ಕನ್ನಡಪ್ರಭ ವಾರ್ತೆ ಮಧುಗಿರಿ ಇತಿಹಾಸ ಪ್ರಸಿದ್ಧ ದಂಡಿಮಾರಮ್ಮ ಜಾತ್ರೆ ಯಶಸ್ವಿಯಾಗಿ ನಡೆಯಲು ಭಕ್ತಾದಿಗಳ ಸಹಕಾರ ಅತಿಮುಖ್ಯ ಎಂದು ಉಪವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಗೋಟೂರು ಶಿವಪ್ಪ ತಿಳಿಸಿದರು.
ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀದಂಡಿಮಾರಮ್ಮ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 11 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉತ್ಸವ ನಡೆಯಲಿದೆ. ತಾಯಿ ಆಶೀರ್ವಾದದಿಂದ ಬರಗಾಲ ಕಳೆದು ಸಮೃದ್ಧಿಯ ದಿನಗಳು ಬರಲಿ. ನೀತಿ ಸಂಹಿತೆ ಜಾರಿಯಲ್ಲಿದ್ದು, ಕಾನೂನು ಚೌಕಟ್ಟಿನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಂಡು ಜಾತ್ರೆಯನ್ನು ಸುಸೂತ್ರವಾಗಿ ನಡೆಸೋಣ. ದನಗಳ ಜಾತ್ರೆಗೆ ಬಂದಿದ್ದ ರೈತಾಪಿ ವರ್ಗದವರಿಗೆ ಸಕಾಲಕ್ಕೆ ಊಟ ಉಪಚಾರ ನೀಡಿದ್ದು, ಅವರಿಗೂ ಸಂತಸ ತಂದಿದೆ ಎಂದರು.ತಹಸೀಲ್ದಾರ್ ಸಬ್ಗತ್‌ವುಲ್ಲಾ ಮಾತನಾಡಿ, ಪಟ್ಟಣದ ಸುತ್ತಮುತ್ತಲ ಗ್ರಾಮಸ್ಥರು ಸಂಭ್ರಮದಿಂದ ಜಾತ್ರೆಯಲ್ಲಿ ಪಾಲ್ಗೊಂಡು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ ಪಾಲಿಸುತ್ತಿದ್ದಾರೆ. ಈ ಜಾತ್ರೆಯು ಸಮಾಜದಲ್ಲಿ ಸಾಮರಸ್ಯ ಮೂಡಿಸಲಿ ಎಂದರು.ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ಮಾತನಾಡಿ, ದೇಗುಲಕ್ಕೆ ಬರುವ ಭಕ್ತಾದಿಗಳಿಗೆ ಹೆಚ್ಚಿನ ಸೌಲಭ್ಯ ಒಗಿಸುವ ಜೊತೆಗೆ ದೇವಸ್ಥಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರು.ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಮಾತನಾಡಿ, ದೇವಸ್ಥಾನದ ಇತಿಹಾಸ ಮತ್ತು ದೇವಿಯ ಚರಿತ್ರೆ ಪರಿಚಯಿಸಿದರು. ಜಾತ್ರೆಗಳು ನಮ್ಮ ಪರಂಪರೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಮಾವೇಶವಾಗಿದ್ದು, ಎಲ್ಲ ಜಾತಿ ಪಂಗಡದವರನ್ನು ಭಾವ ನಾತ್ಮಕವಾಗಿ ಒಗ್ಗೂಡಿಸುವ ವಿಶೇಷ ಶಕ್ತಿ ಜಾತ್ರಗಳಿಗೆ ಇದೆ ಎಂದರು. ಸಿಪಿಐ ರವಿ ಮಾತನಾಡಿ, ಈ ಜಾತ್ರೆ ಯಶಸ್ವಿಯಾಗಿ ನಡೆಯಲು ನಮ್ಮ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು. ಚಿಕ್ಕಣ್ಣ, ಎಚ್.ಬಿ.ತಿಮ್ಮೇಗೌಡ, ಬಿ.ವೆಂಕಟೇಶಪ್ಪ, ಅಂಜಿನಪ್ಪ, ಹರಿನಾಥ್ ಗೌಡ, ಸಿದ್ಧಲಿಂಗಮೂರ್ತಿ, ಬ್ಯಾಟಣ್ಣ, ನಾಗೇಂದ್ರ, ಮಹಾಲಿಂಗಪ್ಪ, ರಾಮೇಗೌಡ, ಪ್ರಧಾನ ಅರ್ಚಕರಾದ ಎಂ.ಎನ್.ಅರುಣ್‌ಕುಮಾರ್, ಲಕ್ಷೀಕಾಂತ ಆಚಾರ್, ಮುರುಳಿ, ಚಂದನ್‌ಶರ್ಮ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸೇರಿ ಇತರರಿದ್ದರು.