- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಸನಮುಕ್ತ ದಿನ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ದುಶ್ಚಟಗಳಿಗೆ ದಾಸರಾಗದೆ ಕಲಿಕೆ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಹಶೀಲ್ದಾರ್ ತನುಜಾ ಟಿ.ಸವದತ್ತಿ ಕರೆ ನೀಡಿದರು.ಶುಕ್ರವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದ ಸಹಯೋಗದಲ್ಲಿ ಡಾ.ಮಹಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ನಡೆದ ವ್ಯಸನಮುಕ್ತ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
18 ರಿಂದ 21ನೇ ವಯಸ್ಸು ಪದವಿ ಹಂತದ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಹಂತವಾಗಿದೆ. ಈ ಹಂತದಲ್ಲಿ ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಬಲಿಯಾದರೆ ಅಮೂಲ್ಯ ಜೀವನ ಹಾಳಾಗುತ್ತದೆ. ಮೊಬೈಲ್ ಬಳಕೆ ಯನ್ನು ಆದಷ್ಟು ಕಡಿಮೆ ಮಾಡಿ ಉತ್ತಮ ಪುಸ್ತಕ ಓದುವತ್ತ ಗಮನಹರಿಸಿ. ಉತ್ತಮ ಚಿಂತನೆ ಬೆಳೆಸಿಕೊಂಡು ಆರೋಗ್ಯ ಕಾಪಾಡಿಕೊಂಡು ಪೋಷಕರಿಗೆ, ಗುರುಹಿರಿಯರಿಗೆ ಗೌರವ ತರುವ ಕೆಲಸ ಮಾಡಿ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದರು.ಅಧ್ಯಕ್ಷತೆವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಧನಂಜಯ ಮಾತನಾಡಿ, ಡಾ.ಮಹಂತ ಶಿವಯೋಗಿ ಗಳು ಯುವ ಶಕ್ತಿ ವ್ಯಸನಗಳಿಂದ ಮುಕ್ತರಾಗ ಬೇಕೆಂದು ಆಶಿಸಿದ್ದರು. ಅವರ ಜನ್ಮ ದಿನವನ್ನು ವ್ಯಸನ ಮುಕ್ತ ದಿನವನ್ನಾಗಿ ಆಚರಿಸಲಾಗುತ್ತಿದೆ. ವ್ಯಸನಗಳು ಎಂದರೆ ಕೇವಲ ಮದ್ಯಪಾನ, ದೂಮಪಾನ, ಗಾಂಜಾ, ಮಾದಕ ವಸ್ತುಗಳನ್ನು ಸೇವನೆ ಮಾತ್ರವಲ್ಲ. ಜೀವನಕ್ಕೆ ಹಾನಿಕಾರವಾಗುವ ಎಲ್ಲಾ ವಿಷಯಗಳು ವ್ಯಸನಗಳಾಗುತ್ತವೆ. ನಿರ್ದಿಷ್ಟ ಗುರಿ ಇಲ್ಲದಿರುವುದು. ಮೊಬೈಲ್ ನ್ನು ಅತಿಯಾಗಿ ಬಳಸುವುದು, ಸೋಮಾರಿತನ, ಸಮಯಪಾಲನೆ ಮಾಡದಿರುವುದು, ನಿರ್ಲಕ್ಷ ಮನೋಭಾವ, ಜ್ಞಾನ ಪಡೆಯಲು ಅಡ್ಡಿಯಾಗುವ ಅಂಶಗಳು ಸಹ ವ್ಯಸನ. ವಿದ್ಯಾರ್ಥಿಗಳು ಪ್ರತಿ ನಿತ್ಯ ಆಲೋಚನೆ ಮಾಡಬೇಕು. ಜ್ಞಾನ ಸಂಪಾದನೆಗೆ ಉತ್ತಮ ಪುಸ್ತಕ ಓದುವ, ಬರೆಯುವ, ಕ್ರೀಡೆಯಲ್ಲಿ ತೊಡಗಿ ಉತ್ತಮ ಹವ್ಯಾಸ ಬೆಳೆಸಿಕೊಂಡರೆ ವ್ಯಸನದಿಂದ ಮುಕ್ತವಾಗಬಹುದು. ವಿದ್ಯಾರ್ಥಿಗಳು ತಮ್ಮಲ್ಲಿರುವ ದೌರ್ಬಲ್ಯ ಅರಿತು, ಅದನ್ನು ಮೆಟ್ಟಿನಿಂತು ಕಠಿಣ ಶ್ರಮದಿಂದ ವ್ಯಾಸಂಗ ದಲ್ಲಿ ತೊಡಗಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಆರ್ಥಿಕ ಸಾಕ್ಷರತಾ ಪ್ರಸಾರಕಿ ಸುನಿತಾ ಮಾತನಾಡಿ, ಬ್ಯಾಂಕ್ ನ ವಿವಿಧ ಖಾತೆಗಳು, ಸಾಮಾಜಿಕ ಭದ್ರತಾ ಯೋಜನೆ ಗಳಾದ ಪ್ರಧಾನ ಮಂತ್ರಿ ಜನಧನ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಬಗ್ಗೆ ಮಾಹಿತಿ ನೀಡಿದರು.ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಪ್ರಸಾದ್, ಕನ್ನಡ ವಿಭಾಗದ ಮುಖ್ಯಸ್ಥೆ ಜಿ.ಸವಿತಾ, ಸಮಾಜ ಕಾರ್ಯ ವಿಭಾಗದ ಸಹಪ್ರಾಧ್ಯಾಪಕ ಅಶೋಕ್ ಕುಮಾರ್, ವಿದ್ಯಾರ್ಥಿಗಳಾದ ಸ್ಪೂರ್ತಿ, ಗಾನವಿ, ರತ್ನ ಇದ್ದರು.