ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ: ಡಾ. ವಿ.ಎಸ್‌.ವಿ. ಪ್ರಸಾದ್‌

KannadaprabhaNewsNetwork | Published : Feb 7, 2024 1:48 AM

ಸಾರಾಂಶ

ಹುಬ್ಬಳ್ಳಿಯ ಕೆಎಲ್‌ಇ ಸೊಸೈಟಿಯ ಎಂ.ಆರ್. ಸಾಖರೆ ಶಾಲೆಯ ಆವರಣದಲ್ಲಿ ಯೂಥ್ ಫಾರ್ ಸೇವಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಚಿಗುರು ಚಿಣ್ಣರ ಮೇಳ ನಡೆಯಿತು.

ಹುಬ್ಬಳ್ಳಿ: ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಲ್ಲಿ ಹಲವಾರು ರೀತಿಯ ಪ್ರತಿಭೆಗಳನ್ನು ಕಾಣಬಹುದು. ಇಲ್ಲಿ ಉತ್ತಮ ರೀತಿಯ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂದು ಸ್ವರ್ಣ ಗ್ರುಪ್ಸ್‌ನ ವ್ಯವಸ್ಥಾಪಕ ನಿರ್ದೆಶಕ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.

ನಗರದ ಕೆಎಲ್‌ಇ ಸೊಸೈಟಿಯ ಎಂ.ಆರ್. ಸಾಖರೆ ಶಾಲೆಯ ಆವರಣದಲ್ಲಿ ಯೂಥ್ ಫಾರ್ ಸೇವಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಚಿಗುರು ಚಿಣ್ಣರ ಮೇಳದಲ್ಲಿ ಅತಿಥಿಗಳಾಗಿ ಮಾತನಾಡಿದರು.

ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಉತ್ತಮ ರೀತಿಯ ಶಿಕ್ಷಣ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ ಎಂದರು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಬಸವರಾಜ ಅನಾಮಿ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾಣ್ನುಡಿಯಂತೆ ಕಲಿಕೆಯಲ್ಲಿ ನಿರಂತರ ಪ್ರಗತಿ ಹೊಂದಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಉತ್ತಮ ರೀತಿಯ ಹೈಟೆಕ್ ಸ್ಪರ್ಶ ನೀಡುವಂತಹ ತರಗತಿಯನ್ನುನಿರ್ಮಿಸಿ ಕೊಡುವಂತಹ ಕೆಲಸವಾಗಬೇಕಿದೆ ಎಂದರು.

ವೈಎಫ್‌ಎಸ್‌ನ ನ್ಯಾಷನಲ್ ವಾಲಿಂಟಿಯರ್ ಮ್ಯಾನೆಜ್‌ಮೆಂಟ್ ಮುಖ್ಯಸ್ಥೆ ಅರುಣಮಯಿ ಜಿ, ಅಧ್ಯಕ್ಷತೆ ವಹಿಸಿದ್ದ ವೈಎಫ್‌ಎಸ್ ಸಲಹಾ ಸಮಿತಿ ಸದಸ್ಯ ಸಂತೋಷ ಪಾಟೀಲ ಮಾತನಾಡಿದರು.

ಡಾ. ಸಂಜಯ ಕೊಟಬಾಗಿ, ವಿಠ್ಠಲ್ ಖಟಾವಕರ, ಪ್ರೊ. ಸಂದೀಪ ಬೂದಿಹಾಳ, ಹುಬ್ಬಳ್ಳಿಯ ಕಿಮ್ಸ್ ಶರೀರಶಾಸ್ತ್ರ ವಿಭಾಗದ ಎಚ್‌ಒಡಿ ಡಾ. ಕೆ.ಎಫ್. ಕಮ್ಮಾರ್, ಜ್ಯೋತಿ ಹೆಗಡೆ, ಶ್ರೇಯಸ್ ನಡಕರ್ಣಿ, ಸೋಮಶೇಖರ ಶಿರಗುಪ್ಪಿ ಸೇರಿದಂತೆ ಹಲವರಿದ್ದರು.

ಚಿಗುರು ಕಾರ್ಯಕ್ರಮದಲ್ಲಿ ಜಿಲ್ಲೆಯ 47 ಸರ್ಕಾರಿ ಶಾಲೆಗಳಿಂದ 1920 ವಿದ್ಯಾರ್ಥಿಗಳು ಒಟ್ಟು 23 ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದರು. 69 ತೀರ್ಪುಗಾರರು ಹಾಗೂ 400ಕ್ಕೂ ಹೆಚ್ಚು ಸ್ವಯಂಸೇವಕರು ಮತ್ತು 150 ಶಿಕ್ಷಕರು ಹಾಗೂ ಎನ್‌ಸಿಸಿ ಕೆಡೆಟ್ಸ್‌ಗಳು ಭಾಗಿಯಾಗಿದ್ದರು.

ಕ್ರೀಡೆ, ಕಲೆ, ನಾಟಕ, ವಿಜ್ಞಾನ ಇತ್ಯಾದಿ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಫರ್ಧೆಗಳಲ್ಲಿ ನೇತಾಜಿ ಸುಭಾಷ ಚಂದ್ರ ಬೋಸ್ ಪ್ರಾಥಮಿಕ ಶಾಲೆ ವೀರಾಗ್ರಣಿ ಪ್ರಶಸ್ತಿ ಪಡೆಯಿತು.

Share this article