ಕನ್ನಡಪ್ರಭ ವಾರ್ತೆ ತುಮಕೂರು
ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು. ಆ ಕನಸನ್ನು ನನಸು ಮಾಡಿಕೊಳ್ಳುವಂತಹ ಗುರಿ, ಛಲ ಹೊಂದಬೇಕು. ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲೇ ಇದೆ. ನಿಮಗೆ ಆಸಕ್ತಿ ಇರುವ ಕ್ಷೇತ್ರ ಆಯ್ಕೆ ಮಾಡಿಕೊಂಡು ಸಾಧನೆ ಮಾಡಿರಿ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಮಾವೇಶ ಮತ್ರು ಅಭಿನಂದನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆತ್ಮವಿಶ್ವಾಸದಿಂದ ಸಾಧನೆ ಮಾಡಿದರೆ ಯಾವುದೂ ಅಸಾಧ್ಯವಲ್ಲ, ಬದಲಾಗುತ್ತಿರುವ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಬೆಳೆಯಬೇಕು ಎಂದು ಹೇಳಿದರು.ಮನುಷ್ಯ ಮೆಷಿನ್ ಆಗಬಾರದು, ಪ್ರೀತಿ, ಕರುಣೆ ಹೊಂದಿರಬೇಕು. ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ವಿದ್ಯೆ, ಸ್ಥಾನಮಾನ ಪಡೆದ ನಂತರ ಹುಟ್ಟಿದ ಸಮಾಜಕ್ಕೆ ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಸಮಾಜತನಗೆ ಏನು ಮಾಡಿತು ಎನ್ನುವುದಕ್ಕಿಂತ ಸಮಾಜಕ್ಕೆ ತಾನು ಏನು ಮಾಡಿದೆ ಎಂಬ ಪ್ರಶ್ನೆ ಕೇಳಿಕೊಂಡು ನಡೆಯಬೇಕು ಎಂದರು.ವೀರಶೈವ ಲಿಂಗಾಯತ ಸಮಾಜಕ್ಕೆ ತನ್ನದೇ ಆದ ಸಂಸ್ಕೃತಿ, ಪರಂಪರೆ ಇದೆ. ಮಾನವ ಜನ್ಮಕ್ಕೆ ಜಯವಾಗಲಿ, ಸಖಲ ಜೀವಾತ್ಮಗಳಿಗೂ ಲೇಸಾಗಲಿ ಎಂದು ಸಾರಿದ ಸಮಾಜ ನಮ್ಮದು. ನಮ್ಮ ಮಠಗಳು ಅನ್ನ, ಆಶ್ರಯ, ವಿದ್ಯೆ ನೀಡಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾ ಕೊಡುಗೆ ನೀಡಿವೆ. ಇಂತಹ ಶ್ರೇಷ್ಠ ಸಮಾಜದಲ್ಲಿ ಹುಟ್ಟಿದ ನಮ್ಮಲ್ಲಿ ಕೆಲವು ಅಭಿಪ್ರಾಯಬೇಧಗಳಿರಬಹುದು, ಒಳಪಂಗಡಗಳಿಂದಾಗಿ ಸಮಾಜ ವಿಘಟನೆಯಾಗಬಾರದು ನಾವೆಲ್ಲಾ ಒಂದು ಎಂಬ ಭಾವನೆಯಿಂದ ಒಗ್ಗೂಡದಿದ್ದರೆ ಮುಂದಿನ ಪೀಳಿಗೆಗೆ ನಾವು ಅನ್ಯಾಯ ಮಾಡಿದಂತಾಗುತ್ತದೆ ಎಂದು ಸಚಿವ ಈಶ್ವರಖಂಡ್ರೆ ಹೇಳಿದರು.ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಮಾತನಾಡಿ, ಮಕ್ಕಳಿಗೆ ಉತ್ತಮ ವಿದ್ಯೆ ಜೊತೆಗೆ ಸಂಸ್ಕಾರವಂತರನ್ನಾಗಿಯೂ ಬೆಳೆಸಬೇಕು. ಬಸವಣ್ಣನವರು ಹಾಕಿಕೊಟ್ಟ ಮಾರ್ಗ ಅನುಸರಿಸಿಕೊಂಡು ಬರುತ್ತಿರುವ ವೀರಶೈವ ಪರಂಪರೆಯ ಮೌಲ್ಯ ಅರಿತು, ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾ ಬೇರೆಯವರಿಗೆ ಪ್ರೇರಣೆಯಾಗುವಂತೆ ಬಾಳಬೇಕು ಎಂದು ಹೇಳಿದರು.ತಿಪಟೂರು ಶಾಸಕ ಕೆ.ಷಡಕ್ಷರಿ ಮಾತನಾಡಿ, ವಿಶ್ವ ಮಾನವರ ಏಳಿಗೆಗಾಗಿ ಇರುವ ಧರ್ಮ ವೀರಶೈವ ಧರ್ಮ. ಈ ಸಮಾಜಕ್ಕೆ ನಾವು ಏನನ್ನು ಕೊಟ್ಟಿದ್ದೇವೆ ಎಂದು ನಾವೆಲ್ಲಾ ಚಿಂತನೆ ಮಾಡಬೇಕು. ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಸಮಾಜವನ್ನು ಒಡೆಯುತ್ತಿದ್ದೇವೆ. ಹೀಗೆ ಮಾಡುವುದು ಮುಂದಿನ ಪೀಳಿಗೆಗೆ ಶಾಪ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಳಕಳಿ ಇಟ್ಟುಕೊಂಡು ಅವರಿಗೆ ಉನ್ನತ ವಿದ್ಯಾಭ್ಯಾಸ, ಉತ್ತಮ ಬದುಕುಕಟ್ಟಿ ಕೊಡಲು ಸಮಾಜದಲ್ಲಿಒಗ್ಗಟ್ಟು ಸ್ಥಾಪನೆ ಮಾಡಲು ಶ್ರಮಿಸಬೇಕು ಎಂದರು.ಸಿದ್ಧರಬೆಟ್ಟ ರಂಭಾಪುರಿ ಶಾಖಾಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಎಸ್.ಪರಮೇಶ್, ಯೋಜನಾ ಸಚಿವರ ಆಪ್ತ ಕಾರ್ಯದರ್ಶಿ ಸೋಮಶೇಖರ್, ಅಧೀಕ್ಷಕ ಇಂಜಿನಿಯರ್ ಬಿ.ವಿ.ಪಾಲನೇತ್ರಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸೋಮಶೇಖರಯ್ಯ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಗೌರವಾಧ್ಯಕ್ಷ ಬಸವರಾಜು, ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎಚ್. ಜಯಶಂಕರ್, ಜಿಲ್ಲಾಧ್ಯಕ್ಷ ಉಮೇಶ್, ತುಮಕೂರು ತಾಲೂಕು ಅಧ್ಯಕ್ಷ ನಿಜಲಿಂಗಪ್ಪ, ಕಾರ್ಯಾಧ್ಯಕ್ಷ ಎಂ.ಬಿ.ಷಡಾಕ್ಷರಿ, ಪ್ರಧಾನ ಕಾರ್ಯದರ್ಶಿ ಟಿ.ಜೆ. ಜ್ಯೋತಿಪ್ರಕಾಶ್, ಖಜಾಂಚಿ ಬಿ.ಎಸ್.ಮಂಜುನಾಥ್ ಸೇರಿದಂತೆ ಸಂಘದ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.ಈ ವೇಳೆ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಿ ಪ್ರೋತ್ಸಾಹಿಸಲಾಯಿತು.
ಕ್ಯಾಪ್ಶನ್.. ತುಮಕೂರಿನಲ್ಲಿ ನಡೆದ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಮಾವೇಶ ಮತ್ತು ಅಭಿನಂದನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಈಶ್ವರ ಖಂಡ್ರೆ ಮತ್ತಿತರರು ಇದ್ದಾರೆ.