2023-24ನೇ ಶೈಕ್ಷಣಿಕ ವರ್ಷದಲ್ಲಿ ರ್‍ಯಾಂಕ್‌ಗಳಿಸಿದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ವಿಜ್ಞಾನ, ತಂತ್ರಜ್ಞಾನ, ಮಾನವಿಕ ಸೇರಿದಂತೆ ವಿವಿಧ ಜ್ಞಾನಶಿಸ್ತುಗಳಿಗೆ ಸಂಬಂಧಿಸಿದ ಆಳವಾದ ಜ್ಞಾನ ಆಧಾರಿತ ತಾರ್ಕಿಕ ಚಿಂತನೆಯ ಬಲದಲ್ಲಿ ದೇಶದ ರಚನಾತ್ಮಕ ಬೆಳವಣಿಗೆಯ ಸಂಪನ್ಮೂಲಗಳಾಗಿ ರೂಪುಗೊಳ್ಳುವುದರ ಕಡೆಗೆ ವಿದ್ಯಾರ್ಥಿ ಸಮೂಹ ಗಮನ ಕೇಂದ್ರೀಕರಿಸಬೇಕು ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ಶನಿವಾರ ನಡೆದ ಎಸ್‌ಡಿಎಂ ಕಾಲೇಜು ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದದರು.ಪದವೀಧರರಾದ ತಕ್ಷಣ ಕಲಿಕೆಯ ಯಾನ ನಿಲ್ಲುವುದಿಲ್ಲ. ಕಲಿಕೆಯ ಶ್ರದ್ಧೆ ಮತ್ತು ಜ್ಞಾನಾರ್ಜನೆಯ ಹೆಜ್ಜೆಗಳು ನಿರಂತರವಾಗಿರುತ್ತವೆ. ಇದನ್ನು ಅರ್ಥೈಸಿಕೊಂಡು ವಿವಿಧ ಕ್ಷೇತ್ರಗಳ ಕುರಿತು ವಿಸ್ತೃತ ಜ್ಞಾನ ಪಡೆದು ದೇಶಕ್ಕೆ ಬೇಕಾದ ರಚನಾತ್ಮಕ ಮೌಲಿಕ ಸಂಪನ್ಮೂಲಗಳಾಗಿ ಯುವಸಮೂಹ ರೂಪುಗೊಳ್ಳಬೇಕು. ಹಾಗಾದಾಗ ಮಾತ್ರ ದೇಶದ ಪ್ರಗತಿಯ ಹೆಜ್ಜೆಗಳಿಗೆ ವೇಗ ದಕ್ಕುತ್ತದೆ ಎಂದರು.ಘಟಿಕೋತ್ಸವ ಭಾಷಣ ಮಾಡಿದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ, ಮುಂದಿನ ಮೂರು ದಶಕಗಳ ಅವಧಿಯಲ್ಲಿ ಕೌಶಲ್ಯಾಧಾರಿತ ಶಿಕ್ಷಣ ಮತ್ತು ಬೌದ್ಧಿಕ ಸಾಮರ್ಥ್ಯವೇ ನಿರ್ಣಾಯಕವಾಗಲಿದೆ ಎಂದರು.
ತಂತ್ರಜ್ಞಾನವು ಅಭಿವೃದ್ಧಿಗೊಂಡ ತಕ್ಷಣವೇ ವಾಣಿಜ್ಯೀಕೃತಗೊಳ್ಳಬಾರದು. ಶಾಶ್ವತವಾದ ಸಾಮಾಜಿಕ ಸದುಪಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಹೆಚ್ಚು ಸಂಶೋಧನೆ ನಡೆಯಬೇಕು. ತದನಂತರದ ದಿನಗಳಲ್ಲಿ ವಾಣಿಜ್ಯಿಕ ಪ್ರಯೋಜನಕ್ಕೆ ತಂತ್ರಜ್ಞಾನವನ್ನು ಅನ್ವಯಿಸಬೇಕು ಎಂದರು.ಪದವೀಧರರು ಮತ್ತು ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್. ಧರ್ಮ, ಪದವೀಧರರೆಲ್ಲರೂ ವಿದೇಶಕ್ಕೆ ಹೋಗುವ ಬದಲು ಭಾರತದಲ್ಲಿಯೇ ಉಳಿದುಕೊಂಡು ಸಾಧನೆಯ ಹೆಜ್ಜೆಗಳನ್ನು ಕ್ರಮಿಸಬೇಕು ಎಂದರು.ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್, ಡಾ.ಸತೀಶ್ವಂದ್ರ ಎಸ್., ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ, ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ., ಉಪಪ್ರಾಂಶುಪಾಲ ಡಾ.ಕೆ.ಎನ್.ಶಶಿಶೇಖರ ಕಾಕತ್ಕರ್ ಇದ್ದರು.ಡಾ.ನೆಫೀಸತ್ ಪಿ., ಸ್ವಾತಿ ಬಿ. ನಿರೂಪಿಸಿದರು. ಎಸ್‌ಡಿಎಂ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎ.ಕುಮಾರ ಹೆಗ್ಡೆ ಸ್ವಾಗತಿಸಿದರು. ಆಡಳಿತಾತ್ಮಕ ಕುಲಸಚಿವ ಡಾ.ಶಲೀಪ್ ವಂದಿಸಿದರು. 2023-24ನೇ ಶೈಕ್ಷಣಿಕ ವರ್ಷದಲ್ಲಿ ರ್‍ಯಾಂಕ್‌ಗಳಿಸಿದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.