ಸುಬ್ರಹ್ಮಣ್ಯೇಶ್ವರ ಬ್ಯಾಂಕ್‌ಗೆ ಸುವರ್ಣ ಮಹೋತ್ಸವ

KannadaprabhaNewsNetwork |  
Published : Jun 24, 2024, 01:36 AM IST
ಶ್ರೀ ಸುಬ್ರಮಣ್ಯೇಶ್ವರ ಸಹಕಾರ ಬ್ಯಾಂಕ್‌ನ ‘ಸುವರ್ಣ ಮಹೋತ್ಸವ’ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು. ಸಚಿವ ಎಚ್.ಕೆ.ಪಾಟೀಲ್, ಶಾಸಕ ಉದಯ್ ಗರುಡಾಚಾರ್, ಬ್ಯಾಂಕಿನ ಅಧ್ಯಕ್ಷ ಡಾ.ಕೆ.ಎಂ.ರಂಗಧಾಮ ಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ದೇಶದ ಆರ್ಥಿಕತೆಯಲ್ಲಿ ಪ್ರಮುಖ ಸ್ಥಾನ ಹೊಂದಿರುವ ಸಹಕಾರ ಬ್ಯಾಂಕುಗಳು, ನಾಗರಿಕರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇಶದ ಆರ್ಥಿಕತೆಯಲ್ಲಿ ಪ್ರಮುಖ ಸ್ಥಾನ ಹೊಂದಿರುವ ಸಹಕಾರ ಬ್ಯಾಂಕುಗಳು, ನಾಗರಿಕರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಹೇಳಿದ್ದಾರೆ.

ಭಾನುವಾರ ನಗರದ ಅರಮನೆ ಮೈದಾನದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಸಹಕಾರ ಬ್ಯಾಂಕ್‌ನ ‘ಸುವರ್ಣ ಮಹೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಸ್ಪರ ಸಹಕಾರದೊಂದಿಗೆ ಸದಸ್ಯರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿರುವ ಸಹಕಾರ ಬ್ಯಾಂಕುಗಳು ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತಿವೆ. ಸುಲಭ ಸಾಲ, ಕಡಿಮೆ ಬಡ್ಡಿ, ಸ್ಥಳೀಯ ಆರ್ಥಿಕತೆಗೆ ಬೆಂಬಲ, ಲಾಭಾಂಶ ವಿತರಣೆ, ಪ್ರಜಾಸತ್ತಾತ್ಮಕ ಆಡಳಿತ, ಸಾಮಾಜಿಕ ಜವಾಬ್ದಾರಿ ಮತ್ತು ಪಾರದರ್ಶಕತೆ ಕಾಪಾಡುವ ಮೂಲಕ ಜನರು ಮತ್ತು ಸಣ್ಣ ಉದ್ಯಮಿಗಳ ಮೊದಲ ಆಯ್ಕೆಯಾಗಿವೆ ಎಂದರು.

2023-24ರ ಹಣಕಾಸು ವರ್ಷದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಸಹಕಾರ ಬ್ಯಾಂಕ್ ₹8.83 ಕೋಟಿ ನಿವ್ವಳ ಲಾಭ ಗಳಿಸಿದೆ. ಸತತ 7 ವರ್ಷಗಳಿಂದ ತನ್ನ ಸದಸ್ಯರಿಗೆ ಶೇ.25ರಷ್ಟು ಲಾಭಾಂಶವನ್ನು ನೀಡಿದ ಕರ್ನಾಟಕ ರಾಜ್ಯದ ಮೊದಲ ಬ್ಯಾಂಕ್ ಎಂದು ತಿಳಿದು ಸಂತೋಷವಾಯಿತು. ‘ಎಲ್ಲರ ಜೊತೆಗೆ, ಎಲ್ಲರ ಅಭಿವೃದ್ಧಿ’ ತತ್ವದಲ್ಲಿ 1971ರಲ್ಲಿ ಆರಂಭವಾಗಿ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತೋಷದ ವಿಷಯವಾಗಿದೆ. ಮುಂದೆಯು ಇದೇ ರೀತಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿ ಎಂದು ರಾಜ್ಯಪಾಲರು ಶುಭ ಹಾರೈಸಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಯಾವುದೇ ಅಪೇಕ್ಷೆ ಇಲ್ಲದೇ ಸಣ್ಣ ವ್ಯಾಪಾರಿಗಳಿಗೆ ಅತಿ ಸುಲಭ ಸಾಲ ನೀಡುತ್ತಿರುವುದು ಸಹಕಾರ ಬ್ಯಾಂಕ್‌ಗಳು. ಆದರೆ, ಸಹಕಾರ ಬ್ಯಾಂಕ್‌ಗಳು ಸಮಸ್ಯೆಗೆ ಸಿಲುಕಿದರೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಯಾವುದೇ ಸಹಕಾರ ನೀಡುವುದಿಲ್ಲ. ಕೇಂದ್ರ ಸರ್ಕಾರ ದೊಡ್ಡ ಬ್ಯಾಂಕ್‌ಗಳ ಸಾಲವನ್ನು ಮನ್ನಾ ಮಾಡಿ ಅನುಕೂಲ ಮಾಡಿಕೊಟ್ಟಿದೆ ಎಂದರು.

ಶಾಸಕ ಉದಯ್ ಗರುಡಾಚಾರ್, ಬ್ಯಾಂಕಿನ ಅಧ್ಯಕ್ಷ ಡಾ। ಕೆ.ಎಂ.ರಂಗಧಾಮ ಶೆಟ್ಟಿ, ಉಪಾಧ್ಯಕ್ಷ ವಿಜಯಸಾರಥಿ, ಪ್ರಧಾನ ವ್ಯವಸ್ಥಾಪಕ ಕೃಷ್ಣಯ್ಯ ಶೆಟ್ಟಿ ಉಪಸ್ಥಿತರಿದ್ದರು.

PREV

Recommended Stories

ಗ್ರಾಪಂ ವ್ಯಾಪ್ತಿ ಎಲ್ಲಾ ಆಸ್ತಿ ತೆರಿಗೆಗೆ ನಿಯಮ ಪ್ರಕಟ
ತರಬೇತಿ ನೀಡಿದಾಕ್ಷಣ ಯುವನಿಧಿ ನಿಲ್ಲಲ್ಲ : ಸಿಎಂ