- ಹಿಂದೂ ಮಹಾ ಗಣಪತಿ, ಗಣೇಶೋತ್ಸವದ ಅಂಗವಾಗಿ ’ವಿಜಯ ಸಿಂಧೂರ’ ವಿಶೇಷ ಉಪನ್ಯಾಸ
ರಾಷ್ಟ್ರದಲ್ಲಿ ಹಿಂದೂ ವಿರೋಧಿ ಚಟುವಟಿಕೆ ಹಾಗೂ ಕುತಂತ್ರ ನಡೆಸುವವರ ವಿರುದ್ಧ ಹಿಂದೂ ಸಮಾಜ ಗಟ್ಟಿಯಾಗಿ ನಿಲ್ಲಬೇಕು. ಗಡಿ ಕಾಯುವ ವೀರ ಯೋಧರಂತೆ ದೇಶದಲ್ಲಿ ಹಿಂದುತ್ವದ ಉಳಿವಿಗೆ ಸರ್ವರು ಒಂದಾಗುವ ಸಂಕಲ್ಪ ಮಾಡಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು.
ನಗರದ ಹಿಂದೂ ಮಹಾಗಣಪತಿ 12ನೇ ವರ್ಷದ ಗಣೇಶೋತ್ಸವದ ’ವಿಜಯ ಸಿಂಧೂರ’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಜಗತ್ತಿನಲ್ಲಿ ಹಲವಾರು ಮತ, ಪಂಥಗಳು ಅವರವರ ಧರ್ಮಕ್ಕೆ ಮಾತ್ರ ಸೀಮಿತವಾಗಿವೆ. ಆದರೆ, ಸನಾತನ ಧರ್ಮ ವಿಶ್ವಧರ್ಮವಾಗಿ ಮುನ್ನೆಲೆಯಲ್ಲಿದೆ. ಕುರಾನ್ ಮತ್ತು ಬೈಬಲ್ ಆಯಾ ಧರ್ಮ ಗ್ರಂಥವಾದರೆ, ಗ್ರಂಥಾಲಯದಲ್ಲಿರುವ ಪ್ರತಿ ಪುಸ್ತಕಗಳು ಹಿಂದೂಗಳ ಸಾರ್ವತ್ರಿಕ ಧರ್ಮ ಗ್ರಂಥಗಳಾಗಿದ್ದು ಅಪ್ಪಿಕೊಳ್ಳುವ ಬಾಹುಗಳು ತೆರೆದಿಡಬೇಕು ಎಂದರು.ಪ್ರಸ್ತುತ ಕಾಲಮಾನದಲ್ಲಿ ಹಿಂದುತ್ವ ಆಪತ್ತಿನಲ್ಲಿದೆ. ಹಿಂದೂವಾದಿಗಳು ಕೈಕಟ್ಟಿ ಕೂಳಿತುಕೊಂಡರೆ ಭವಿಷ್ಯದಲ್ಲಿ ಪ್ರಾಚೀನ ಸಂಸ್ಕೃತಿ ಮರೆಯಾಗುವ ಆತಂಕವಿದೆ. ಹಿಂದುತ್ವವನ್ನು ಬೇರು ಸಮೇತ ಗಟ್ಟಿ ಗೊಳಿಸಲು ಎಲ್ಲೆಡೆ ಬಡಿದೆಬ್ಬಿಸುವ ಕಾರ್ಯ ಮಾಡಬೇಕು. ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.500 ವರ್ಷಗಳ ಶ್ರೀರಾಮ ಮಂದಿರದ ಹೋರಾಟದ ಆಶಯವನ್ನು ಕಳೆದ 11 ವರ್ಷಗಳಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದಿಂದ ಈಡೇರಿಸಿದೆ. ಪ್ರಧಾನಿಗಳು ದೇಗುಲ ಅಥವಾ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದರೆ ಸನಾತನಿ ವ್ಯಕ್ತಿಯಾಗಿ ಹಣೆತುಂಬ ವಿಭೂತಿ, ಸಂಪ್ರದಾಯಿಕ ಉಡುಗೆಯಲ್ಲಿ ತೆರಳಿ ಹಿಂದುತ್ವದ ಸಂಕೇತ ಪ್ರತಿಬಿಂಬಿಸುತ್ತಿದ್ದಾರೆ ಎಂದು ಹೇಳಿದರು.ಎಡಪಂಥಿಯರ ಹಾವಳಿಯಿಂದ ಹಿಂದೂ ಸಂಸ್ಕೃತಿ ಉಳಿಸುವ ಕರ್ತವ್ಯ ಎಲ್ಲರೂ ಮಾಡಬೇಕು. ಹಿಂದುತ್ವ ಹಾಗೂ ಹಿಂದೂ ನಾಯಕರನ್ನು ಹೊಗಳಿದರೆ ಅಪ್ಪಿಕೊಳ್ಳಿ. ಧರ್ಮವನ್ನು ತೆಗಳಿದರೆ ಸಾಕ್ಷಿ ನೀಡ ಬೇಕು ಎಂದು ಎಡಪಂಥಿಯಲ್ಲಿ ಪ್ರಶ್ನಿಸಬೇಕು. ಮುಂದಿನ ಪೀಳಿಗೆಗೆ ಹಿಂದೂ ಸಮಾಜ ಶಾಶ್ವತವಾಗಿ ರಾಷ್ಟ್ರದಲ್ಲಿ ನೆಲೆಯೂರಲು ಒಗ್ಗಟ್ಟಿನ ಅವಶ್ಯವಿದೆ ಎಂದು ತಿಳಿಸಿದರು. ಸ್ವಾತಂತ್ರ್ಯ ಪೂರ್ವದ ನೆಹರು ಸರ್ಕಾರದಲ್ಲಿ ಸೋಮನಾಥ ದೇವಾಲಯವನ್ನು ಮ್ಯೂಸಿಯಂ ಮಾಡಲು ಹೊರಟಿದ್ದರು. ದೇವಾಲಯ ನಿರ್ಮಾಣಕ್ಕೂ ಅನುದಾನ ನೀಡಲಿಲ್ಲ. ಇದನ್ನು ವಿರೋಧಿಸಿ ದೇಶದ ಸಮಸ್ತ ಹಿಂದೂಗಳಿಂದ ದೇಣಿಗೆ ಸಂಗ್ರಹಿಸಿ ದೇಗುಲ ನಿರ್ಮಾಣಗೊಂಡ ಸನ್ನಿವೇಶಗಳು ನಮ್ಮ ಮುಂದಿವೆ ಎಂದು ತಿಳಿಸಿದರು.ಮೋದಿಯವರು ಮೊಟ್ಟ ಮೊದಲು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ರಫೇಲ್ ಯುದ್ಧ ವಿಮಾನಗಳು ಖರೀದಿಸಲು ಮುಂದಾದಾಗ ಇದೇ ಕಾಂಗ್ರೆಸ್ ನಾಯಕರು ವಿರೋಧಿಸಿದ್ದರು. ಆದರೆ, ಆಪರೇಷನ್ ಸಿಂಧೂರ್ ಯಶಸ್ವಿಗೆ ರಫೇಲ್, ಮಿಸೈಲ್‌ಗಳ ಮೂಲಕ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಲು ಸಾಧ್ಯವಾಗಿರುವುದನ್ನು ವಿರೋಧಿಗಳು ಮನಗಾಣಬೇಕು ಎಂದರು.ಕಾಶ್ಮಿರದ ಹಿಮ ಪರ್ವತದಲ್ಲಿ ಪ್ರವಾಸಕ್ಕೆ ತೆರಳಿದ ನಾಗರಿಕರನ್ನು ಧರ್ಮ ಕೇಳಿ ಹತ್ಯೆಗೈದು ಸುಮಂಗಲಿ ಯರ ಸಿಂಧೂರ ಅಳಿಸಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಭಾರತ ಸರ್ಕಾರ ಅತ್ಯಂತ ಕಡಿಮೆ ಅವಧಿ ಯಲ್ಲಿ ಪಾಕಿಸ್ತಾನದ ಓರ್ವ ಪ್ರಜೆಗಳಿಗೆ ಹಾನಿಯಾಗದಂತೆ ಭಾರತದ ಗಡಿ ದಾಟದೇ ಉಗ್ರವಾದಿಗಳ ಅಡಗು ತಾಣಗಳನ್ನು ಧ್ವಂಸಗೊಳಿಸಿ ಪ್ರತೀಕಾರ ತೀರಿಸಿಕೊಂಡಿದೆ ಎಂದು ಹೇಳಿದರು.
ಪವಿತ್ರ ಕ್ಷೇತ್ರದಲ್ಲಿ ತಲೆ ಬುರುಡೆ, ಮೂಳೆಗಳಿವೆ ಎಂದ ಅನಾಮಿಕ ವ್ಯಕ್ತಿ ಹಿನ್ನೆಲೆ ಪರಿಶೀಲಿಸದೇ ರಾಜ್ಯ ಸರ್ಕಾರ ಏಕಾಏಕಿ ತನಿಖೆಗೆ ಆರಂಭಿಸಿತು. ಕೆಲವು ಮೂಳೆ ಸಿಕ್ಕರೂ ಅವು ಕೂಡಾ ಪುರುಷರದಾಗಿತ್ತು. ಅದು ಸಾಲದೇ ಆಳವಾಗಿ ಭೂ ಪರಿಶೀಲನೆಗೆ ಯಂತ್ರ ಬಳಸಿ ಎಸ್‌ಐಟಿ ತನಿಖೆ ಆರಂಭಿಸಿದರೂ ಕೊನೆಗೂ ಅನಾಮಿಕ ವ್ಯಕ್ತಿಯೇ ಸುಳ್ಳು ಕಥೆ ಸಮಾಜದ ಮುಂದೆ ಬಯಲಾಯಿತು ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಹಿಂದೂ ಮಹಾ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಆಟೋ ಶಿವಣ್ಣ ಉಪಸ್ಥಿತರಿದ್ದರು.