ಕನ್ನಡಪ್ರಭ ವಾರ್ತೆ ಕುಶಾಲನಗರ
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ಮಡಿಕೇರಿ ಶಾಸಕ ಡಾ.ಮಂಥರ್ ಗೌಡ, ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳಿಗೆ ಮಾತ್ರ ಶಿಕ್ಷಣ ಸೀಮಿತವಾಗಬಾರದು. ವಿದ್ಯಾರ್ಥಿಗಳು ಸರ್ವತೋಮುಖ ಬೆಳವಣಿಗೆ ಹೊಂದುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕೌಶಲ್ಯಗಳನ್ನು ಹಾಗೂ ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವ ಗುಣ ಅಳವಡಿಸಿಕೊಂಡು ಶಿಸ್ತುಬದ್ಧ ಜೀವನ ರೂಢಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಗುರಿ ಸಾಧಿಸಲು ಸಾಧ್ಯ. ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಅವಕಾಶ ವಂಚಿತ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಕೂಡ ಸಂಘ ಸಂಸ್ಥೆಗಳು ಕಾಳಜಿ ವಹಿಸುವಂತಾಗಬೇಕಿದೆ ಎಂದು ಹೇಳಿದರು.ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘದ ಅಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು ಮಾತನಾಡಿ, ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘ ರಾಜಕೀಯ ರಹಿತವಾಗಿ ಸರ್ಕಾರದ ಸೌಲಭ್ಯಗಳನ್ನು ಸಮುದಾಯದ ಎಲ್ಲರಿಗೂ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಿಕೊಂಡು ಬರುತ್ತಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ದೇಶದ ಭವಿಷ್ಯತ್ತಿನ ನಿರ್ಮಾತೃಗಳಾದ ಯುವ ಸಮೂಹದಲ್ಲಿ ಸಾಮಾಜಿಕ ಬದ್ಧತೆ, ಹೊಣೆಗಾರಿಕೆ, ನೈತಿಕತೆ, ಉತ್ತಮ ಸಂಸ್ಕಾರ ಬಿತ್ತನೆ ಮಾಡಬೇಕಿದೆ. ಕೇವಲ ಅಂಕಗಳಿಂದ ಮಾತ್ರ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅಳೆಯುವ ಪರಿಪಾಠ ಕಡಿಮೆಯಾಗಬೇಕಿದೆ. ಎಲ್ಲೆಡೆ ಪ್ರೀತಿ, ವಿಶ್ವಾಸ ಪಸರಿಸುವ ಅನಿವಾರ್ಯತೆ ಎದುರಾಗಿದೆ. ಸಹನೆ, ಪ್ರೀತಿಯ ಸಂದೇಶಗಳನ್ನು ಸಾರಿದ ಏಸುಕ್ರಿಸ್ತ ಹಾಗೂ ಆತನ ಅನುಯಾಯಿಗಳು ಶಾಂತಿ, ಸೌಹಾರ್ದತೆಯ ಮೇಲೆ ಕಲ್ಪಿಸಿದ್ದಾರೆ ಎಂದರು.
ಕ್ರೈಸ್ತ ಸೇವಾ ಸಂಘದ ಕುಶಾಲನಗರ ಘಟಕದ ಅಧ್ಯಕ್ಷ ಎನ್.ಟಿ.ಜೋಸೆಫ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ರೂಬಲ್ ಕೋಟ್ಸ್, ಡಾ.ಪ್ರಣಿತ ಸಲ್ಡಾನ, ರಾಜ್ಯಮಟ್ಟದ ಚೆಸ್ ಆಟಗಾರ ಎ.ಅಗಸ್ಟಿನ್ ಸೇರಿದಂತೆ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸನ್ಮಾನಿಸಿ, ಪ್ರೋತ್ಸಾಹ ಧನ ವಿತರಿಸಲಾಯಿತು.