- ಕಮ್ಮರಡಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ, ಕಾಲೇಜು ವಾರ್ಷಿಕೋತ್ಸವ
ಪ್ರಸ್ತುತ ಕಾಲಘಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ನಾಗಾಲೋಟದಲ್ಲಿ ಓಡುತ್ತಿದೆ. ಪದವಿಪೂರ್ವ ಹಂತ ಮುಗಿದ ಮೇಲೆ ಉನ್ನತ ವ್ಯಾಸಂಗಕ್ಕೆ, ಉದ್ಯೋಗಕ್ಕೆ ಆನ್‌ಲೈನ್‌ನಲ್ಲಿ ಮಾಹಿತಿಗಳು ಲಭ್ಯವಿರುತ್ತದೆ. ವಿದ್ಯಾರ್ಥಿಗಳು ಅವುಗಳನ್ನು ಬಳಸಿಕೊಳ್ಳಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ತಾಲೂಕಿನ ಕಮ್ಮರಡಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಮತ್ತು ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರ ಶಿಕ್ಷಣಕ್ಕೆ ಕೋಟ್ಯಂತರ ರು. ಹಣ ವ್ಯಯಮಾಡುತ್ತಿದೆ. ಪೋಷಕರು ಕಷ್ಟಪಟ್ಟು ನಿಮ್ಮನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಅದಕ್ಕೆಲ್ಲಾ ಸಾರ್ಥಕತೆ ಬರಬೇಕೆಂದರೆ ವಿದ್ಯಾರ್ಥಿಗಳಾದ ನೀವು ಶಿಸ್ತು ಸಂಯಮದೊಂದಿಗೆ ವಿದ್ಯೆ ಕಲಿತು ವಿದ್ಯಾವಂತರಾಗಬೇಕು. ತಂದೆ ತಾಯಿ, ಬೋಧಕರು, ಹಿರಿಯರಿಗೆ ಗೌರವ ಕೊಡಬೇಕು. ಆಗ ಮಾತ್ರ ದೇಶದ ಉತ್ತಮ ಪ್ರಜೆಗಳಾಗುತ್ತೀರಿ " ಎಂದು ಕಿವಿಮಾತು ಹೇಳಿದರು."ವಿದ್ಯೆ ಇಲ್ಲದವರೂ ಕ್ರೀಡೆ, ಸಂಗೀತ ಮುಂತಾದ ಆಸಕ್ತಿಯ ಕ್ಷೇತ್ರಗಳಲ್ಲಿ ಸಾಧನೆಗೆ ಅವಕಾಶ ಇದೆ. ನಮ್ಮ ಸರ್ಕಾರದಿಂದ ನಾವು ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ರಸ್ತೆ, ಕ್ರೀಡಾಂಗಣ, ಶೌಚಾಲಯಗಳಿಗೂ ಅನುದಾನ ಕೊಟ್ಟಿದ್ದೇವೆ. ಕಮ್ಮರಡಿ, ಹರಿಹರಪುರ ರಸ್ತೆ ಅಗಲೀಕರಣ, ಸೇತುವೆ ಅಭಿವೃದ್ಧಿ, ಕಮ್ಮರಡಿ ದೇವಾಲಯ, ಬೀದಿದೀಪ ಮುಂತಾದವುಗಳಿಗೆ ಸಾಕಷ್ಟು ಅನುದಾನ ನೀಡಿದ್ದೇವೆ ಮುಂದೆಯೂ ನೀಡುತ್ತೇವೆ " ಎಂದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.