ಕನ್ನಡಪ್ರಭ ವಾರ್ತೆ ಸುತ್ತೂರು
ಸಮಾರೋಪ ಭಾಷಣ ಮಾಡಿದ ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ನಿರ್ಣಯ ಮಂಡಲಿಯ ಕಾರ್ಯದರ್ಶಿ ಮಲ್ಲೇಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ, ಆಸಕ್ತಿ, ಓದುವ ಛಲ ಇರಬೇಕು. ಯುವ ಶಕ್ತಿ, ಭಾರತದ ಶಕ್ತಿಯಾಗಿದ್ದು, ಭಾರತವು ಇಂದು ವಿಶ್ವಗುರುವಾಗುವತ್ತಾ ಸಾಗುತ್ತಿದೆ. ಇಂದಿನ ವಿದ್ಯಾರ್ಥಿಗಳು ವಿಕಸಿತ ಭಾರತದ ಪ್ರಜೆಗಳಾಗುವ ಭಾಗ್ಯ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಮುಖ್ಯಅತಿಥಿಯಾಗಿದ್ದ ಮೈಸೂರು ನಗರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಯಪ್ಪ ಹೊನ್ನಾಳಿ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಲ್ಲಿ ಮೌಲ್ಯಯುತವಾದ ಜೀವನವನ್ನು ರೂಢಿಸಿಕೊಳ್ಳಬೇಕು. ಪ್ರತಿಯೊಬ್ಬರು ಜೀವನದ ಗುರಿಯೆಡೆಗೆ ಸಾಗಬೇಕು. ಸಮಯವನ್ನು ಅಲಕ್ಷ್ಯ ಮಾಡಿದರೆ ಸಮಯವು ನಿಮ್ಮನ್ನು ಅಲಕ್ಷ್ಯ ಮಾಡುತ್ತದೆ ಎಂಬುದನ್ನು ಅರಿತು ಸುಂದರವಾದ ಬದುಕನ್ನು ರೂಢಿಸಿಕೊಳ್ಳಬೇಕು. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ತನ್ನಂತೆ ಎಂದು ನೋಡುವುದೇ ನಿಜವಾದ ಶಿಕ್ಷಣ. ಮಾರ್ಕ್ಸ್ ಗಿಂತ ರಿಮಾರ್ಕ್ಸ್ ಇಲ್ಲದ ಜೀವನ ಮುಖ್ಯ ಎಂಬುದನ್ನು ಅರಿತು ಪ್ರತಿಯೊಬ್ಬರು ಹಣದ ಮಾಲೀಕನಾಗದೆ, ಗುಣದ ಮಾಲೀಕನಾಗಬೇಕು ಎಂದರು.ಕೀಳನಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಾಲಂಗಿ ಸುರೇಶ್ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಸುತ್ತೂರು ಶ್ರೀಕ್ಷೇತ್ರದಲ್ಲಿನ ತಮ್ಮ ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿಕೊಂಡು ಸುತ್ತೂರು ಶಾಲೆಯು ಸ್ವತಂತ್ರವಾಗಿ ಬದುಕುವ, ಧೈರ್ಯ ಸಂಸ್ಕಾರಗಳನ್ನು ಕಲಿಸಿಕೊಡುವುದರಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಂಸ್ಕಾರಯುತ ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಿ ಎಂದರು.
ಮೈಸೂರಿನ ಡಿಡಿಪಿಐ ಕಚೇರಿಯ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಕೆ. ಸುರೇಶ್ ಮಾತನಾಡಿ, ಸುತ್ತೂರು ಶ್ರೀಕ್ಷೇತ್ರವು ಅನ್ನ, ಅಕ್ಷರ, ಆರೋಗ್ಯ ದಾಸೋಹಕ್ಕೆ ಹೆಸರುವಾಸಿಯಾಗಿದೆ. ತಂತ್ರಜ್ಞಾನದ ಜೊತೆಯಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ಬೆಳೆಸಿಕೊಂಡಾಗ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಪ್ರತಿಯೊಬ್ಬರಿಗೂ ಸಮಯ ಪ್ರಜ್ಞೆ ಅವಶ್ಯಕ ಎಂದರು.ಶಾಲಾ ಶೈಕ್ಷಣಿಕ ಹಾಗೂ ಕ್ರೀಡಾ ವರದಿಯನ್ನು ಮಂಡಿಸಿದರು. ಪ್ರತಿಭಾನ್ವಿತ ಹಾಗೂ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಸಂಸ್ಥೆಯ ಮುಖ್ಯಸ್ಥರಾದ ಜಿ.ಎಲ್. ತ್ರಿಪುರಾಂತಕ, ವೀರಭದ್ರಯ್ಯ, ಎಂ. ರಾಜಶೇಖರ್, ಜಿ. ಶಿವಮಲ್ಲು, ಮ.ಗು. ಬಸವಣ್ಣ, ಜಿ.ಎಂ. ಷಡಕ್ಷರಿ, ಜಿ. ಶಿವಸ್ವಾಮಿ ಹಾಗೂ ಪಿ. ಸುಶೀಲ ಇದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಎಂ. ಮಲ್ಲೇಶ್ ಸ್ವಾಗತಿಸಿದರು. ಎನ್. ನಾಗಲಕ್ಷ್ಮಿ ವಂದಿಸಿದರು, ಕೆ.ಎಂ. ಬಿಂದು ನಿರೂಪಿಸಿದರು.