿಸಲು ಶಿಕ್ಷಣವೊಂದೇ ಸಾಕು. ನಮ್ಮ ದೇಶ ಮಹಿಳೆಯರಿಗೆ ಶಿಕ್ಷಣ ಮತ್ತು ಸಂಸ್ಕಾರ ಕೊಟ್ಟಿಲ್ಲ ಎಂದು ವಾದ ಮಾಡುವವರಿದ್ದಾರೆ. ಅದು ಸತ್ಯವೇ ಆಗಿದ್ದರೆ, ಇತಿಹಾಸದಲ್ಲಿ ಎಷ್ಟೊಂದು ಜನ ರಾಣಿಯರು ಸಾಮ್ರಾಜ್ಯ ಕಟ್ಟಿ ಆಳಿದ್ದಾರೆ. ಹನ್ನೆರಡನೆಯ ಶತಮಾನದಲ್ಲಿ ಅಕ್ಕಮಹಾದೇವಿಯಾದಿಯಾಗಿ ಎಷ್ಟೊಂದು ಜನ ವಚನಕಾರ್ತಿಯರು ಇದ್ದರು.

ವಿದ್ಯಾರ್ಥಿಗಳು ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು. ವಿದೇಶದ ವ್ಯಾಮೋಹದಿಂದ ಹೊರಬಂದು ದೇಶಿಯತೆ ಭಾವನೆಗಳನ್ನು, ದೇಶ ಉದಾತ್ತ ಧ್ಯೇಯಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.

ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ದೇವೆಂದ್ರಪ್ಪ ಹಂಚೆ ಮಾತನಾಡಿ, ವಿದ್ಯಾರ್ಥಿಗಳಿಗೆ ಒಳ್ಳೆಯ ಗೆಳೆಯರಿರಬೇಕು. ವಿದ್ಯಾರ್ಥಿಗಳು ಸಾಮಾಜಿಕ ಜಾಡ್ಯಗಳಾದ ಸೀಗರೇಟು ಸೇದುವುದು, ಕುಡಿತ, ಗುಟಕಾ ತಿನ್ನುವುದು, ಡ್ರಗ್ಸ್ ತೆಗೆದುಕೊಳ್ಳುವಂತಹ ಕೆಟ್ಟ ಚಟಗಳಿಂದ ದೂರವಿರಬೇಕು. ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಬೇಕೆಂದರು.

ಸರ್ಕಾರಿ ಪಾಲಿಟೆಕ್ನಿಕ್ ಔರಾದ್‌ನ ಪ್ರಾಚಾರ್ಯರಾದ ಶೈಲಜಾ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ದೇಶದ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಬೇಕು, ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡಬೇಕೆಂದರು.

ಈ ವರ್ಷದ ಪದ್ಮಶ್ರೀ ಪುರಸ್ಕೃತರಾದ ಷಾ ರಶೀದ್ ಅಹ್ಮದ್ ಖಾದ್ರಿ, ಡಾ. ಎಚ್.ನರಸಿಂಹಯ್ಯ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶಿವಕುಮಾರ ಕಟ್ಟೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಡಾ.ಸಂತೋಷ ಪಿನ್ನಾ ಅವರನ್ನು ಗೌರವಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಬಿ.ಆರ್. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೌತಮ ಹೊಸಮನಿ ಸ್ವಾಗತಿಸಿದರು. ಮೊಹ್ಮದ್ ವಕೀಲ್ ಪಟೇಲ್ ನಿರೂಪಿಸಿದರೆ ಎನ್‌ಎಸ್‌ಎಸ್‌ ಅಧಿಕಾರಿ ಅರುಣ ಮೋಕಾಶಿ ವಂದಿಸಿದರು.

Share this article