ಕಾರ್ಖಾನೆ ವಿರುದ್ಧ ಜಾಗೃತಿಗಾಗಿ ಅಧ್ಯಯನ ಶಿಬಿರ

KannadaprabhaNewsNetwork |  
Published : Mar 22, 2025, 02:05 AM IST
45456 | Kannada Prabha

ಸಾರಾಂಶ

ಮಾ. ೨೩ರಂದು ಹುತಾತ್ಮ ರತ್ನ ಭಗತ್‌ಸಿಂಗ್ (ರಾಜಗುರು, ಸುಖದೇವ್) ರನ್ನು ಗಲ್ಲಿಗೇರಿಸಿದ ದಿನದಂದು ಶಿಬಿರ ಪ್ರಾರಂಭವಾಗುತ್ತಿದೆ. ಎರಡು ದಿನದ ಶಿಬಿರದಲ್ಲಿ ಅನೇಕ ವಿಷಯ ತಜ್ಞರು, ಪರಿಸರವಾದಿಗಳು, ಚಿಂತಕರು, ಹೋರಾಟಗಾರರು, ಕಾರ್ಖಾನೆ, ಉದ್ಯೋಗ, ಅಭಿವೃದ್ಧಿ, ಕೃಷಿ, ಪರಿಸರ ಮಾಲಿನ್ಯ, ಜನಹೋರಾಟಗಳು ಇಂತಹ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ.

ಕೊಪ್ಪಳ:

ಈಗಾಗಲೇ ಇರುವ ಕಾರ್ಖಾನೆಗಳ ಮಾಲಿನ್ಯದ ವಿರುದ್ಧ ಮತ್ತು ಹೊಸ ಉಕ್ಕಿನ ಕಾರ್ಖಾನೆ ಸ್ಥಾಪನೆ ಹಾಗೂ ಅಣುವಿದ್ಯುತ್ ಸ್ಥಾವರ ಯೋಜನೆಯ ಪ್ರಸ್ತಾಪ ವಿರೋಧಿಸಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಎರಡು ದಿನಗಳ ಪರಿಸರ ಜಾಗೃತಿ ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಚಾವೋ ಆಂದೋಲನ ಸಮಿತಿ ತಿಳಿಸಿದೆ.

ನಗರದ ವಿವಿಧ ಬಾಧಿತ ಪ್ರದೇಶ ಮತ್ತು ಅನೇಕ ಬಾಧಿತ ಹಳ್ಳಿಗಳಿಗೆ ಕಳೆದ ಒಂದು ವಾರದಿಂದ ಭೇಟಿ ನೀಡಿ, ಕುಷ್ಟಗಿ ತಾಲೂಕು ತಾವರಗೇರಿಯ ಬುದ್ಧ ವಿಹಾರದಲ್ಲಿ ಹಮ್ಮಿಕೊಂಡಿರುವ ಶಿಬಿರಕ್ಕೆ ಯುವಜನರನ್ನು ಆಹ್ವಾನಿಸುತ್ತಿದೆ. ಜತೆಗೆ ಪರಿಸರ ಮಾಲಿನ್ಯದಿಂದ ಆಗುತ್ತಿರುವ ಅನಾಹುತಗಳ ಸಂಕ್ಷಿಪ್ತ ಮಾಹಿತಿ ಹಾಗೂ ಮುಂದಿನ ಸುದೀರ್ಘ ಹೋರಾಟದ ಕುರಿತು ಮನವರಿಕೆ ಮಾಡಿಕೊಡುತ್ತಿದೆ.

ಮಾ. ೨೩ರಂದು ಹುತಾತ್ಮ ರತ್ನ ಭಗತ್‌ಸಿಂಗ್ (ರಾಜಗುರು, ಸುಖದೇವ್) ರನ್ನು ಗಲ್ಲಿಗೇರಿಸಿದ ದಿನದಂದು ಶಿಬಿರ ಪ್ರಾರಂಭವಾಗುತ್ತಿದೆ. ಎರಡು ದಿನದ ಶಿಬಿರದಲ್ಲಿ ಅನೇಕ ವಿಷಯ ತಜ್ಞರು, ಪರಿಸರವಾದಿಗಳು, ಚಿಂತಕರು, ಹೋರಾಟಗಾರರು, ಕಾರ್ಖಾನೆ, ಉದ್ಯೋಗ, ಅಭಿವೃದ್ಧಿ, ಕೃಷಿ, ಪರಿಸರ ಮಾಲಿನ್ಯ, ಜನಹೋರಾಟಗಳು ಇಂತಹ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ. ಪ್ರಸ್ತುತ ಸಮಸ್ಯೆ ಹಾಗೂ ಪರಿಹಾರಗಳ ಬಗ್ಗೆ ಅರಿಯಲು, ಮುಂದಿನ ದಿನಗಳಲ್ಲಿ ಕೊಪ್ಪಳ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯುವಜನರ ಐತಿಹಾಸಿಕ ಜವಾಬ್ದಾರಿಯನ್ನು ತಿಳಿಸಿಕೊಡಲು ಎರಡು ದಿನದ ಉಚಿತ ಶಿಬಿರ ಹಮ್ಮಿಕೊಂಡಿದ್ದು, ಭಾಗವಹಿಸುವ ಯುವಜನರಿಗೆ ಉಚಿತ ಊಟ ವಸತಿ ಕಲ್ಪಿಸಿದೆ.

ಈ ಶಿಬಿರದಲ್ಲಿ ಹೋರಾಟಗಾರರಾದ ಎಸ್.ಆರ್. ಹಿರೇಮಠ, ವಿ.ಎನ್. ರಾಜಶೇಖರ, ಬಸವರಾಜ ಸೂಳಿಭಾವಿ, ಕೃಷಿ ವಿಜ್ಞಾನಿ ರಾಜೇಂದ್ರ ಪೋತದಾರ, ಖ್ಯಾತ ಲೇಖಕ ಶಿವಸುಂದರ, ಕೊಪ್ಪಳ ಜಿಲ್ಲಾ ಬಚಾವೋ ಸಮಿತಿ ಪ್ರಮುಖ ನಾಯಕರಾದ ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್. ಪೂಜಾರ, ಕೆ.ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಟಿ. ರತ್ನಾಕರ ಅನೇಕರು ಮಾಹಿತಿ ಮಾರ್ಗದರ್ಶನ ಮಾಡುವರು.

ಶಿಬಿರ ಮತ್ತು ಮಾಲಿನ್ಯದ ಜನಜಾಗೃತಿ ಕಾರ್ಯದಲ್ಲಿ ಕೆ.ಬಿ. ಗೋನಾಳ, ಶರಣು ಗಡ್ಡಿ, ಶರಣು ಪಾಟೀಲ್, ಶರಣು ಶೆಟ್ಟರ, ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್. ಪೂಜಾರ, ಮಂಜುನಾಥ ಜಿ. ಗೊಂಡಬಾಳ, ಮುದಕಪ್ಪ ಹೊಸಮನಿ, ಕಾಶಪ್ಪ ಛಲವಾದಿ ಸೇರಿದಂತೆ ಅನೇಕರು ನಿರಂತರವಾಗಿ ಹಳ್ಳಿ-ಹಳ್ಳಿಗೆ ಸಂಚರಿಸಿ ಮಾಹಿತಿ ನೀಡಿದ್ದು, ಮುಂದಿನ ಬೃಹತ್ ಮತ್ತು ನಿರಂತರ ಹೋರಾಟಕ್ಕೆ ಅಣಿಯಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಕಸಿತ ಭಾರತ ಸಾಕಾರಕ್ಕೆ ಕೇಂದ್ರ ಬಜೆಟ್ ಪೂರಕ : ಕೆ ಜಿ ಬೋಪಯ್ಯ
ಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿದ ಯೋಧ ಸ್ವಗ್ರಾಮಕ್ಕೆ ಆಗಮನ