ಕನ್ನಡಪ್ರಭ ವಾರ್ತೆ ಅಥಣಿ
ತಾಲೂಕಿನ ಗಡಿಗ್ರಾಮ, ನಂದಿ ಬಸವಣ್ಣನ ಐಕ್ಯಸ್ಥಳ ಖಿಳೇಗಾವಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಗ್ರಾಮದಲ್ಲಿ ವಿಶೇಷ ಕನ್ನಡ ಜಾಗೃತಿ ಜಾತ ನಡೆಸುವ ಮೂಲಕ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಸನ್ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭದ ದಿನವಾದ ಜೂ.1 ರಂದು ಶಾಲೆಯಲ್ಲಿ ತಳಿರು ತೋರಣಗಳನ್ನ ಕಟ್ಟಿ, ಬಣ್ಣ ಬಣ್ಣದ ಬಲೂನ್‌ಗಳನ್ನು ಕಟ್ಟಿ ಅಲಂಕರಿಸಲಾಗಿತ್ತು. ವಿದ್ಯಾರ್ಥಿಗಳು ಪೇಪರ್ ಟೋಪಿ ಧರಿಸುವ ಮೂಲಕ ಜನ ಜಾಗೃತಿ ಆಂದೋಲನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅಲಂಕರಿಸಿದ ಜೋಡೆತ್ತಿನ ಚಕ್ಕಡಿಯೊಂದಿಗೆ ವಿವಿಧ ವಾದ್ಯಮಿಗಳ ಮೂಲಕ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಸೇರಿದಂತೆ ಅನೇಕ ಮಹಾಪುರುಷರ ವೇಷದಾರಿಗಳಾಗಿ ಆಗಮಿಸಿದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಿ, ಮಾತೃಭಾಷೆ ಕನ್ನಡ ಮತ್ತು ಕನ್ನಡ ಶಾಲೆಗಳನ್ನು ಉಳಿಸಿ, ನಮ್ಮ ಸರ್ಕಾರಿ ಶಾಲೆ, ನಮ್ಮ ಹೆಮ್ಮೆ ಎಂಬ ಘೋಷಣೆಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಶಾಲೆಯಿಂದ ಪ್ರಾರಂಭವಾದ ಮೆರವಣಿಗೆ ಬಸವೇಶ್ವರ ದೇವಸ್ಥಾನದ ಸುತ್ತಲೂ ಇರುವ ಜನವಸತಿ ಪ್ರದೇಶಗಳಲ್ಲಿ ಸಂಚರಿಸಿ ಜನಜಾಗೃತಿ ಮೂಡಿಸಿ ಶಾಲೆ ಆವರಣದಲ್ಲಿ ಸಮಾರೋಪಗೊಂಡಿತು. ಕರವೇ ಕಾರ್ಯಕರ್ತರಿಂದ ಜಾಗೃತಿ:
ಈ ವೇಳೆ ಕರವೇ ತಾಲೂಕು ಅಧ್ಯಕ್ಷ ಉದಯ ಮಕಾಣಿ ನೇತೃತ್ವದಲ್ಲಿ ಕನ್ನಡಪರ ಹೋರಾಟಗಾರರು ವಿವಿಧ ಕುಟುಂಬದ ಸದಸ್ಯರಿಗೆ, ವ್ಯಾಪಾರಸ್ಥರಿಗೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವ ಮೂಲಕ ನಮ್ಮೂರಿನ ಸರ್ಕಾರಿ ಶಾಲೆಗಳನ್ನ ಉಳಿಸಿ, ಬೆಳೆಸಿರಿ, ಕನ್ನಡ ಉಳಿದರೆ ಕನ್ನಡ ಶಾಲೆಗಳು ಉಳಿಯುತ್ತವೆ. ಮಕ್ಕಳಿಗೆ ಮಾತೃಭಾಷೆಯಲ್ಲಿ ಕನ್ನಡ ಶಿಕ್ಷಣ ನೀಡಿ ಎಂದು ಮನವಿ ಮಾಡಿದರು.ಪಠ್ಯಪುಸ್ತಕ ಸಮವಸ್ತ್ರ ವಿತರಣೆ :ಶಾಲೆಯ ಆವರಣದಲ್ಲಿ ವಿದ್ಯಾದೇವತೆ ಸರಸ್ವತಿ ಹಾಗೂ ಗ್ರಾಮ ದೇವತೆ ಬಸವಣ್ಣನ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಶಾಲಾ ಮಕ್ಕಳಿಗೆ ಸಿಹಿ ಹಂಚಿ , ಪುಸ್ತಕ ಮತ್ತು ಸಮವಸ್ತ್ರ ವಿತರಿಸಿ ಪುಷ್ಪವೃಷ್ಟಿ ಮಾಡುವ ಮೂಲಕ ಮಕ್ಕಳನ್ನು ಶಾಲೆಗೆ ಸ್ವಾಗತಲಾಯಿತು. ಈ ವೇಳೆ ದೇವಸ್ಥಾನ ಅಭಿವೃದ್ಧಿ ಸಮಿತಿಯ ಹಿರಿಯ ಸದಸ್ಯ ಮುರುಗೇಶ ಬಾನಿ ಮಾತನಾಡಿ, ಶಾಲೆಯ ಮಕ್ಕಳು ಕಳೆದೆರಡು ತಿಂಗಳು ಸರ್ಕಾರಿ ರಜೆಯನ್ನು ಮುಗಿಸಿ ಇಂದು ಮತ್ತೆ ತಮ್ಮ ಮುಂದಿನ ಶೈಕ್ಷಣಿಕ ಜೀವನಕ್ಕೆ ಈ ಜ್ಞಾನ ದೇಗುಲಕ್ಕೆ ಆಗಮಿಸುತ್ತಿದ್ದಾರೆ. ಶಾಲೆಯ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿನೂತನ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿರುವುದು ಶ್ಲಾಘನೀಯ. ಎಚ್.ಶಿವರಾಮೇಗೌಡ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಬ ತೆಲಸಂಗ ಮಾತನಾಡಿ, ಗಡಿ ಭಾಗದ ಅನೇಕ ಕನ್ನಡ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಜೊತೆಗೆ ವಿಷಯವಾರು ಶಿಕ್ಷಕರ ಕೊರತೆ ಇದೆ. ಶಿಕ್ಷಣ ಇಲಾಖೆ ಮತ್ತು ರಾಜ್ಯ ಸರ್ಕಾರ ಕೂಡಲೇ ಅತಿಥಿ ಶಿಕ್ಷಕರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವುದರ ಜೊತೆಗೆ ಈ ಶಾಲೆಯಲ್ಲಿ ಪ್ರಸಕ್ತ ವರ್ಷದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಕೂಡ ಆರಂಭವಾಗಿದೆ. ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವ ಮೂಲಕ ಮಕ್ಕಳಿಗೆ ಇತರ ಭಾಷೆಗಳನ್ನು ಕಲಿಯಲು ಶಿಕ್ಷಕರು ಮಾರ್ಗದರ್ಶನ ಮಾಡಬೇಕು. ಈ ಶಾಲೆಗೆ ಕೊರತೆ ಇರುವ ಮೂಲಭೂತ ಸೌಲಭ್ಯ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಒತ್ತಾಯಿಸಿದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬಸಪ್ಪ ಜಗಳಗಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಮ್ಮೂರಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ವರ್ಷದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯಲು ಅವಕಾಶ ನೀಡಿರುವುದು ಸಂತಸದ ಸಂಗತಿ. ಇದರ ಜೊತೆಗೆ ನಮ್ಮ ಶಾಲೆಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ, ಇನ್ನಷ್ಟು ಕೊಠಡಿಗಳ ಸೌಲಭ್ಯ, ಮತ್ತು ಮಹಿಳಾ ಶೌಚಾಲಯ, ಕಾಂಪೌಂಡ್ ಗೋಡೆಯನ್ನು ಎತ್ತರಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಇಂದಿನಿಂದ ಶಾಲೆ ಆರಂಭಗೊಂಡಿದ್ದು, ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ಶ್ರಮಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಎ.ಪಿ.ಪವಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ಮಹೇಶ್ ಉಮರೆ, ಸಂಪನ್ಮೂಲ ಅಧಿಕಾರಿ ಮಹಾಂತೇಶ ಕೂಳ್ಳೋಳ್ಳಿ, ನಾವಿ ಹಾಗೂ ಜಿ.ಎ.ಕೊಷ್ಟಿ ಸೇರಿದಂತೆ ಶಾಲೆಯ ಶಿಕ್ಷಕರಾದ ಟಿ.ಜೆ.ಪೂಜಾರಿ, ವಿಜಯಲಕ್ಷ್ಮೀ ಶೇಟ್, ಎ.ಆಫ್.ಕಮಲಾಪುರೆ, ಕವಿತಾ ನಿಡೋಣಿ, ಪಿ.ಪಿ.ಪೂಜಾರಿ, ಕರವೇ ಅಧ್ಯಕ್ಷ ಉದಯ ಮಾಕಾಣಿ, ಜಗನ್ನಾಥ ಬಾಮನೆ, ಸಿದ್ದು ಹಂಡಗಿ, ಅಣ್ಣಾಸಾಬ ತೆಲಸಂಗ, ಸತೀಶ್ ಯಲ್ಲಟ್ಟಿ, ಶಿರಾಜ್ ಸನದಿ, ಮಹಾಂತೇಶ್ ಹಲವಾಯಿ, ಕುಮಾರ್ ಬಡಿಗೇರ, ಅನಿಲ್ ಒಡಿಯರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕರವೇ ಮುಖಂಡರ ಆಗಮನದಿಂದ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ಬಂದಿದೆ. ಗಡಿಭಾಗದಲ್ಲಿ ಕನ್ನಡ ಜಾಗೃತಿ ಆಗಬೇಕು. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸರ್ಕಾರ ಖಿಳಿಗಾವಿಯಲ್ಲಿ ಕನ್ನಡ ಭವನವನ್ನ ಸ್ಥಾಪನೆ ಮಾಡಿ ಕನ್ನಡ ಭಾಷೆಯ ಅಭಿವೃದ್ಧಿಗೆ ಅನುದಾನ ನೀಡಬೇಕು.
-ಮುರುಗೇಶ ಬಾನಿ, ಶಿಕ್ಷಣ ಪ್ರೇಮಿ.