ಪಿಯುಸಿ, ಪದವಿ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ತೆರಳುವ ವಿದ್ಯಾರ್ಥಿಗಳು 9 ಗಂಟೆ ಸುಮಾರಿಗೆ ಬರುವ ಬಸ್‌ಗಳನ್ನೇ ಅವಲಂಭಿಸಿದ್ದಾರೆ. ಆದರೆ, ನರಗುಂದ ಹಾಗೂ ನವಲಗುಂದದಿಂದಲೇ ಬಸ್‌ಗಳು ಭರ್ತಿಯಾಗಿ ಬರುವುದರಿಂದ ಅಣ್ಣಿಗೇರಿಯಲ್ಲಿ ಹತ್ತುವ ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ನಿಲ್ಲಲೂ ಅವಕಾಶ ಸಿಗುತ್ತಿಲ್ಲ.
ರಫೀಕ ಕಲೇಗಾರ
ಅಣ್ಣಿಗೇರಿ:
ಅಣ್ಣಿಗೇರಿ ಭಾಗದಿಂದ ನಿತ್ಯ ಗದಗ ಹಾಗೂ ಹುಬ್ಬಳ್ಳಿಗೆ ಶಿಕ್ಷಣಕ್ಕಾಗಿ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ಬೆಳಗಿನ ವೇಳೆಯ ಬಸ್ ಕೊರತೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಬೆಳಗ್ಗೆ 8ರಿಂದ 9 ಗಂಟೆಯೊಳಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಬರುವ ಬಸ್‌ನಲ್ಲಿಯೇ ಬಾಗಿಲಿನಲ್ಲಿ ನಿಂತು ಪ್ರಯಾಣಿಸುವಂತಾಗಿದೆ.
ಪಿಯುಸಿ, ಪದವಿ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ತೆರಳುವ ವಿದ್ಯಾರ್ಥಿಗಳು 9 ಗಂಟೆ ಸುಮಾರಿಗೆ ಬರುವ ಬಸ್‌ಗಳನ್ನೇ ಅವಲಂಭಿಸಿದ್ದಾರೆ. ಆದರೆ, ನರಗುಂದ ಹಾಗೂ ನವಲಗುಂದದಿಂದಲೇ ಬಸ್‌ಗಳು ಭರ್ತಿಯಾಗಿ ಬರುವುದರಿಂದ ಅಣ್ಣಿಗೇರಿಯಲ್ಲಿ ಹತ್ತುವ ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ನಿಲ್ಲಲೂ ಅವಕಾಶ ಸಿಗುತ್ತಿಲ್ಲ. ಕಾಲೇಜಿಗೆ ತಡವಾಗುವ ಭೀತಿಯಿಂದ ಅನೇಕರು ಬಾಗಿಲಿನ ಬಳಿಯೇ ನಿಂತು ಪ್ರಯಾಣಿಸುತ್ತಿದ್ದಾರೆ.
ಎರಡು ಹೆಚ್ಚುವರಿ ಬಸ್ ಓಡಿಸಿ:
ಈ ಕುರಿತು ಹಲವು ಬಾರಿ ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬುದು ಸಾರ್ವಜನಿಕರ ಆರೋಪ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಳಗ್ಗೆ 8ರಿಂದ 9 ಗಂಟೆಯ ನಡುವೆ ಅಣ್ಣಿಗೇರಿಯಿಂದ ಗದಗ ಹಾಗೂ ಹುಬ್ಬಳ್ಳಿ ಮಾರ್ಗಕ್ಕೆ ಕನಿಷ್ಠ ಎರಡು ಹೆಚ್ಚುವರಿ ಬಸ್ ಓಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಶೈಕ್ಷಣಿಕವಾಗಿ ಹಿನ್ನಡೆ:
ಸಕಾಲಕ್ಕೆ ಬಸ್ ವ್ಯವಸ್ಥೆ ಇಲ್ಲದ ಪರಿಣಾಮ ತರಗತಿಗಳಿಗೆ ನಿಗದಿತ ವೇಳೆಗೆ ತಲುಪಲು ಆಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಖಾಸಗಿ ವಾಹನಗಳಿಗೆ ಹಣ ಕೊಟ್ಟು ಹೋಗಲು ನಮ್ಮಿಂದ ಆಗುವುದಿಲ್ಲ. ಹೀಗಾಗಿ ನಿತ್ಯವೂ ಮೊದಲಿನ ಕ್ಲಾಸ್ ತಪ್ಪಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕುರಿತು ಹಲವು ಬಾರಿ ಡಿಪೋ ಮ್ಯಾನೇಜರ್ ಗಮನಕ್ಕೂ ತಂದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಬಸ್‌ಗಳ ಕೊರತೆ ಕುರಿತು ಗಮನಕ್ಕೆ ಬಂದಿದೆ. ಹೆಚ್ಚುವರಿ ಬಸ್‌ಗಳ ಅಗತ್ಯ ಕುರಿತು ಹುಬ್ಬಳ್ಳಿ ವಿಭಾಗಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಅನುಮೋದನೆ ದೊರೆತ ಕೂಡಲೇ ಅಗತ್ಯ ಕ್ರಮಕೈಗೊಳ್ಳಲಾಗುವುದು.
ಪ್ರಸಾದ ಜೆ.ಟಿ, ಡಿಪೋ ವ್ಯವಸ್ಥಾಪಕವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಅಣ್ಣಿಗೇರಿ ಬಸ್ ನಿಲ್ದಾಣದ ಎದುರು ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸಲಾಗುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.