ಯಲ್ಲಾಪುರ: ನಾವು ಸತ್ಯದ ಕಡೆಗೆ ಸಾಗಬೇಕು. ನಮ್ಮ ಹಿರಿಯರು ರಾಮಾಯಣ, ಮಹಾಭಾರತದಂತಹ ನಮ್ಮ ಬದುಕಿಗೆ ಮಾರ್ಗದರ್ಶನ ನೀಡಬಲ್ಲ ದೊಡ್ಡ ಆಸ್ತಿಯನ್ನೇ ನೀಡಿ ಹೋಗಿದ್ದಾರೆ ಎಂದು ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ ಅಗ್ಗಾಶಿಕುಂಬ್ರಿ ಹೇಳಿದರು.ಪಟ್ಟಣದ ವಿಶ್ವದರ್ಶನದ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಓಂಕಾರ ಯೋಗಕೇಂದ್ರ ಮತ್ತು ವಿಶ್ವದರ್ಶನ ಸೇವಾದ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆ, ಉಪನ್ಯಾಸ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ ಮಹಾಭಾರತದ ಬಗ್ಗೆ ವ್ಯಾಸ, ಗಣಪತಿ ಹೇಗೆ ಲಕ್ಷಾಂತರ ಶ್ಲೋಕಗಳ ಮೂಲಕ ಬರೆದಿದ್ದಾರೆ ಎನ್ನುವ ಕುರಿತು ಹಾಗೂ ಕೂಟ ಶ್ಲೋಕಗಳ ಮಹತ್ವದ ಮಾಹಿತಿ ನೀಡಿದರು.
ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ, ಅಖಿಲಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನವರಮಠ ಮಾತನಾಡಿದರು.160 ವಿದ್ಯಾರ್ಥಿಗಳು ಪರೀಕ್ಷೆ ಬರೆದವರಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ರಾಮಾಯಣ ಪರೀಕ್ಷೆಯಲ್ಲಿ ವಿಲೋಕ ಭಟ್ ಪ್ರಥಮ, ಮಾನಸಾ ಗಾಂವ್ಕರ್ ದ್ವಿತೀಯ, ನವ್ಯಾ ಭಟ್ ತೃತೀಯ, ಅಕ್ಷರಾ ಹೆಗಡೆ ಚತುರ್ಥ, ದುರ್ಗಾ ಪ್ರಸಾದ ಐದನೇ ಸ್ಥಾನ ಪಡೆದರು.
ಪ್ರೌಢ ಶಾಲಾ ವಿಭಾಗದಲ್ಲಿ ಮಹಾಭಾರತ ಪರೀಕ್ಷೆಯಲ್ಲಿ ಸುಜಲಾ ಭಟ್ ಪ್ರಥಮ, ಶ್ರೀಶ ಭಟ್ ದ್ವಿತೀಯ, ನಂದಿತಾ ಭಟ್ ತೃತೀಯ, ಶ್ರೀರಕ್ಷಾ ವೆರ್ಣೆಕರ ಚತುರ್ಥ, ಅಮೋಘ ಭಟ್ಟ ಐದನೇ ಸ್ಥಾನ ಪಡೆದರು. ವಿಜೇತರಿಗೆ ನಗದು, ಪುಸ್ತಕ ಬಹುಮಾನ ವಿತರಿಸಲಾಯಿತು.ಪ್ರಾಂಶುಪಾಲ ಡಾ.ಡಿ.ಕೆ. ಗಾಂವ್ಕಾರ್, ಓಂಕಾರ ಯೋಗ ಕೇಂದ್ರದ ಮುಖ್ಯಸ್ಥ ಸುಬ್ರಾಯ ಭಟ್ಟ ಆನೆಜಡ್ಡಿ, ಶಿವಪ್ರಸಾದ ಭಟ್ ನಿರ್ವಹಿಸಿದರು. ಶ್ರೀರಾಮ ಲಾಲಗುಳಿ ಸ್ವಾಗತಿಸಿದರು. ನಾರಾಯಣ ಸಭಾಹಿತ ವಂದಿಸಿದರು.