ಚನ್ನಪಟ್ಟಣ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಸಂಯಮ, ಅಧ್ಯಯನಶೀಲ ಗುಣಗಳನ್ನು ಬೆಳೆಸಿಕೊಂಡಲ್ಲಿ ಉನ್ನತ ಸ್ಥಾನ-ಮಾನ ಪಡೆಯುವುದು ಸಾಧ್ಯ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರ, ಸ್ಪೂರ್ತಿ ಸೇವಾ ಫೌಂಡೇಶನ್ ಅಧ್ಯಕ್ಷ ಕೋಡಂಬಹಳ್ಳಿ ಕೆ.ಎಂ.ಶಿವಕುಮಾರ್ ತಿಳಿಸಿದರು.
ಕೋಡಂಬಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಸಂಕಲ್ಪ ಮತ್ತು ಪ್ರತಿಜ್ಞಾ ದಿನದ ಅಂಗವಾಗಿ ಸ್ಪೂರ್ತಿ ಸೇವಾ ಫೌಂಡೇಶನ್ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಅವರು ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದರು.ವಿದ್ಯಾರ್ಥಿಗಳು ತಮ್ಮಿಷ್ಟದ ಕೆಲಸವನ್ನು ಆಯ್ಕೆ ಮಾಡಿಕೊಂಡು ನಿರಂತರ ಶ್ರಮ ವಹಿಸಬೇಕು. ಶಿಶು, ಬಾಲ್ಯಾವಸ್ಥೆ ಹಾಗೂ ಪ್ರೌಢತ್ವದ ಜೊತೆಗೆ ನೀವು ಯಾವುದಾದರೂ ವೃತ್ತಿ ಕೈಗೊಳ್ಳುವವರೆಗೂ ನಿಮ್ಮನ್ನು ಬೆಳೆಸಿ ನಿಮ್ಮಲ್ಲಿ ಒಂದು ವ್ಯಕ್ತಿತ್ವ ರೂಪುಗೊಳ್ಳುವಂತೆ ಮಾಡುವ ತಂದೆ, ತಾಯಿ, ಗುರು- ಹಿರಿಯರು ಹಾಗೂ ಸಮಾಜವನ್ನು ಯಾವುದೇ ವಿದ್ಯಾರ್ಥಿ ಎಂದಿಗೂ ಮರೆಯಬಾರದು. ಬಾಲ್ಯದಲ್ಲಿ ನಮ್ಮನ್ನು ಸಲಹಿದ ಎಲ್ಲರನ್ನೂ ಗೌರವದಿಂದ ಕಾಣುವುದಷ್ಟೇ ಅಲ್ಲ, ಅವರು ಉತ್ತಮ ರೀತಿಯಲ್ಲಿ ಜೀವನ ನಡೆಸಲು ನಾವು ನೆರವಾಗುತ್ತೇವೆ ಎಂದು ಈ ದಿನ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿ, ಎಸ್‌ಎಸ್‌ಎಲ್‌ಸಿ ಘಟ್ಟ ಪ್ರತಿಯೊಬ್ಬ ವಿದ್ಯಾರ್ಥಿಗೂ ಬಹಳ ಮಹತ್ವದ ಘಟ್ಟವಾಗಿದ್ದು, ಇಲ್ಲಿ ಯಾವ ವಿದ್ಯಾರ್ಥಿ ಯಶಸ್ಸು ಸಾಧಿಸುತ್ತಾನೋ ಆತ ಅಥವಾ ಆಕೆಯ ಬದುಕಿಗೆ ಭದ್ರ ಬುನಾದಿ ದೊರೆಯುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಲೋಕೇಶ್ ಹಾಗೂ ಸಹ ಶಿಕ್ಷಕರು, ಭಾರತಿ ಫೌಂಡೇಶನ್ನ ಯಶವಂತ್, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪೊಟೋ೧೬ಸಿಪಿಟಿ೩: ಚನ್ನಪಟ್ಟಣ ತಾಲೂಕಿನ ಕೋಡಂಬಹಳ್ಳಿ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಸಂಕಲ್ಪ ಮತ್ತು ಪ್ರತಿಜ್ಞಾ ದಿನದ ಅಂಗವಾಗಿ ಸ್ಪೂರ್ತಿ ಸೇವಾ ಫೌಂಡೇಶನ್‌ನಿಂದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.