ಕೂಡ್ಲಿಗಿ: ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಗುರಿ ಇಟ್ಟುಕೊಂಡು ಬಂದಿರುವ ಬಿಎಸ್ಸಿ ನರ್ಸಿಂಗ್, ಜಿಎನ್ಎಂ, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ, ವೃತ್ತಿ ಮೌಲ್ಯಗಳು ಸೇರಿದಂತೆ ಸೇವಾ ಮನೋಭಾವ ರೂಢಿಸಿಕೊಂಡಲ್ಲಿ ಮಾತ್ರ ನೀವು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಹೊಂದಲು ಸಾಧ್ಯ ಎಂದು ಯಡಿಯೂರು ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎಂ. ರವಿಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಆರೋಗ್ಯ ಇಲಾಖೆಯಲ್ಲಿ ರೋಗಿಗಳ ಜೊತೆ ಉತ್ತಮ ಬಾಂಧವ್ಯ, ಅವರ ಜೊತೆಗಿನ ನಿಮ್ಮ ವರ್ತನೆ ತಮ್ಮ ಕುಟುಂಬದ ಸದಸ್ಯರಂತೆ ಇರಬೇಕು. ಆಗ ರೋಗಿಗಳಿಗೆ ಔಷಧಿಕ್ಕಿಂತ ನಿಮ್ಮ ಮಾತುಗಳು, ನಡೆ- ನುಡಿ ಹಾರೈಕೆಯೇ ರೋಗಿಗಳನ್ನು ವಾಸಿ ಮಾಡುತ್ತದೆ ಎಂದರು.
ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಮಾದರಿಯಾಗುವ ಹಾಗೇ ಸಮಾಜದಲ್ಲಿ ನೀವು ನಡೆದುಕೊಳ್ಳಬೇಕೆಂದರು.ಕಾರ್ಯಕ್ರಮ ಉದ್ಘಾಟಿಸಿದ ಡಾ.ಶಿವಮೂರ್ತಯ್ಯ ಮಾತನಾಡಿ, ನೀವು ಯಾರನ್ನು ಮಾದರಿಯಾಗಿ ಇಟ್ಟುಕೊಳ್ಳಬೇಡಿ. ನೀವೇ ಇನ್ನೊಬ್ಬರಿಗೆ ಮಾದರಿಯಾಗುವಂತೆ ಸಾಧನೆ ಮಾಡಿ ತೋರಿಸಬೇಕು. ವ್ಯಕ್ತಿಗಳು ವಿಭಿನ್ನ ಅಭಿರುಚಿ, ಹವ್ಯಾಸಗಳು, ಕಲೆಗಳನ್ನು ಹೊಂದಿರುತ್ತಾರೆ. ಹೀಗಾಗಿ ಇನ್ನೊಬ್ಬರಿಗೆ ಹೋಲಿಕೆ ಮಾಡದೇ ನಿಮ್ಮ ಹಾದಿಯಲ್ಲಿಯೇ ಉತ್ತಮ ಹೆಜ್ಜೆಗಳನ್ನು ಇಡಿ. ನಿರಂತರ ಓದುವ ಮೂಲಕ ತಿಳಿಯುವ ಕುತೂಹಲ ಬೆಳೆಸಿಕೊಂಡು ಓದಿದರೆ ನಿಮ್ಮ ಗುರಿ ಮುಟ್ಟುತ್ತೀರಿ ಎಂದರು.