ವಿದ್ಯಾರ್ಥಿಗಳು ಐತಿಹಾಸಿಕ ಸ್ಮಾರಕಗಳ ಮಹತ್ವ ಅರಿಯಿರಿ: ಜಿಲ್ಲಾಧಿಕಾರಿ

KannadaprabhaNewsNetwork |  
Published : Jan 04, 2025, 12:34 AM IST
ಫೋಟೋ- ವಾಕಥಾನ | Kannada Prabha

ಸಾರಾಂಶ

ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹೇಳಿದರು. ಕಲಬುರಗಿಯಲ್ಲಿ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಕಲಬುರಗಿ ಕೋಟೆ ವರೆಗೆ ಪಾರಂಪರಿಕ ನಡಿಗೆಗೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಐತಿಹಾಸಿಕ ಸ್ಮಾರಕಗಳ ಇತಿಹಾಸ ಮತ್ತು ಅದರ ಮಹತ್ವ ಅರಿತು ಇತರರಿಗೂ ತಿಳಿಸುವ ಕೆಲಸ ವಿದ್ಯಾರ್ಥಿ ಸಮುದಾಯ ಮಾಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಕಲಬುರಗಿ ಕೋಟೆ ವರೆಗೆ ಶುಕ್ರವಾರ ಕೆಕೆಆರ್‌ಡಿಬಿ, ಕಲಬುರಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಇಂಟ್ಯಾಕ್ ಸಂಸ್ಥೆಯ ಸಹಯೋಗದೊಂದಿಗೆ ಜರುಗಿದ ‘ನಮ್ಮ ನಡೆ ಕೋಟೆ ಕಡೆ’ ಘೋಷವಾಕ್ಯದ ಪಾರಂಪರಿಕ ನಡಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಐತಿಹಾಸಿಕ ಸ್ಮಾರಕಗಳು ನಮಗೆ ಹೆಮ್ಮೆ ಇದೆ. ಇಂತಹ ಸ್ಮಾರಕಗಳ ರಕ್ಷಣೆ ಜೊತೆಗೆ ಅಲ್ಲಿ ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಿಲ್ಲೆಯಲ್ಲಿ 30 ಪ್ರವಾಸಿ ತಾಣಗಳ ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರ್ಷ ಕೆಕೆಆರ್‌ಡಿಬಿ ಮಂಡಳಿ ಇಂತಹ ಪ್ರವಾಸಿ ತಾಣಗಳ ಸಂರಕ್ಷಣೆಗೆ 10 ಕೋಟಿ ರು. ಅನುದಾನ ಮೀಸಲಿರಿಸಿದೆ. ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸಲಾಗುವುದು ಎಂದರು.

ಕೋಟೆವರೆಗೆ ವಾಕಥಾನ್: ಶ್ರೀ ಶರಣಬಸವೇಶ್ವರರ ದೇವಸ್ಥಾನದಿಂದ ಲಾಲಗೇರಿ ಕ್ರಾಸ್ ಮಾರ್ಗವಾಗಿ ಕಲಬುರಗಿ ಕೋಟೆ ವರೆಗೆ ಪಾರಂಪರಿಕೆ ನಡಿಗೆಯಲ್ಲಿ

ವಿಶ್ವನಾಥ್ ರೆಡ್ಡಿ ಮುದ್ನಾಳ, ಜಿಮ್ಸ್ ಮೆಡಿಕಲ್ ಕಾಲೇಜ್, ಪಿಡಿಎ ಎಂಜಿನಿಯರಿಂಗ್ ಕಾಲೇಜ್, ಎಂಆರ್‌ಎಂಸಿ ಮೆಡಿಕಲ್ ಕಾಲೇಜು, ಸೋಲಾಪುರದ ಬಸವೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಕೆಸಿಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ನಿವೃತ್ತ ಪ್ರಾಧ್ಯಾಪಕ ಡಾ.ಶಂಭುಲಿಂಗ ವಾಣಿ ಅವರು ನಡಿಗೆಯುದ್ದಕ್ಕೂ ಕೋಟೆ ಇತಿಹಾಸದ ಕುರಿತು ತಿಳಿ ಹೇಳಿದರು.

ನಂತರ ಕಲಬುರಗಿ ಕೋಟೆಯೊಳಗಿನ ರಣಮಂಡಳ, ಜಾಮಿಯಾ ಮಸೀದಿ, ಕೋಟೆ ಸುತ್ತ ಕಂದಕ, ಆನೆಲಯ, ಗುಪ್ತದ್ವಾರ, ಪ್ರವೇಶ ದ್ವಾರ ಹೀಗೆ ನಾನಾ ಸ್ಥಳಗಳನ್ನು ವೀಕ್ಷಿಸಲಾಯಿತು.

ಇಂಟ್ಯಾಕ್ ಸಂಸ್ಥೆಯ ಡಾ.ಶಂಭುಲಿಂಗ ವಾಣಿ ಮಾತನಾಡಿ, 800 ವರ್ಷದ ಹಳೆಯ ಈ ಕೋಟೆ ರಾಜಾ ಗುಲಚಂದ್ ನಿರ್ಮಿಸಿದರು. 1346ರಲ್ಲಿ ಬಹಮನಿ ಸುಲ್ತಾನರು ಈ ಕೋಟೆ ವಶಪಡಿಸಿ ಅಧಿಕಾರ ಅರಂಭಿಸಿದರು. ಕೋಟೆ 3 ಕಿ.ಮೀ ಸುತ್ತಳತೆ ಇದ್ದು, ಶತ್ರುಗಳು ಬಾರದಂತೆ 15 ಅಡಿ ಅಳ, 30 ಅಡಿ ಅಗಲ ಸುತ್ತ ನೀರಿನ ಕಂದಕ ನಿರ್ಮಿಸಿ ನೀರಿನಲ್ಲಿ ಜಲಚರ ಪ್ರಾಣಿ ಬಿಡುತ್ತಿದ್ದರು. ಎರಡು ಗೋಡೆ ಒಳಗೊಂಡ 26 ತೋಪುಗಳಿವೆ. 8 ಗುಪ್ತ ದ್ವಾರಗಳಿವೆ ಎಂದ ಅವರು ಕಲಬುರಗಿ ಜೊತೆಗೆ ಎರಡನೇ ರಾಜಧಾನಿಯಾಗಿ ಫಿರೋಜಾಬಾದ ಘೋಷಿಸಿಕೊಂಡಿದ್ದರು ಎಂದು ಕೋಟೆ ಇತಿಹಾಸ ಹೇಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಅನುಸುಯಾ ಹೂಗಾರ, ಕೃಷಿ ಸಹಾಯಕ ನಿರ್ದೇಶಕ ಚಂದ್ರಕಾಂತ ಜೀವಣಗಿ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!