ಕುಂದಗೋಳ:
ತಾಲೂಕಿನ ಚಾಕಲಬ್ಬಿ-ಕೊಂಕಣ ಕುರಹಟ್ಟಿ ಮಾರ್ಗದ ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಲೋಕೋಪಯೋಗಿ ಇಲಾಖೆ ಕಚೇರಿಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.ಗುರುವಾರ ಚಾಕಲಬ್ಬಿಗೆ ಹುಬ್ಬಳ್ಳಿಯಿಂದ ಬಸ್ ಬಂದಿತ್ತು. ಆದರೆ ಕುಂದಗೋಳಕ್ಕೆ ಬರಬೇಕಾದ ಸಾರ್ವಜನಿಕರು, ವಿದ್ಯಾರ್ಥಿಗಳೆಲ್ಲ ಸೇರಿಕೊಂಡು 200ಕ್ಕೂ ಹೆಚ್ಚು ಜನ ಇದ್ದರು. ಹೀಗಾಗಿ ಕೆಲಹೊತ್ತು ಗ್ರಾಮದಲ್ಲೇ ಬಸ್ ತಡೆದು ನಿಲ್ಲಿಸಲಾಗಿತ್ತು. ಕೊನೆಗೆ ಅದೇ ಬಸ್‌ನಲ್ಲೇ ಎಲ್ಲರೂ ಹತ್ತಿ ಕುಂದಗೋಳಕ್ಕೆ ಹೋದರು. ಅಲ್ಲಿ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಚಾಕಲಬ್ಬಿ-ಕೊಂಕಣ ಕುರಹಟ್ಟಿ ಮಾರ್ಗ ಸರಿಯಿಲ್ಲ. ಅದು ಸರಿಯಾದರೆ ಹೆಚ್ಚುವರಿ ಬಸ್ ಬಿಡಬಹುದು. ನವಲಗುಂದ, ಕುಂದಗೋಳದಿಂದಲೂ ಬಸ್‌ಗಳನ್ನು ಬಿಡಬಹುದು ಎಂದು ತಿಳಿಸಿದರು.
ಅಲ್ಲಿಂದ ನೇರವಾಗಿ ಪಿಡಬ್ಲ್ಯೂಡಿ ಇಲಾಖೆಗೆ ತೆರಳಿದ ವಿದ್ಯಾರ್ಥಿಗಳ ತಂಡ, ಕಚೇರಿಯೊಳಗೆ ತೆರಳಿತು. ಪುಸ್ತಕ-ಪೆನ್ನು ಹಿಡಿದು ಅಧ್ಯಯನ ನಡೆಸಲು ಆರಂಭಿಸುವ ಮೂಲಕ ವಿನೂತನವಾಗಿ ಧರಣಿ ನಡೆಸಿದರು. ತಮ್ಮೂರಿನ ರಸ್ತೆ ದುರಸ್ತಿ ಮಾಡಿ ಪುಣ್ಯ ಕಟ್ಕೊಳ್ಳಿ. ರಸ್ತೆಯಾದರೆ ಬಸ್ ಬಿಡುತ್ತಾರೆ. ಇಲ್ಲಂದ್ರೆ ನಾವು ಹೇಗೆ ಶಾಲೆ- ಕಾಲೇಜಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ನವಲಗುಂದ ಹಾಗೂ ಕುಂದಗೋಳ ಡಿಪೋದಿಂದ ಚಾಕಲಬ್ಬಿಗೆ ಬಸ್ ಬಿಟ್ಟರೆ ಸಮಸ್ಯೆ ಇರಲ್ಲ. ಈ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆ ಕ್ರಮಕೈಗೊಳ್ಳಬೇಕು ಎಂಬ ಆಗ್ರಹ ವಿದ್ಯಾರ್ಥಿಗಳದ್ದು.ನಂತರ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಸುಧಾಕರ ಭಾಗೇವಾಡಿ ಮಾತನಾಡಿ. ಚಾಕಲಬ್ಬಿ-ಕೊಂಕಣ ಕುರಹಟ್ಟಿ ರಸ್ತೆಗೆ ಅನುದಾನ ಬಿಡುಗಡೆಯಾಗಿದೆ. ಆದರೆ ತಾಂತ್ರಿಕ ತೊಂದರೆಯಿಂದಾಗಿ ಕೆಲಸ ಆರಂಭವಾಗಿಲ್ಲ. ಶೀಘ್ರದಲ್ಲೇ ಕೆಲಸ ಶುರು ಮಾಡಿಸಲಾಗುವುದು. ಅದು ಪೂರ್ಣವಾಗಬೇಕೆಂದರೆ ಒಂದೆರಡು ತಿಂಗಳು ಬೇಕಾಗುತ್ತದೆ. ಸದ್ಯ ತಾತ್ಕಾಲಿಕವಾಗಿ ಗೊರಚು ಹಾಕಿ ರಸ್ತೆಯ ತೆಗ್ಗು ಗುಂಡಿ ಸರಿಪಡಿಸುತ್ತೇವೆ. ಬಸ್ ಓಡಾಡಲು ಸಮಸ್ಯೆಯಾಗಲ್ಲ ಎಂದು ಭರವಸೆ ನೀಡಿದರು.
ಬಳಿಕವಷ್ಟೆ ವಿದ್ಯಾರ್ಥಿಗಳು ಪ್ರತಿಭಟನೆಯಿಂದ ಹಿಂದೆ ಸರಿದರು. ಆದರೆ ಯಾವೊಬ್ಬ ವಿದ್ಯಾರ್ಥಿಯೂ ಕಾಲೇಜಿಗೆ ತೆರಳಲು ಸಾಧ್ಯವಾಗಲಿಲ್ಲ. ಪಿಡಬ್ಲ್ಯೂಡಿ ಕಚೇರಿಯಲ್ಲಿ ತಮ್ಮ ಅಧ್ಯಯನ ನಡೆಸಿದರು.ವಿದ್ಯಾರ್ಥಿಗಳ ಪ್ರತಿಭಟನೆಗೆ ಗ್ರಾಪಂ ಅಧ್ಯಕ್ಷೆ ಕಾವ್ಯಾ ಬಾರಕೇರ, ಸದಸ್ಯರಾದ ವಿಠ್ಠಲ ಘಾಟಗೆ, ಮುತ್ತಪ್ಪ ಕಟಗಿ, ದೇವಕ್ಕ ಕಾಳಿ, ಗ್ರಾಮಸ್ಥರಾದ ಯಲ್ಲಪ್ಪ ಬಾರಕೇರ, ದೇವಪ್ಪ ಕಾಳಿ ಸೇರಿದಂತೆ ಹಲವರು ಸಾಥ್ ನೀಡಿದರು,. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಅಜಯ ಪೂಜಾರ, ಮಲ್ಲಿಕಾರ್ಜುನ ಹೊನ್ನಿಹಳ್ಳಿ, ಮಾಲತೇಶ ಮೆಗುಂಡಿ, ಪ್ರಶಾಂತ ಭಸಮ್ಮನವರ, ಯಲ್ಲಮ್ಮ ಮತ್ತಿಗಟ್ಟಿ, ಅನ್ಯನಾ ದೊಡಮನಿ, ಶ್ಯಾಮಿಯಾ ಮೇಣಸಿನಕಾಯಿ, ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.