ಬೆಂಗಳೂರು : ಬೆಂಗಳೂರು ಮೆಟ್ರೋ ರೈಲು ನಿಗಮವು ಬಹು ನಿರೀಕ್ಷಿತ ಹೆಬ್ಬಾಳ-ಸರ್ಜಾಪುರ ಮೆಟ್ರೋ ಮಾರ್ಗದ (3ಎ) ವಿಸ್ತ್ರತ ಯೋಜನಾ ವರದಿಯನ್ನು ರಾಜ್ಯ ಸರ್ಕಾರದ ಅನುಮೋದನೆಗೆ ಸಲ್ಲಿಸಿದೆ. 37 ಕಿಮೀ ಉದ್ದದ ಈ ಕಾರಿಡಾರ್‌ಗೆ ₹ 28,405 ಕೋಟಿ ವೆಚ್ಚ ಅಂದಾಜಿಸಲಾಗಿದೆ.
ರಾಜ್ಯ ಸರ್ಕಾರದ ಅನುಮತಿ ದೊರೆತ ಬಳಿಕ ಡಿಪಿಆರ್ ಕೇಂದ್ರಕ್ಕೆ ಸಲ್ಲಿಕೆ ಆಗಲಿದೆ. ಸದ್ಯಕ್ಕೆ ಯೋಜನೆಗೆ ಬೇಕಾದ ಶೇ.35ರಷ್ಟು ಮೊತ್ತ ಸಾಲದ ರೂಪದಲ್ಲಿ ಸಂಗ್ರಹಿಸಲು ನಿರ್ಧಾರವಾಗಿದೆ. ಭೂಸ್ವಾಧೀನಕ್ಕೆ ಅಗತ್ಯವಾದ ₹ 5ಸಾವಿರ ಕೋಟಿ ಸೇರಿ ಉಳಿದ ಮೊತ್ತವನ್ನು ರಾಜ್ಯ ಸರ್ಕಾರ ಹಾಗೂ ಇನ್ನುಳಿದ ಮೊತ್ತವನ್ನು ಕೇಂದ್ರ ಸರ್ಕಾರ ಭರಿಸಲಿವೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
ಹೆಚ್ಚಿದ ಯೋಜನಾ ವೆಚ್ಚ:
ಹಿಂದಿನ ಬಜೆಟ್‌ನಲ್ಲಿ ಈ ಮಾರ್ಗ ನಿರ್ಮಾಣಕ್ಕೆ ₹15 ಸಾವಿರ ಕೋಟಿ ಯೋಜನಾ ವೆಚ್ಚ ಅಂದಾಜಿಸಲಾಗಿತ್ತು. ಆದರೆ, ಡಿಪಿಆರ್ ಪೂರ್ಣಗೊಳ್ಳುವ ವೇಳೆಗೆ ₹ 28,405 ಕೋಟಿಗೆ ತಲುಪಿದೆ. ಮೆಟ್ರೋ ಮೊದಲ ಹಂತ 42 ಕಿಮೀ ಯೋಜನೆಗೆ ₹ 14,133.11 ಕೋಟಿ ವ್ಯಯವಾಗಿತ್ತು. ಎರಡನೇ ಹಂತದ 72 ಕಿಮೀ ಕಾಮಗಾರಿ ಪೂರ್ಣಗೊಳ್ಳುವ ತನಕ ₹ 32ಸಾವಿರ ಕೋಟಿ ವೆಚ್ಚವಾಗುವ ನಿರೀಕ್ಷೆಯಿದೆ. ಮೆಟ್ರೋ 2ಎ,2ಬಿ ಯೋಜನೆಗೆ ₹ 14,788 ಕೋಟಿ ಮೊತ್ತ ನಿಗದಿಯಾಗಿದೆ.
ಡಿಪಿಆರ್ ಪ್ರಕಾರ ಸರ್ಜಾಪುರದಿಂದ ಕೋರಮಂಗಲ 3ನೇ ಬ್ಲಾಕ್‌ವರೆಗೆ ಎತ್ತರಿಸಿದ ಮಾರ್ಗದಲ್ಲಿ 17 ನಿಲ್ದಾಣಗಳು ಹಾಗೂ ಕೋರಮಂಗಲ 2ನೇ ಬ್ಲಾಕ್‌ನಿಂದ ಸುರಂಗ ಮೂಲಕವಾಗಿ ವೆಟರ್ನರಿ ಕಾಲೇಜಿ ನವರೆಗೆ 11 ನಿಲ್ದಾಣಗಳು ನಿರ್ಮಾಣ ಆಗಲಿವೆ. ಗಂಗಾನಗರ, ಹೆಬ್ಬಾಳ ನಿಲ್ದಾಣಗಳು ಎತ್ತರಿಸಿದ ಮಾರ್ಗದಲ್ಲಿರಲಿವೆ. 14.44 ಕಿಮೀ ಸುರಂಗ ಹಾಗೂ 22.15 ಕಿಮೀ ಎತ್ತರಿಸಿದ ಮಾರ್ಗವನ್ನು ಈ ಯೋಜನೆ ಒಳಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲೆಲ್ಲಿ ಇಂಟರ್‌ಚೇಂಜ್ ?:
ಇಬ್ಬಲೂರು ಬಳಿ ‘ನೀಲಿ’ ಮಾರ್ಗಕ್ಕೆ ( ಸೆಂಟ್ರಲ್ ಸಿಲ್ಕ್ ಬೋರ್ಡ್- ಕೆ.ಆರ್.ಪುರ), ಡೈರಿ ಸರ್ಕಲ್ ಬಳಿ ‘ಗುಲಾಬಿ’ ಮಾರ್ಗಕ್ಕೆ ( ಕಾಳೇನ ಅಗ್ರಹಾರ-ನಾಗವಾರ ), ‘ನೇರಳೆ’ ಮಾರ್ಗಕ್ಕೆ ಕೆ.ಆರ್.ಸರ್ಕಲ್ (ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣ) ಹಾಗೂ ಹೆಬ್ಬಾಳದಲ್ಲಿ ‘ನೀಲಿ’ ಮಾರ್ಗಕ್ಕೆ ( ಕೆ.ಆರ್.ಪುರ- ಕೆಐಎ ವಿಮಾನ ನಿಲ್ದಾಣ) ಇಂಟರ್‌ಚೇಂಜ್ ನಿಲ್ದಾಣಗಳು ನಿರ್ಮಾಣ ಆಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಕಳೆದ ವಾರ ಬಿಎಂಆರ್‌ಸಿಎಲ್‌ನಿಂದ ರಾಜ್ಯ ಸರ್ಕಾರಕ್ಕೆ ಡಿಪಿಆರ್ ಸಲ್ಲಿಸಿದ್ದೇವೆ ಎಂದು ನಿಗಮದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು. ರಿನಾ ಕನ್ಸಲ್ಟಿಂಗ್ ಸಂಸ್ಥೆ ಡಿಪಿಆರ್ ಸಿದ್ಧಪಡಿಸಿದೆ. ರಾಜ್ಯ ಸರ್ಕಾರ ಸೂಚಿಸುವ ಬದಲಾವಣೆಯೊಂದಿಗೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು. ಕೇಂದ್ರವೂ ಹಲವು ಬದಲಾವಣೆ ಸೂಚಿಸಬಹುದು. ಯೋಜನೆಗೆ ಅಂತಿಮವಾಗಿ ಕೇಂದ್ರದ ಹಸಿರು ನಿಶಾನೆಗೆ ವರ್ಷಾವಧಿ ಹಿಡಿಯಬಹುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಸಂಭಾವ್ಯ ನಿಲ್ದಾಣಗಳು
ಸರ್ಜಾಪುರ (ಡಿಪೋ), ಕಾಡ ಅಗ್ರಹಾರ, ಸೋಮಾಪುರ, ದೊಮ್ಮಸಂದ್ರ, ಮಲ್ಲತ್ತೂರು ಕ್ರಾಸ್, ಕೊಡತಿ ಗೇಟ್, ಅಂಬೇಡ್ಕರ್ ನಗರ, ಕಾರ್ಮೆಲ್‌ರಾಂ, ದೊಡ್ಡಕನ್ನೆಲ್ಲಿ, ಕೈಕೊಂಡರಹಳ್ಳಿ, ಬೆಳ್ಳಂದೂರು ಗೇಟ್, ಇಬ್ಬಲೂರ್, ಆಗರ, ಜಕ್ಕಸಂದ್ರ, ಕೋರಮಂಗಲ 3ನೇ ಬ್ಲಾಕ್, ಕೋರಮಂಗಲ 2ನೇ ಬ್ಲಾಕ್, ಡೈರಿ ಸರ್ಕಲ್, ನಿಮ್ಹಾನ್ಸ್, ಶಾಂತಿ ನಗರ, ಟೌನ್ ಹಾಲ್, ಕೆ.ಆರ್.ಸರ್ಕಲ್, ಬಸವೇಶ್ವರ ವೃತ್ತ, ಗಾಲ್ಫ್ ಕೋರ್ಸ್, ಪ್ಯಾಲೇಸ್ ಗುಟ್ಟಳ್ಳಿ, ಮೇಖ್ರಿ ವೃತ್ತ, ವೆಟರ್ನರಿ ಕಾಲೇಜು, ಗಂಗಾನಗರ, ಹೆಬ್ಬಾಳ.
1 ಕಿಮೀಗೆ ₹ 768ಕೋಟಿ!:
ಡಿಪಿಆರ್ ಪ್ರಕಾರ 3ಎ ಮೆಟ್ರೋ ಮಾರ್ಗದ ಪ್ರತಿ 1ಕಿಮೀ ಗೆ ₹ 768 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಮೆಟ್ರೋ ಮೊದಲ ಹಂತದದ ಯೋಜನೆಗೆ ಪ್ರತಿ ಕಿಮೀಗೆ ₹ 334.11 ಕೋಟಿ, ಎರಡನೇ ಹಂತದ ಯೋಜನೆಯಲ್ಲಿ ಪ್ರತಿ 1ಕಿಮೀಗೆ ₹ 408.93 ಕೋಟಿ, 2ಎ,2ಬಿ ಹಂತದ ಯೋಜನೆಯಲ್ಲಿ ಪ್ರತಿ 1ಕಿಮೀಗೆ ₹ 254.13ಕೋಟಿ ವೆಚ್ಚವಾಗುತ್ತಿದೆ. ಇನ್ನು ಕೇಂದ್ರದ ಒಪ್ಪಿಗೆಗೆ ಬಾಕಿ ಇರುವ 3ನೇ ಹಂತದಲ್ಲಿ ಪ್ರತಿ 1ಕಿಮೀ ಗೆ ₹ 349.63 ಕೋಟಿ ವೆಚ್ಚ ಅಂದಾಜಿಸಲಾಗಿದೆ.