ಹುಬ್ಬಳ್ಳಿ: ಸಾಂಸ್ಕೃತಿಕ ಲೋಕದಲ್ಲಿ ತಮ್ಮದೆ ಆದ ಮೈಲಿಗಲ್ಲು ರೂಪಿಸುವ ನಿಟ್ಟಿನಲ್ಲಿ ಯುವಜನೋತ್ಸವಕ್ಕೆ ಆಗಮಿಸಿರುವ ಎಲ್ಲ ಸ್ಪರ್ಧಾರ್ಥಿಗಳು ಆತ್ಮವಿಶ್ವಾಸ ಮತ್ತು ಪ್ರಯತ್ನದಿಂದ ಪ್ರತಿಭೆ ಪ್ರದರ್ಶಿಸಬೇಕು ಎಂದು ಬಾಲವಿಕಾಸ ಅಕಾಡಮಿ ಅಧ್ಯಕ್ಷ ಸಂಗಮೇಶ ಎ. ಬಬಲೇಶ್ವರ ಹೇಳಿದರು.
ಪ್ರತಿಭೆ ಇದ್ದವನು ಸ್ವಾರ್ಥ ಬಿಟ್ಟು ಪ್ರಾಮಾಣಿಕತೆಯಿಂದ ಶ್ರಮಿಸಿದರೆ ಉನ್ನತ ಸ್ಥಾನ ಪಡೆಯಬಲ್ಲ. ಕಲೆ ಮತ್ತು ಸಂಸ್ಕಾರ ಇದ್ದವನು ಬದುಕಿನೊಂದಿಗೆ ಜಗತ್ತನ್ನೆ ಗೆಲ್ಲಬಲ್ಲ. ಸೋಲು-ಗೆಲವು ಸ್ಪರ್ಧೆಯ ಎರಡು ಮುಖಗಳು ಗೆಲುವನ್ನು ತಲೆಗೇರಿಸಿಕೊಳ್ಳದೆ. ಸೋಲನ್ನು ಹೃದಯಕ್ಕೆ ಅಪ್ಪಿಸಿಕೊಳ್ಳದೆ ಮುನ್ನಡೆಯಬೇಕು ಎಂದು ಹೇಳಿದರು.
ಕರಾಕಾವಿಯ ಕುಲಪತಿ ಪ್ರೊ. ಡಾ.ಸಿ. ಬಸವರಾಜು ಮಾತನಾಡಿ, ಬದ್ಧತೆ, ಶಿಸ್ತು, ಸಂಯಮ, ಕೌಶಲ್ಯ ಇದ್ದವನಿಗಷ್ಟೇ ಪ್ರತಿಭೆ ಒಲಿಯುತ್ತದೆ. ನಿಜವಾದ ಕೌಶಲ್ಯ ಮತ್ತು ಸಂಸ್ಕಾರ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಹೆಚ್ಚಾಗಿ ನೋಡುತ್ತೇವೆ. ಈ ದೇಶದ ಅನೇಕ ಮಹಾನ್ ವ್ಯಕ್ತಿಗಳು ಸಾಂಸ್ಕೃತಿಕ ಲೋಕದಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಆ ರೀತಿಯಲ್ಲಿ ನೀವೆಲ್ಲರೂ ಸಾಂಸ್ಕೃತಿಕ ನಾಯಕರಾಗಬೇಕು.ಯುವಜನೋತ್ಸವ ಸ್ಪರ್ಧೆಗಳಿಂದ ತಮ್ಮ ವ್ಯಕ್ತಿತ್ವ ರೂಪಿಸುವುದರೊಂದಿಗೆ ಗಟ್ಟಿಗೊಳಿಸಿಕೊಳ್ಳಬೇಕು ಎಂದರು.ಕುಲಸಚಿವೆ ಗೀತಾ ಎಸ್, ಕೌಲಗಿ, ಹಣಕಾಸು ಅಧಿಕಾರಿ ಸಂಜೀವಕುಮಾರ ಸಿಂಗ್, ಕಾರ್ಯಕ್ರಮದ ಸಂಯೋಜಕ ಡಾ.ಕೆ.ಸಿ. ಗಿರೀಶ್ ಉಪಸ್ಥಿತರಿದ್ದರು. ಉಪನ್ಯಾಸಕರುಗಳು, ಸಿಂಡಿಕೇಟ್ ಸದ್ಯಸರು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕರಾಕಾವಿಯ ಕಾನೂನು ಶಾಲೆಯ ವಿದ್ಯಾರ್ಥಿನಿ ರಶ್ಮಿ ಕೌಶಿಕ್ ಪ್ರಾರ್ಥಿಸಿದರು. ಚೇತನಾ ಸ್ವಾಗತಿಸಿದರು, ಪ್ರಿಯಾ ಹೊನ್ನರಡ್ಡಿ ಪರಿಚಯಿಸಿದರು. ಅಂದಾನಮ್ಮ ಬಳ್ಳಾರಿ ವರದಿ ವಾಚಿಸಿದರು. ಶ್ರವಣ ಕಾರ್ಯಕ್ರಮ ನಿರೂಪಸಿದರು. ವೈಭವಿ ದೇಸಾಯಿ ವಂದಿಸಿದರು.