ರೈತರಿಗೆ ಮಾಹಿತಿ ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಕೇಂದ್ರ ಸರ್ಕಾರ 62 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಗೆ ಆದೇಶ ಮಾಡಿದ್ದು ಸುಮಾರು 45 ದಿನಗಳವರೆಗೆ ನೋಂದಣಿ ಕಾರ್ಯ ನಡೆಯಲಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರದಲ್ಲಿ ರೈತರ ನೂಕುನುಗ್ಗಲು ತಪ್ಪಿಸಲು ರೈತರಿಗೆ ಟೋಕನ್ ವಿತರಿಸಿ ಮಾತನಾಡಿದರು.
ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರಕ್ಕೆ ಬೆಳಿಗ್ಗೆಯಿಂದಲೇ ಕೊಬ್ಬರಿ ನೋಂದಣಿಗೆ ನೂರಾರು ರೈತರು ಆಗಮಿಸಿದ್ದು ರೈತರ ನೂಕುನುಗ್ಗಲು ತಪ್ಪಿಸಲು ಟೋಕನ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ರೈತರು ಸಮಾಧಾನದಿಂದ ನೋಂದಣಿ ಮಾಡಿಕೊಳ್ಳಬೇಕು. ಸುಮಾರು 45 ದಿನಗಳವರೆಗೆ ಕೊಬ್ಬರಿ ನೋಂದಣಿಗೆ ಕಾಲಾವಕಾಶ ಇದೆ. ಪ್ರತಿ ಕ್ವಿಂಟಲ್ ಕೊಬ್ಬರಿಗೆ ಕೇಂದ್ರ ಸರ್ಕಾರ 12 ಸಾವಿರ ರು. ರಾಜ್ಯ ಸರ್ಕಾರ 1500 ರು. ನೀಡುತ್ತಿದ್ದು ಒಟ್ಟು 13,500 ರು. ಸಿಗಲಿದೆ ಎಂದು ಹೇಳಿದರು.ಸದ್ಯಕ್ಕೆ ಕೇಂದ್ರ ಸರ್ಕಾರ 62 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಗೆ ಆದೇಶ ಮಾಡಿದ್ದು ಇನ್ನು ಹೆಚ್ಚುವರಿಯಾಗಿ 15 ಸಾವಿರ ಮೆಟ್ರಿಕ್ ಟನ್ ಹೆಚ್ಚಳ ಮಾಡಲಿದೆ. ತಾಲೂಕಿನಲ್ಲಿ ಬರ ಪರಿಹಾರದ ಹಣ ನೀಡಲು ರೈತರಿಂದ ಎಫ್‌ಐಡಿ ಪಡೆಯಲಾಗಿತ್ತು. ಈಗ ಕೊಬ್ಬರಿ ನೋಂದಣಿಗೆ ಇದು ಅನುಕೂಲವಾಗಿದೆ. ಈ ಬಾರಿ ರೈತರ ನೋಂದಣಿಗೆ ಬೆರಳಚ್ಚು ಮಾಡುವುದರಿಂದ ಕೆಲವು ಕಡೆ ಸರ್ವರ್ ಸಮಸ್ಯೆ ಆಗಿದೆ. ಎರಡು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.
ಮುಖಂಡರಾದ ದೊರೆಸ್ವಾಮಿ, ಜೆ.ಡಿ. ಶಂಕರ್, ರಂಗೇಗೌಡ, ಅಣ್ಣಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್, ನಟರಾಜ್ ಯಾದವ್, ಹೊನ್ನೇಗೌಡ, ಕೃಷಿ ಇಲಾಖೆ ಸಿಬ್ಬಂದಿ ವಿಜಯಕುಮಾರ್, ರಾಜೇಶ್ವರಿ, ಚೈತ್ರ ಇದ್ದರು.ನುಗ್ಗೇಹಳ್ಳಿ ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಟೋಕನ್ ವಿತರಿಸಿದರು.