ಕನ್ನಡಪ್ರಭ ವಾರ್ತೆ ಹಿರಿಯೂರು
ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಒ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬಿಳೂರ್ ಮಾತನಾಡಿ, ಬಡಜನರ ಮಕ್ಕಳಿಗೆ ಶಿಕ್ಷಣವನ್ನು ಖಾತ್ರಿಪಡಿಸಬೇಕಿದ್ದ ಸರ್ಕಾರವೇ ಶಿಕ್ಷಣದ ವ್ಯಾಪಾರಕ್ಕೆ ನಿಂತಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಹಳ್ಳಿಯ ಶಾಲೆಗಳನ್ನು ಮುಚ್ಚುತ್ತಿದೆ.
ಕೆಪಿಎಸ್ ಶಾಲೆಗಳ ಮೇಲುಸ್ತುವಾರಿಯನ್ನು ಹೊರಗುತ್ತಿಗೆ ಕೊಡುವುದರ ಮೂಲಕ ಸಾರ್ವಜನಿಕ ಶಿಕ್ಷಣವನ್ನು ಹಂತ-ಹಂತವಾಗಿ ಖಾಸಗಿ ಕಂಪನಿಗಳಿಗೆ ಧಾರೆಯೆರೆಯುವ ಹುನ್ನಾರ ಮಾಡಲಾಗಿದೆ. ಈಶ್ವರಚಂದ್ರ ವಿದ್ಯಾಸಾಗರ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ, ಕುದ್ಮುಲ್ ರಂಗರಾವ್ ಮುಂತಾದವರ ಹೋರಾಟದಿಂದ ಇಂದು ನಮ್ಮ ನಾಡಿನ ಎಲ್ಲ ಮಕ್ಕಳಿಗೆ ಶಿಕ್ಷಣ ದೊರೆಯುತ್ತಿದೆ. ಈ ಮಹನೀಯರಿಗೆ ಅವಮಾನ ಮಾಡಿ ಸರ್ಕಾರವು ಶಾಲೆಗಳನ್ನು ಮುಚ್ಚುತ್ತಿದೆ. ಇಂತಹ ಶಾಲೆಗಳನ್ನು ಮುಚ್ಚುವುದು ಬಡಮಕ್ಕಳ ಭವಿಷ್ಯವನ್ನಷ್ಟೇ ಅಲ್ಲದೇ ಹಳ್ಳಿಗಳನ್ನೇ ಕತ್ತಲೆಗೆ ದೂಡಿದಂತೆ. ಸರ್ಕಾರದ ಈ ನೀತಿಯು ಕಡು ಜನವಿರೋಧಿಯಾಗಿದೆ ಎಂದರು.ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಕಾರ್ಯದರ್ಶಿ ಕಣುಮಪ್ಪ ಮಾತನಾಡಿ, ನಮ್ಮೂರ ಶಾಲೆ ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ. ನಮಗೆ ಕೆಪಿಎಸ್ ಶಾಲೆ ಬೇಡ. ನಮ್ಮೂರಿನ ಬಡ ಮಕ್ಕಳು ದೂರ ಹೋಗಿ ಓದಲು ಸಾಧ್ಯವಿಲ್ಲ. ಸರ್ಕಾರದ ಈ ಕರಾಳ ಕೆಪಿಎಸ್ ಯೋಜನೆ ವಿರುದ್ಧ ನಾವು ಹೋರಾಟ ನಡೆಸುತ್ತೇವೆ. ನಾವು ಜೀವ ಕೊಟ್ಟಾದರೂ ಸರಿ ನಮ್ಮೂರ ಶಾಲೆ ಉಳಿಸಿಕೊಳ್ಳುತ್ತೇವೆ ಎಂದರು.
ಎಸ್ ಡಿಎಂಸಿ ಅಧ್ಯಕ್ಷೆ ವನಜಾಕ್ಷಿ ಮಾತನಾಡಿ, ನಮ್ಮೂರಲ್ಲಿ ಶಾಲೆ ಬೇಕೇ ಬೇಕು. ಎಷ್ಟೇ ಮಕ್ಕಳಿದ್ದರೂ ಸರ್ಕಾರ ಶಾಲೆ ಮುಚ್ಚಬಾರದು. ನಮ್ಮ ಚಿಕ್ಕ ಹೆಣ್ಣು ಮಕ್ಕಳನ್ನು ದೂರ ಕಳಿಸಲು ಭಯವಾಗುತ್ತದೆ. ಅವರ ರಕ್ಷಣೆಯ ಜವಾಬ್ದಾರಿ ಯಾರು ತೆಗೆದುಕೊಳ್ಳುತ್ತಾರೆ? ಕೆಪಿಎಸ್ ಯೋಜನೆಗೆ ನಮ್ಮ ಧಿಕ್ಕಾರವಿದೆ ಎಂದರು.