ಕನ್ನಡಪ್ರಭ ವಾರ್ತೆ ಯಾದಗಿರಿ
ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ನಿಶ್ಚಿತ ಗುರಿ ಮುಟ್ಟಬೇಕಾದರೆ ಅತ್ಯಂತ ಶ್ರದ್ಧೆಯಿಂದ ಅಧ್ಯಯನ ಮಾಡಬೇಕೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಸಾಂಸ್ಕ್ರತಿಕ, ಕ್ರೀಡೆ, ಎನ್‌ಎಸ್ಎಸ್, ಯುವ ರೆಡ್ ಕ್ರಾಸ್ ಮುಂತಾದ ವಿವಿಧ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಂದೆ-ತಾಯಿಗಳು ತುಂಬಾ ಕಷ್ಟಪಟ್ಟು ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಾರೆ. ತಮ್ಮ ಇಳಿ ವಯಸ್ಸಿನಲ್ಲಿ ಮಕ್ಕಳು ತಮಗೆ ಆಸರೆಯಾಗಿ ನಿಲ್ಲುತ್ತಾರೆಂದು ಅಪೇಕ್ಷೆ ಹೊಂದಿರುತ್ತಾರೆ. ಅದಕ್ಕಾಗಿ ವಿದ್ಯಾರ್ಥಿಗಳು ಪದವಿ ಶಿಕ್ಷಣದ ಹಂತದಲ್ಲಿ ಪ್ರಾಮಾಣಿಕವಾಗಿ ಅಧ್ಯಯನ ಮಾಡಿದರೆ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆಂದು ಹೇಳಿದರು.ರಾಯಚೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ. ಯರಿಸ್ವಾಮಿ ಮಾತನಾಡಿ, ತಂತ್ರಜ್ಞಾನದ ಮೂಲಕ ಶೈಕ್ಷಣಿಕ ಪ್ರಕ್ರಿಯೆಗಳನ್ನು ನಿಭಾಯಿಸಬೇಕಾಗಿರುವುದರಿಂದ ವಿದ್ಯಾರ್ಥಿಗಳು ತುಂಬಾ ಜಾಗೂರುಕತೆಯಿಂದ ಅದನ್ನು ನಿರ್ವಹಿಸಿಕೊಳ್ಳಲು ಸಲಹೆ ನೀಡಿದರು.
ಜಿಲ್ಲಾ ಖಜಾನೆಯ ಉಪನಿರ್ದೇಶಕ ಮಹಾಲಿಂಗರಾಯ ಟಿ. ಬಿದರಾಣಿ ಮಾತನಾಡಿ, ವರ್ತಮಾನದ ವ್ಯವಸ್ಥೆಯಲ್ಲಿ ಸ್ಪರ್ಧೆ ತುಂಬಾ ಜೋರಾಗಿದೆ. ಅವಕಾಶಗಳು ಕಡಿಮೆ ಇದ್ದು, ಅದನ್ನು ಗಿಟ್ಟಿಸಿಕೊಳ್ಳಲು ಅನೇಕರು ಸೆಣಸಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರಿಸ್ಥಿತಿಯನ್ನು ಅರಿತುಕೊಂಡು ಸಕಾರಾತ್ಮಕ ಚಿಂತನೆಯಿಂದ ಕಠಿಣವಾದ ಅಭ್ಯಾಸವನ್ನು ಮಾಡಿದಲ್ಲಿ ಎಷ್ಟೆ ಕಡಿಮೆ ಅವಕಾಶಗಳಿದ್ದರೂ ಕೂಡ ಅವುಗಳನ್ನು ಪಡೆದುಕೊಳ್ಳಲು ಸಾಧ್ಯವೆಂದರು.ಜಿಪಂ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಚಟ್ನಳ್ಳಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಸುಭಾಶ್ಚಂದ್ರ ಕೌಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ. ಜೆಟ್ಟೆಪ್ಪ ಡಿ., ಡಾ. ದೇವಿಂದ್ರಪ್ಪ ಹಳಿಮನಿ, ಮಂಜುನಾಥ, ಪಂಪಾಪತಿರೆಡ್ಡಿ ಪಾಟೀಲ್, ಡಾ. ಬಸವಪ್ರಸಾದ, ಡಾ. ಭೀಮರಾಯ ಲಿಂಗೇರಿ, ಡಾ. ಯಲ್ಲಪ್ಪ, ಶಹನಾಜ ಬೇಗಂ, ಡಾ. ಮೊಗಲಪ್ಪ ವೇದಿಕೆಯಲ್ಲಿದ್ದರು. ಮೇಘಾ ಪ್ರಾರ್ಥಿಸಿದರು. ಡಾ. ಚಂದ್ರಶೇಖರ ಕೊಂಕಲ ಸ್ವಾಗತಿಸಿದರು. ಡಾ. ಸಿದ್ಧರಾಜರೆಡ್ಡಿ ನಿರೂಪಿಸಿದರು. ಪ್ರಹ್ಲಾದ ಜೋಷಿ ವಂದಿಸಿದರು.