ಚಿಕ್ಕಮಗಳೂರು: ವಿದ್ಯಾರ್ಥಿಗಳು ಅಂಬೇಡ್ಕರ್ ರಚಿಸಿರುವ ಗ್ರಂಥಗಳು ಹಾಗೂ ಭಾರತ ದೇಶದ ಸಂವಿಧಾನವನ್ನು ಓದಬೇಕು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಕರೆ ನೀಡಿದರು.
ವಿದ್ಯಾರ್ಥಿ ನಿಲಯವನ್ನು ನಮ್ಮ ಮನೆಯಂತೆ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮದರ್ ಥೆರೆಸಾ ಫ್ಲಾರೆನ್ಸ್ ನೈಟಿಂಗೆಲ್, ಸ್ವಾಮಿ ವಿವೇಕಾನಂದರ ಬಗ್ಗೆ ಕೇಳಿದ್ದಿರಲ್ಲವೇ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಅವರು, ಅವರ ತತ್ತ್ವಗಳನ್ನು ಅಳವಡಿಸಿ ಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತೆ ತಿಳಿಸಿದರು. ನಂತರ ಆಹಾರ ಶೇಖರಣೆ ಉಗ್ರಾಣಕ್ಕೆ ಭೇಟಿ ನೀಡಿ ಅಕ್ಕಿ ಹಾಗೂ ತರಕಾರಿಗಳ ಗುಣಮಟ್ಟ ಪರಿಶೀಲಿಸಿ ಹೆಚ್ಚು ದಿನ ಇಟ್ಟರೆ ಕೆಡುವ ತರಕಾರಿಗಳನ್ನು ಎರಡು ದಿನದಲ್ಲಿ ಬಳಸುವಂತೆ ಸೂಚಿಸಿದರು.
ಇಂದಾವರದ ನಗರಸಭೆ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರು, ಇದರಲ್ಲಿ ಉತ್ಪತ್ತಿ ಯಾಗುತ್ತಿರುವ ಕೊಳಚೆ ನೀರು ಗ್ರಾಮದ ಕಾಲುವೆಯಲ್ಲಿ ಹರಿಯುತ್ತಿರುವುದರಿಂದ ಕೆಟ್ಟ ವಾಸನೆ ಬರುತ್ತಿದೆ. ಜೊತೆಗೆ ಸೊಳ್ಳೆ, ನೊಣಗಳು ಹೆಚ್ಚಾಗಿರುವುದರಿಂದ ರೋಗರುಜಿನಗಳಿಗೆ ಆಹ್ವಾನ ನೀಡಿದಂತ್ತಾಗುತ್ತದೆ ಎಂದು ಸಾರ್ವಜನಿಕರು ದೂರು ನೀಡಿದ್ದಾರೆ ಎಂದರು.ಕಸ ವಿಲೇವಾರಿ ಘಟಕದಲ್ಲಿ ಬಹಳ ದೊಡ್ಡ ಸಮಸ್ಯೆ ಇದೆ, ಡ್ರೈ ವೇಸ್ಟ್ ಆಗಿ ಹೊರಬರುವ ಕಸ ಸ್ಥಳಾಂತರ ಮಾಡದೆ ಸುಮಾರು 25 ವರ್ಷಗಳಿಂದ ವಿಲೇವಾರಿ ಮಾಡದೇ, ಇಡೀ ಗುಡ್ಡ ಕಸವಾಗಿದೆ. ಇದರಿಂದ ಬರುವ ನೀರು ಕಲುಷಿತಗೊಂಡು ಕೃಷಿಗೆ, ತೋಟಗಾರಿಕೆಗೆ ಹಾಗೂ ದನಕರುಗಳಿಗೆ, ನಾಗರಿಕರಿಗೆ ತೊಂದರೆಯಾಗುತ್ತಿದೆ. ಪ್ರತಿ ತಿಂಗಳು ನಡೆಯುವ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಒಣ ಕಸ ವಿಲೇವಾರಿ ಮಾಡಲಾಗುತ್ತಿದೆ. ಆದರೆ ಈ ಕಾರ್ಯ ಅಂತಿಮ ಗೊಳ್ಳಲು ವರ್ಷಾನುಗಟ್ಟೆಲೆಯಾಗುತ್ತದೆ. ಈ ಸಂಬಂಧ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎಂಜಿನಿಯರ್‌ನ್ನು ಆಹ್ವಾನಿಸಿ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಯಾವ ರೀತಿ ತೀರ್ಮಾನ ಮಾಡಬಹುದು ಎಂಬ ಬಗ್ಗೆ ಪ್ರಸ್ತಾವನೆ ಕಳಿಸುವುದಾಗಿ ತಿಳಿಸಿದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 2 ಬದಿ ಕಸ ವಿಲೇವಾರಿಗೆ ಕ್ರಮವಹಿಸಲಾಗಿದೆ. ಅದೇ ಮಾದರಿಯಲ್ಲಿ ಚಿಕ್ಕಮಗ ಳೂರಿನಲ್ಲಿಯೂ ನಿರ್ಮಾಣ ಮಾಡಿ ಕೊಳಚೆ ನೀರನ್ನು ಶುದ್ಧೀಕರಿಸಿ ಕುಡಿಯುವ ನೀರನ್ನು ಹೊರತುಪಡಿಸಿ, ತೋಟ ಗಾರಿಕೆಗೆ, ಕೃಷಿಗೆ ಬಳಸಿಕೊಳ್ಳುವಂತೆ ಸೂಚಿಸಿದರು. ನಗರದ ಗ್ರಾಮೀಣ ಸಾರಿಗೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಅವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿ, ಶೌಚಾಲಯ ಅಸ್ವಚ್ಚತೆ, ಕ್ಯಾಂಟೀನ್ ಅಡುಗೆ ಮನೆಯಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿ, ಪ್ರತಿದಿನ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕೆಂದರು.
ಈಗ ಪ್ರಕರಣ ದಾಖಲಾದ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಇತ್ಯರ್ಥಪಡಿಸಿ ವರದಿ ನೀಡಿದರೆ ಪ್ರಕರಣ ವಾಪಸ್ ಪಡೆಯುವುದಾಗಿ ಅಧಿಕಾರಿಗಳಿಗೆ ಸೂಚಿಸಿದರು.