ಹಾವೇರಿ: ಮೊಬೈಲ್ ಅತಿಯಾದ ಬಳಕೆ ಅಪಾಯಕ್ಕೆ ಆಹ್ವಾನವಿದ್ದಂತೆ. ಓದು, ಸಂಗೀತ ಆಲಿಸುವುದು, ನಾಟಕದಂತಹ ಸಾಂಸ್ಕೃತಿಕ ಹವ್ಯಾಸಗಳಿಲ್ಲದ ವಿದ್ಯಾರ್ಥಿಗಳು ಮೊಬೈಲ್ ವ್ಯಸನಿಗಳಾಗುತ್ತಿದ್ದಾರೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ್ ಹೇಳಿದರು.ತಾಲೂಕಿನ ದೇವಗಿರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಏರ್ಪಡಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.ಬದಲಾದ ಆಹಾರ ಪದ್ದತ್ತಿಯಿಂದ, ಮೊಬೈಲ್ ಗೀಳಿನಿಂದ ಕಲಿಕೆಯಲ್ಲಿ ಆಸಕ್ತಿಯನ್ನು ಕಳೆದುಕೊಂಡು ಒತ್ತಡ, ಖಿನ್ನತೆ, ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಒಂದು ದೇಶವನ್ನು ಸಂಪೂರ್ಣವಾಗಿ ನಾಶ ಮಾಡಲು ಅಣುಬಾಂಬು ಹಾಕಬೇಕಾಗಿಲ್ಲ. ಆ ದೇಶದ ಜನರನ್ನು ದುಶ್ಚಟಗಳ ದಾಸರನ್ನಾಗಿ ಮಾಡಿದರೆ ಸಾಕು. ಚಟವನ್ನು ಹೇಗಾದರು ಮಾಡಿ ಕಳೆದುಕೊಳ್ಳಬಹುದು. ಆದರೆ ವ್ಯಸನದಿಂದ ದೂರಾಗುವುದು ಬಹಳ ಕಷ್ಟ. ತಪ್ಪುಗಳನ್ನು ಮಾಡುವುದು ತಪ್ಪಲ್ಲ, ಆದರೆ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳದಿರುವುದು ಮಹಾತಪ್ಪು. ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಹವ್ಯಾಸಗಳನ್ನು ಬದಲಿಸಬಹುದು. ಹವ್ಯಾಸಗಳು ನಮ್ಮ ಭವಿಷ್ಯಗಳನ್ನೇ ಬದಲಾಯಿಸಬಲ್ಲವು ಎಂದು ಹೇಳಿದರು. ಪ್ರಾಚಾರ್ಯ ಎಸ್.ಜಿ. ಇಟಗಿಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜ್ಞಾನವೇ ಶಕ್ತಿ, ಜ್ಞಾನಕ್ಕಿಂತ ಮಿಗಿಲಾಗಿದದ್ದು ಯಾವುದು ಇಲ್ಲ. ಸರಸ್ವತಿ ಪುತ್ರನಾದರೆ ಲಕ್ಷ್ಮಿ ತಾನಾಗಿ ಬರುವಳು. ಕಾಲೇಜಿನ ಅಭಿವೃದ್ದಿಗೆ ಎಲ್ಲರೂ ಕೈ ಜೋಡಿಸಬೇಕು. ಗುರು ಹಿರಿಯರಿಗೆ, ಹೆತ್ತವರಿಗೆ ಗೌರವ ನೀಡಬೇಕು ಎಂದು ಹೇಳಿದರು.ಯೋಜನೆಯ ಕೃಷಿ ಅಧಿಕಾರಿ ಬಸವರಾಜ ಮಾತನಾಡಿ, ನಮ್ಮ ಯೋಜನೆಯಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣ, ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆಯಿದ್ದರೆ ಅತಿಥಿ ಶಿಕ್ಷಕರ ನೇಮಕ, ವಿದ್ಯಾರ್ಥಿಗಳಿಗೆ ಶಿಷ್ಯವೇತನಗಳು ಮುಂತಾದ ಜನಪರ ಸಾಮಾಜಮುಖಿ ಕಾರ್ಯಕ್ರಮಗಳು ಇವೆ ಎಂದರು.ದೇವಗಿರಿ ವಲಯದ ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ ಪಾಲನಕರ ಅಧ್ಯಕ್ಷತೆ ವಹಿಸಿದ್ದರು.ಎಸ್.ಎಸ್.ಪಾಣಿಗಟ್ಟಿ, ಆರಾಧನ, ಸುಜಾತಾ, ಲತಾ ಇದ್ದರು. ಮೇಲ್ವಿಚಾರಕಿ ರತ್ನಾ ಸ್ವಾಗತಿಸಿದರು. ಸಚಿನ ನಿರೂಪಿಸಿದರು. ಚನ್ನಮ್ಮ ಮತ್ತು ರೇಣುಕಾ ವಂದಿಸಿದರು.