ವಿದ್ಯಾರ್ಥಿಗಳು ಪರಿಶ್ರಮಕ್ಕೆ ಹೆಚ್ಚು ಒತ್ತು ನೀಡಬೇಕು: ಡಾ.ಜಿನದತ್ತ

KannadaprabhaNewsNetwork | Published : Jan 13, 2024 1:33 AM

ಸಾರಾಂಶ

ಧಾರವಾಡ ಜೆಎಸ್‌ಎಸ್‌ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿನದತ್ತ ಹಡಗಲಿ ಮಾತನಾಡಿ ವಿದ್ಯಾರ್ಥಿಗಳ ಜೀವನ ಒಂದು ತಪಸ್ಸು ಇದ್ದಂತೆ. ಆ ತಪಸ್ಸು ಎಂದಿಗೂ ಭಂಗವಾಗಬಾರದು. ಅಂದುಕೊಂಡ ಗುರಿಯತ್ತ ಮತ್ತು ಸಾಧನೆಯತ್ತ ಎಲ್ಲರೂ ತಮ್ಮ ಚಿತ್ತ ಹರಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಪರಿಶ್ರಮಪಟ್ಟರೆ ಅಂದುಕೊಂಡ ಗುರಿಯನ್ನು ಸುಲಭವಾಗಿ ತಲುಪಬಹುದು. ಜತೆಗೆ ಜೀವನದಲ್ಲಿ ಸಾಧನೆಯನ್ನೂ ಮಾಡಬಹುದು. ಅದಕ್ಕೆ ವಿದ್ಯಾರ್ಥಿಗಳು ಪರಿಶ್ರಮಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಧಾರವಾಡ ಜೆಎಸ್‌ಎಸ್‌ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿನದತ್ತ ಹಡಗಲಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದಲ್ಲಿ ೨೦೨೩-೨೦೨೪ನೇ ಸಾಲಿನ ಸಾಂಸ್ಕೃತಿಕ, ಎನ್‌ಎಸ್‌ಎಸ್‌ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಜೀವನ ಒಂದು ತಪಸ್ಸು ಇದ್ದಂತೆ. ಆ ತಪಸ್ಸು ಎಂದಿಗೂ ಭಂಗವಾಗಬಾರದು. ಅಂದುಕೊಂಡ ಗುರಿಯತ್ತ ಮತ್ತು ಸಾಧನೆಯತ್ತ ಎಲ್ಲರೂ ತಮ್ಮ ಚಿತ್ತ ಹರಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಆದರ್ಶಯುತ ಬದುಕನ್ನು ರೂಪಿಸಿಕೊಳ್ಳಬೇಕು. ಆದರ್ಶಗಳಿಲ್ಲದ ಬದುಕು, ಸಾಧನೆಯಿಲ್ಲದೆ ಸಾವು ಮತ್ತು ಅರ್ಥವಿಲ್ಲದ ಬದುಕು ನಡೆಸಿದರೆ, ಜೀವನವೆಲ್ಲವೂ ವ್ಯರ್ಥವಾದಂತೆ ಎಂದು ಮನವರಿಕೆ ಮಾಡಿದರು.

ಮಹಿಳೆಯರು ಕೂಡ ತಮ್ಮ ಜೀವನದಲ್ಲಿ ಹಲವಾರು ಗುರಿ ಮತ್ತು ಸಾಧನೆಗಳನ್ನು ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಮಹಿಳೆಯರಿಗೆ ಇಂದು ಅನೇಕ ಕ್ಷೇತ್ರಗಳಲ್ಲಿ ಅವಕಾಶಗಳು ಕೈಬೀಸಿ ಕರೆಯುತ್ತಿವೆ. ಅಂತಹ ಅವಕಾಶಗಳನ್ನು ಅವರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಮಹಿಳೆಯರು ಆಸಕ್ತಿದಾಯಕ ಕ್ಷೇತ್ರಗಳನ್ನು ಕೂಡ ಬೆಳೆಸಿಕೊಳ್ಳಬೇಕು. ಸತತ ಅಧ್ಯಯನದಲ್ಲಿ ನಿರತರಾಗಬೇಕು. ಜತೆಗೆ ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಬೇಕು. ಇದರಿಂದ ನಿಮ್ಮ ಜೀವನದ ದಿಕ್ಕು ಕೂಡ ಬದಲಾಗುತ್ತದೆ. ಅವಕಾಶ ಬಂದಾಗ ಸದ್ಬಳಕೆ ಮಾಡಿಕೊಂಡು ತಾವು ಕೂಡ ಯಶಸ್ಸಿನ ಬೆನ್ನೆರಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ.ಜೆ.ಪಿ.ದೊಡಮನಿ ಮಾತನಾಡಿ, ಇಂದಿನ ಶಿಕ್ಷಣದಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿವೆ. ಹೀಗಾಗಿ ಶಿಕ್ಷಣದಲ್ಲಿ ಸರ್ವತೋಮುಖ ಬೆಳವಣಿಗೆಯಾಗಬೇಕಾದರೆ ಕಲೆ, ಸಾಹಿತ್ಯ, ಸಂಗೀತ ಮತ್ತು ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿನಿಯರು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಭವಿಷ್ಯದ ಬಗ್ಗೆ ಸದಾ ಗುರಿಯನ್ನಿಟ್ಟುಕೊಂಡು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಈ ಮೂಲಕ ತಮ್ಮ ಕಲೆ ಹಾಗೂ ಪ್ರತಿಭೆಯನ್ನು ತೋರಿಸುವ ಮೂಲಕ ಸಾಧನೆಯ ಹೆಜ್ಜೆಯನ್ನಿಡಬೇಕು ಎಂದು ಹೇಳಿದರು.

ಡಾ.ಸುನಂದಾ ಶಿರೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವೈ.ವೈ.ಕೊಕ್ಕನವರ ಪ್ರತಿಜ್ಞಾವಿಧಿ ಬೋಧಿಸಿದರು. ಡಾ.ವಿ.ಆರ್.ದಳವಾಯಿ ಸ್ವಾಗತಿಸಿದರು. ಪ್ರೊ.ಸುಮ.ವೈ.ಎನ್ ಪರಿಚಯಿಸಿದರು. ಕು.ಅಶ್ವಿನಿ ಸೂರ್ಯವಂಶಿ ಪ್ರಾರ್ಥಿಸಿದರು. ಎಸ್.ಆರ್.ಹಂದಿಗುಂದ ವಂದಿಸಿದರು. ಈ ವೇಳೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Share this article