ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಲಿ

KannadaprabhaNewsNetwork |  
Published : Nov 21, 2024, 01:04 AM IST
ಮಕ್ಕಳ ದಿನಾಚರಣೆ ಅಂಗವಾಗಿ ಜರುಗಿದ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು ರಾಜ್ಯಮಟ್ಟಕ್ಕೆ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.  | Kannada Prabha

ಸಾರಾಂಶ

ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಲು ಮಕ್ಕಳು ಶಿಕ್ಷಣ ತರಬೇತಿಗಳ ಜೊತೆಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಬೇಕು.

ಬಳ್ಳಾರಿ: ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಲು ಮಕ್ಕಳು ಶಿಕ್ಷಣ ತರಬೇತಿಗಳ ಜೊತೆಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಹೇಳಿದರು.

ಜಿಲ್ಲಾಡಳಿತ, ಜಿಪಂ, ರಾಜ್ಯ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಬಾಲಭವನ ಸಮಿತಿ ಸಂಯುಕ್ತಾಶ್ರಯದಲ್ಲಿ ಜಿಪಂನ ನಜೀರ್ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಫರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಪಂನ ಯೋಜನಾ ನಿರ್ದೇಶಕ ವಿನೋದಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಮಕ್ಕಳಿಗೆ ವಿವಿಧ ಸ್ಪರ್ಧೆಗಳಾದ ಸೃಜನಾತ್ಮಕ ಪ್ರದರ್ಶನ ಕಲೆಗಳಾದ ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ವಾದ್ಯ ಕಲೆಗಳಾದ ವಾದ್ಯ ಸಂಗೀತ, ತಬಲಾ, ಮೃದಂಗ, ಕೀಬೋರ್ಡ್, ಕೊಳಲು, ಡೊಳ್ಳು ಮತ್ತು ನಗಾರಿ. ವಿಜ್ಞಾನದಲ್ಲಿ ಸೃಜನಾತ್ಮಕ ಆವಿಷ್ಕಾರ, ಚಿತ್ರಕಲಾ ಸ್ಪರ್ಧೆ, ಅಂಗವಿಕಲ, ಬುಡಕಟ್ಟು ಪ್ರದೇಶದ ಮಕ್ಕಳಿಗಾಗಿ ವಿವಿಧ ಪ್ರಕಾರ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ತೀರ್ಪುಗಾರರಾಗಿ ಹನುಮಂತ ಬಿ.ವಿ., ಪಲ್ಲವಿ ಕೆ.ಪಿ.ಎಸ್., ವೀಣಾ, ಗಂಗಣ್ಣ ಅವರು ಪಾಲ್ಗೊಂಡಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಜಲಾಲಪ್ಪ ಎ.ಕೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕಿ ವೇದಾವತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಳೆ ನಾಗಪ್ಪ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಮಂಜುನಾಥ, ಗಂಗಮ್ಮ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೋಹನಕುಮಾರಿ ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಗಳಲ್ಲಿ 135 ಮಕ್ಕಳು ಭಾಗವಹಿಸಿದ್ದರು. ವಿಜೇತರಾದ ಮಕ್ಕಳಿಗೆ ಗಣ್ಯರು ಪ್ರಶಸ್ತಿ ಪತ್ರ ನೀಡಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.

ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಕ್ಕಳು

ಸೃಜನಾತ್ಮಕ ಪ್ರದರ್ಶನ ಕಲೆ:

ಶಾಸ್ತ್ರೀಯ ನೃತ್ಯದಲ್ಲಿ ಪೀಪಲ್ಸ್ ಟ್ರೀ ಶಾಲೆಯ ವಿದ್ಯಾರ್ಥಿನಿ ಹಾರಿಕ ಜೇಕ್ಕ ಪ್ರಥಮ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಸೇಂಟ್ ಪೀರ‍್ಸ್ ಶಾಲೆಯ ವಿದ್ಯಾರ್ಥಿನಿ ಗೌರಿ ಸುಜನಾ ದ್ವಿತೀಯ, ಜಾನಪದ ನೃತ್ಯದಲ್ಲಿ ಸರ್ಕಾರಿ ಬಾಲಕಿಯರ ಬಾಲಮಂದಿರದ ವಿದ್ಯಾರ್ಥಿನಿ ಚೈತ್ರಾ ತೃತೀಯ ಸ್ಥಾನ ಪಡೆದಿದ್ದಾರೆ.

ವಾದ್ಯ ಕಲೆ ವಿಭಾಗ:

ಕೊಳಲು ವಿಭಾಗದಲ್ಲಿ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿ ವೀರ ಪಂಚಾಕ್ಷರಿ ಪ್ರಥಮ, ಡೊಳ್ಳು ವಿಭಾಗದ ಸರ್ಕಾರಿ ಬಾಲಕಿಯರ ಬಾಲಮಂದಿರದ ವಿದ್ಯಾರ್ಥಿನಿ ಲಕ್ಷ್ಮಿ ದ್ವಿತೀಯ, ಹಾರ‍್ಮೋನಿಯಂ ವಿಭಾಗದಲ್ಲಿ ನಂದಿ ಶಾಲೆಯ ವಿದ್ಯಾರ್ಥಿ ಇಂದ್ರಾಜ್ ರೆಡ್ಡಿ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನದಲ್ಲಿ ಸೃಜನಾತ್ಮಕ ಆವಿಷ್ಕಾರ:

ಜೆಸಿಬಿ ಯಂತ್ರ ಆವಿಷ್ಕಾರದಲ್ಲಿ ಸರ್ಕಾರಿ ಬಾಲಕರ ಬಾಲಮಂದಿರದ ವಿದ್ಯಾರ್ಥಿ ಕುಮಾರ ಸ್ವಾಮಿ ಪ್ರಥಮ, ನವಗ್ರಹದಲ್ಲಿ ಅಂಬೇಡ್ಕರ್ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿ ಭಾವನ ದ್ವಿತೀಯ, ರಾಕೆಟ್ ನಲ್ಲಿ ಸರ್ಕಾರಿ ಬಾಲಕರ ಬಾಲಮಂದಿರದ ವಿದ್ಯಾರ್ಥಿ ಪವನ ತೃತೀಯ.

ಚಿತ್ರಕಲೆ ವಿಭಾಗದಲ್ಲಿ ಸರ್ಕಾರಿ ಬಾಲಕರ ಬಾಲಮಂದಿರದ ವಿದ್ಯಾರ್ಥಿ ತಿಪ್ಪಣ್ಣ ಪ್ರಥಮ, ಸರ್ಕಾರಿ ಬಾಲಕರ ಬಾಲಮಂದಿರದ ವಿದ್ಯಾರ್ಥಿನಿ ದೇವಮ್ಮ ದ್ವಿತೀಯ, ಎಂ.ಎ.ಕೆ. ಅಜಾದ್ ಶಾಲೆಯ ವಿದ್ಯಾರ್ಥಿನಿ ಅಖಿಲ ತೃತೀಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!