ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆಯಲ್ಲಿ ವ್ಯಕ್ತವಾದ ದೂರುಗಳಿಗೆ ಅವರು ಪ್ರತಿಕ್ರಿಯಿಸಿದರು.
ಮಂಗಳಮುಖಿಯರಿಗೆ ವಸತಿ, ಉದ್ಯೋಗ ಸೇರಿದಂತೆ ಅವರ ಬದುಕಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು, ಹೀಗೆ ಮಾಡಿದರೆ ಸಾರ್ವಜನಿಕರಿಗೆ ಅವರು ತೊಂದರೆ ನೀಡುವುದು ತಪ್ಪಲಿದೆ ಎಂದು ದಲಿತ ಮುಖಂಡರು ಒತ್ತಾಯಿಸಿದರು.ಸದಾಶಿವ ಉರ್ವಸ್ಟೋರ್ ಮಾತನಾಡಿ, ಕದ್ರಿ ಪಾರ್ಕ್ ಸೇರಿದಂತೆ ಅನೇಕ ಕಡೆಗಳಲ್ಲಿ ಮಂಗಳಮುಖಿಯರು ರಾತ್ರಿ ವೇಳೆ ವಾಹನ ನಿಲ್ಲಿಸಿ ಸಮಸ್ಯೆಗೀಡುಮಾಡುತ್ತಿದ್ದಾರೆ. ಅವರ ಮನಃಪರಿವರ್ತನೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರೆ, ಕೆಲವರು ಮಂಗಳಮುಖಿಯರಂತೆ ವೇಷ ಹಾಕಿ ಲೂಟಿ ಮಾಡುತ್ತಿದ್ದಾರೆ. ಈ ಹಿಂದೆ ಮಂಗಳಮುಖಿಯರಿಗೆ ಜಿಲ್ಲಾಡಳಿತದಿಂದ ನೀಡಲಾದ ಗುರುತಿನ ಕಾರ್ಡ್ ಪರಿಶೀಲನೆ ನಡೆಸಬೇಕು ಎಂದು ದಲಿತ ಮುಂದಾಳು ಎಸ್.ಪಿ.ಆನಂದ ಒತ್ತಾಯಿಸಿದರು.
ಪ್ರತಿಕ್ರಿಯಿಸಿದ ಡಿಸಿಪಿ ದಿನೇಶ್ ಕುಮಾರ್, ಕದ್ರಿ ಪಾರ್ಕ್ ಬಳಿ ಪೊಲೀಸ್ ಪಾಯಿಂಟ್ ವ್ಯವಸ್ಥೆ, ಮಂಗಳಮುಖಿಯರಿಗೆ ಸೂಕ್ತ ಎಚ್ಚರಿಕೆ, ಬೀದಿದೀಪ ಅಳವಡಿಕೆ ಮಾಡಲಾಗಿದೆ. ಸಮಸ್ಯೆ ಶಾಶ್ವತವಾಗಿ ಪರಿಹಾರ ಕಾಣಲು ಮಂಗಳಮುಖಿಯರಿಗೆ ಪುನರ್ವಸತಿ ಕಲ್ಪಿಸುವ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು ಎಂದು ಹೇಳಿದರು.
ನಾಗೇಶ್ ಕೈರಂಗಳ ಮಾತನಾಡಿ, ದಲಿತರ ಕಾಲನಿಗಳಲ್ಲಿ ತಿಂಗಳಿಗೊಮ್ಮೆ ಪೊಲೀಸರು ಸಭೆ ನಡೆಸಬೇಕು ಎಂದು ಮನವಿ ಮಾಡಿದರು. ಪ್ರತಿಕ್ರಿಯಿಸಿದ ಡಿಸಿಪಿ ಸಿದ್ದಾರ್ಥ್ ಗೋಯಲ್, ಈ ಹಿಂದೆ ನಡೆಯುತ್ತಿದ್ದಂತೆ ಪ್ರತಿ ತಿಂಗಳು ಸಭೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಿನ್ನಿಗೋಳಿ ಪರಿಸರ ಸೇರಿದಂತೆ ಅನೇಕ ಕಡೆ ಬಿಳಿ ಬಣ್ಣ ಬಳಿಯದೆ ಹಂಪ್ಸ್ ನಿರ್ಮಿಸಿದ್ದರಿಂದ ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸುವಂತೆ ಅನೇಕರು ಮನವಿ ಮಾಡಿದರು. ಎಎಸ್‌ಪಿ ಜಗದೀಶ್ ಇದ್ದರು. ಎಸಿಪಿ ಮನೋಜ್ ನಾಯಕ್ ನಿರ್ವಹಿಸಿದರು.