ಕನ್ನಡಪ್ರಭ ವಾರ್ತೆ ಹಿರಿಯೂರು
ಉತ್ತಮ ಭವಿಷ್ಯ ಮತ್ತು ಸುಭದ್ರ ಜೀವನಕ್ಕಾಗಿ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳ ಕಡೆ ಗಮನಹರಿಸಬೇಕು ಎಂದು ಬಸವರಾಜ್ ಎಜುಕೇಷನ್ ಟ್ರಸ್ಟ್ ನ ಕಾರ್ಯದರ್ಶಿ ಎಸ್.ಬಿ.ಸಚಿನ್ ಗೌಡ ಕಿವಿಮಾತು ಹೇಳಿದರು.ನಗರದ ಹೊರವಲಯದಲ್ಲಿರುವ ಶ್ರೀ ಬಸವರಾಜ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸ್ವಾಗತ ಹಾಗೂ ಕಲಾಸಿರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕು ಕಟ್ಟಿಕೊಳ್ಳುವಂತಹ ದಾರಿ ತೋರುವ ಕೋರ್ಸ್ಗಳ ಕಡೆ ವಿದ್ಯಾರ್ಥಿ ಸಮೂಹ ಗಮನಹರಿಸುವ ಅವಶ್ಯಕತೆ ಇದೆ. ಜ್ಞಾನಾರ್ಜನೆಯ ಜೊತೆಗೆ ವಿದ್ಯಾರ್ಥಿಗಳು ಕುಟುಂಬದ ನಿರ್ವಹಣೆಗಾಗಿಯೂ ಉದ್ಯೋಗ ನೀಡುವ ವೃತ್ತಿಪರ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಶಿಸ್ತುಬದ್ಧ ವ್ಯಾಸಂಗ, ನಿರಂತರ ಪರಿಶ್ರಮ, ಶ್ರದ್ಧೆಯಿಂದ ಮಾತ್ರ ಸಾಧನೆ ಸಾಧ್ಯ ಎಂಬುದನ್ನು ವಿದ್ಯಾರ್ಥಿ ಗಳು ಅರಿತಿರಬೇಕು ಎಂದರು.ಪ್ರಾಂಶುಪಾಲ ಸಂದೀಪ್ ಯಾದವ್ ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ಸಮಯವನ್ನು ವ್ಯರ್ಥ ಮಾಡದೇ ಉತ್ತಮ ಶಿಕ್ಷಣ ಪಡೆಯುವತ್ತ ಸಾಗಬೇಕು. ಭವಿಷ್ಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವಂತಹ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದರು.
ಇದೇ ವೇಳೆ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಉಡುಗೊರೆ ನೀಡಿ ಸ್ವಾಗತಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಈ ಸಂದರ್ಭದಲ್ಲಿ ಬಸವರಾಜ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ಮಂಜುಳ ಬಸವರಾಜ್, ಸಂಸ್ಥೆಯ ಟ್ರಸ್ಟಿಗಳಾದ ಶ್ರೀರಂಗಸ್ವಾಮಿ, ಶಾಂತಮ್ಮ, ಪ್ರಾಂಶುಪಾಲ ಮುನಿಸ್ವಾಮಿ, ರಮಿತಾ ವಿಜಯ್, ಉಪನ್ಯಾಸಕರಾದ ರಾಧಿಕಾ, ದಿವ್ಯಶ್ರೀ, ಲಾವಣ್ಯ, ಹರ್ಷಿತಾ, ಕೀರ್ತನ, ಅಮಿತ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.