ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವ್ಯಕ್ತಿಯು ಮನಸ್ಸಿನ ಪ್ರಸನ್ನತೆ, ಭಾವನೆಗಳ ಸ್ಥಿರತೆ ಹಾಗೂ ಆಸೆಗಳ ಸಂಯಮದಿಂದ ಪರಿಪೂರ್ಣ ವ್ಯಕ್ತಿಯಾಗಿ ರೂಪುಗೊಳ್ಳಬಹುದೆಂದು ಖ್ಯಾತ ಮನೋವೈದ್ಯ ಆಪ್ತಸಲಹೆಗಾರ, ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ ವಿಶ್ರಾಂತ ಪ್ರೊಫೆಸರ್ ಡಾ.ಸಿ.ಆರ್ ಚಂದ್ರಶೇಖರ್ ಅಭಿಪ್ರಾಯಪಟ್ಟರು.ತಾಲೂಕಿನ ಪೆರೆಸಂದ್ರದ ಶಾಂತ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಮಾನಸಿಕ ಆರೋಗ್ಯ ಮತ್ತು ಒತ್ತಡಗಳ ನಿರ್ವಹಣೆ ಎಂಬ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮಾನಸಿಕ ಸ್ವಾಸ್ಥ್ಯವಿಲ್ಲದೆ, ಒತ್ತಡಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲಾರದೆ ಯುವಕರು ಮನೋಕ್ಷೋಭೆಗಳಿಗೆ ಒಳಗಾಗುತ್ತಾರೆ. ಇವುಗಳಿಂದ ಹೊರಬರಲಾರದೆ ಮಾದಕ ದ್ರವ್ಯಗಳ ಬಳಕೆಯನ್ನು ಕಲಿಯುತ್ತಾರೆ. ಸಮಾಜದಿಂದ ದೂರವಾಗಿ ಒಂಟಿಯಾಗುತ್ತಾರೆ ಮತ್ತು ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ ಹಾಗೂ ಖಿನ್ನತೆಗೆ ಒಳಗಾಗುತ್ತಾರೆ. ಜೀವನದಲ್ಲಿ ಜಿಗುಪ್ಸೆಗೆ ಒಳಗಾಗಿ ಅವರು ಆತ್ಮವಿಶ್ವಾಸ ಕಳೆದುಕೊಂಡು ಆತ್ಮಹತ್ಯೆ ಮತ್ತು ಹಿಂಸೆಗೂ ಕೂಡ ಮುಂದಾಗಬಹುದು. ಇಂತಹ ಸ್ಥಿತಿಗಳಿಂದ ವಿದ್ಯಾರ್ಥಿಗಳು ಮತ್ತು ಯುವ ಜನಾಂಗವನ್ನು ರಕ್ಷಿಸಿ ಅವರಿಗೆ ಉತ್ತಮ ವ್ಯಕ್ತಿತ್ವ ಕಟ್ಟಿಕೊಡಲು ಮಾನಸಿಕ ಆರೋಗ್ಯ ಹಾಗೂ ಒತ್ತಡಗಳ ನಿರ್ವಹಣೆ ಬಗ್ಗೆ ಆಪ್ತ ಸಮಾಲೋಚನೆ ನಡೆಸುವುದು, ಪೂರಕವಾಗಿ ಅಗತ್ಯ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಸ್ತುತಪಡಿಸುವುದರಿಂದ ಹದಿಹರೆಯದ ಸಹಸ್ರಾರು ಯುವಕರು ಉತ್ತಮ ವ್ಯಕ್ತಿತ್ವಗಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಯುವಕರು ದೇಶದ ಅತಿ ಮಹತ್ವದ ಆಸ್ತಿ, ಅವರು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಾರೆ, ತನ್ಮೂಲಕ ಭವಿಷ್ಯ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಪಠ್ಯಗಳು ಮತ್ತು ಜ್ಞಾನದ ಜೊತೆಗೆ ಉತ್ತಮ ವ್ಯಕ್ತಿತ್ವ, ಮಾನಸಿಕ ಆರೋಗ್ಯ ಮೌಲ್ಯಗಳ ಬೋಧನ, ನಾಯಕತ್ವ ತರಬೇತಿ, ಜೀವನ ಕೌಶಲ್ಯಗಳ ಬೋಧನೆ ಹಾಗೂ ಒತ್ತಡ ನಿರ್ವಹಣೆಯ ಮನಸ್ಥಿತಿ, ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ ಬೆಳೆಸುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.ಭ್ರಮಾಲೋಕಕ್ಕೆ ಕೊಂಡೊಯ್ಯುತ್ತಿರುವ ಮಾಧ್ಯಮಗಳುಪ್ರಸ್ತುತ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳು ವಿವಿಧ ಕಂಪನಿಗಳ ಜಾಹೀರಾತಿನ ಹೆಸರಿನಲ್ಲಿ ಅನಾಮಿಕವಾಗಿ ಸೃಷ್ಟಿಸುತ್ತಿರುವ ಭ್ರಮೆಗಳು ಯುವಕರನ್ನು ಭ್ರಮಾಲೋಕಕ್ಕೆ ಕೊಂಡೊಯ್ಯುತ್ತವೆ. ಇವುಗಳ ಪ್ರಭಾವದಿಂದ ಮಕ್ಕಳು ಸಾಹಸ ಪ್ರವೃತ್ತಿಗೆ ಮುಂದಾಗುತ್ತಾರೆ, ಮದ್ಯಪಾನ, ಧೂಮಪಾನ, ಡ್ರಗ್ಸ್ ಬಳಕೆಗೂ ಹೆದರುವುದಿಲ್ಲ. ಪೋಷಕರು ಹಾಗೂ ಗುರುಗಳ ನಿಯಂತ್ರಣಕ್ಕೆ ಬಾರದೆ ಅವರ ಸಲಹೆಗಳಿಗೆ ಎದುರಾಗುತ್ತಾರೆ. ಇವರಲ್ಲಿ ರಚನಾತ್ಮಕ ಚಿಂತನೆ ಮತ್ತು ಜವಾಬ್ದಾರಿಯನ್ನು ಬೆಳೆಸಲು ಶಾಲಾ- ಕಾಲೇಜುಗಳಲ್ಲಿ ಪರಿಪೂರ್ಣ ವ್ಯಕ್ತಿತ್ವಕ್ಕೆ ಅಗತ್ಯವಾದ ಮಾನಸಿಕ ಆರೋಗ್ಯ ಮತ್ತು ಒತ್ತಡ ನಿರ್ವಹಣೆಗಳಿಗೆ ಅಗತ್ಯ ಜ್ಞಾನ ತಿಳಿವಳಿಕೆ ಮತ್ತು ಕೌಶಲ್ಯಗಳನ್ನು ಬೆಳೆಸುವ ಕಾರ್ಯ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಶಾಂತ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ. ಕೋಡಿರಂಗಪ್ಪ ಮಾತನಾಡಿ, ಜವಾಬ್ದಾರಿಯುತ ಹಾಗೂ ಸಂವೇದನಾಶೀಲ ಚಿಂತನೆ, ಶಾರೀರಿಕ ಪ್ರಸನ್ನತೆ, ಸದೃಢತೆ, ಭಾವನಾತ್ಮಕ ಸ್ಥಿರತೆ, ನೈತಿಕ ವರ್ತನೆಗಳು ಹಾಗೂ ಸಹವರ್ತಿಗಳೊಡನೆ ಒಡನಾಟಗಳು, ಪರಿಪೂರ್ಣ ಅಧ್ಯಯನ, ಸೃಜನಾತ್ಮಕ ಚಿಂತನೆ ಮತ್ತು ಸಮಸ್ಯೆಗಳ ಪರಿಹಾರ, ಸಮಯಪ್ರಜ್ಞೆ, ಕಾಯಕನಿಷ್ಠೆ, ನೈತಿಕತೆ, ಪರಸ್ಪರ ಸಹಕಾರ, ಉತ್ತಮ ಬಾಳುವಿಕೆ ಇವುಗಳನ್ನು ಯುವಕರು ವ್ಯಕ್ತಿಗತ ಹಾಗೂ ವೃತ್ತಿಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಾಲಾ ಹಂತದಿಂದಲೇ ಆರಂಭವಾಗಿ ಹದಿಹರೆಯ ಹಂತದವರೆಗೂ ಇಂತಹ ಜೀವಮುಖಿ ವರ್ತನೆ, ಭಾವನೆ ಮತ್ತು ಕಾರ್ಯನಿರ್ವಹಣ ಕೌಶಲಗಳು, ಬೋಧಿಸಿದರೆ ಉತ್ತಮ ವ್ಯಕ್ತಿತ್ವಕ್ಕೆ ಭದ್ರಬುನಾದಿಯನ್ನು ನಿರ್ಮಿಸಬಲ್ಲರು. ಈ ರೀತಿಯ ಬದುಕು ಅನ್ಯರಿಗೂ ದಾರಿ ದೀಪವಾಗುತ್ತದೆ. ಇಂತಹ ಸರಳ ತತ್ವಗಳಿಂದ ಬೆಳೆಯುವ ಯುವಕರು ಭವಿಷ್ಯದಲ್ಲಿ ದೊಡ್ಡ ನಾಯಕರಾಗಬಹುದು, ಇದಕ್ಕಾಗಿ ತಾವೆಲ್ಲರೂ ಮಾನಸಿಕ ಆರೋಗ್ಯದ ಜೊತೆಗೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ಭಾವನಾತ್ಮಕ ಒತ್ತಡಗಳ ನಿರ್ವಹಣಾ ತಂತ್ರಗಳನ್ನು ಕಲಿತು ಪಾಲಿಸಬೇಕೆಂದು ಕಿವಿ ಮಾತು ಹೇಳಿದರು.ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ಕುರಿತು ಪ್ರಶ್ನೋತ್ತರ ನಡೆಸಿದ ಪರಿಣಿತರು, ಸರಿ ಉತ್ತರಗಳು ಮತ್ತು ಯುಕ್ತ ಚಿಂತನೆಯನ್ನು ವ್ಯಕ್ತಪಡಿಸಿದ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಡಾ.ಸಿ.ಆರ್. ಚಂದ್ರಶೇಖರ್ ದೃಷ್ಟಾಂತಗಳ ಮೂಲಕ ಸಮಾಧಾನ ನೀಡಿದರು.
ಕಾರ್ಯಕ್ರಮದಲ್ಲಿ ಶಾಂತ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹಾಗೂ ಪ್ರಾಂಶುಪಾಲ ಡಾ. ನವೀನ್ ಸೈಮನ್, ಫಾರ್ಮಸಿ ಕಾಲೇಜಿನ ಮುಖ್ಯಸ್ಥ ಡಾ. ಗೋಪಿನಾಥ್, ಶಾಂತ ವಿದ್ಯಾನಿಕೇತನದ ಪ್ರಾಂಶುಪಾಲ ಪ್ರಸಾದ್, ಅರೆವೈದ್ಯಕೀಯ ಶಿಕ್ಷಣ ಕಾಲೇಜಿನ ಮುಖ್ಯಸ್ಥ ಪ್ರೊ. ನರೇಶ್ ಕುಮಾರ್, ಪ್ರೊಫೆಸರ್ ಡಯಾನ, ಫಿಜಿಯೋಥೆರಪಿ ಸಂಸ್ಥೆಯ ಡಾ. ಸುರೇಶ್, ವಿಜಯಲಕ್ಷ್ಮೀ, ನಿತ್ಯ, ವಸುಧ, ಶಿಲ್ಪಾರಾಣಿ, ಸುಹಾಸಿನಿ, ಆಕಾಂಕ್ಷ, ಬಿಂದು, ಬಸವರಾಜು ಹಾಗೂ ವಿವಿಧ ಆರೋಗ್ಯ ಶಿಕ್ಷಣ ಕೋರ್ಸ್ ಗಳ ವಿದ್ಯಾರ್ಥಿಗಳು ಇದ್ದರು.