ರಾಮನಗರ: ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸರ್ವತೋಮುಖ ಅಭಿವೃದ್ದಿಗೆ ಹಾಗೂ ಶಿಕ್ಷಣ, ಆರೋಗ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿ ಜಿಲ್ಲೆಯನ್ನು ಮುಂಚೂಣಿಗೆ ತರುವ ಉದ್ದೇಶದಿಂದ ಸಮಗ್ರ ಜಿಲ್ಲಾ ಅಭಿವೃದ್ಧಿ ಯೋಜನೆ ಸಿದ್ಧಪಡಿಸಿ ಅನುಮೋದಿಸಬೇಕಿದೆ. ಈ ಯೋಜನೆಗೆ ವರದಿ ಸಲ್ಲಿಸದ ಇಲಾಖೆಗಳು ಜ.27ರೊಳಗೆ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷ ರಾಮಲಿಂಗಾರೆಡ್ಡಿ ಸೂಚನೆ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆಗಳು ಸೇರಿ ಒಟ್ಟು 35 ಇಲಾಖೆಗಳು ಜಿಲ್ಲಾಭಿವೃದ್ಧಿಗೆ ಅನುದಾನ ಕೋರಿ ವರದಿ ಸಲ್ಲಿಸಿವೆ, ಆದರೆ ವರದಿ ಸಲ್ಲಿಸದ ಕೆಲವು ಇಲಾಖೆಗಳು ಕೂಡಲೇ ವರದಿ ಸಲ್ಲಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹಕರಿಸುವಂತೆ ಸಚಿವರು ತಿಳಿಸಿದರು.
2026-27ನೇ ಸಾಲಿಗೆ ಜಿಲ್ಲಾ ಅಭಿವೃದ್ಧಿಗೆ 35 ಇಲಾಖೆಗಳಿಂದ ಒಟ್ಟಾರೆ 2,685 ಕೋಟಿ ರು. ಅನುದಾನ ಕೋರಿ ಪ್ರಸ್ತಾವಗಳು ಸ್ವೀಕೃತವಾಗಿದೆ. ವರದಿ ನೀಡದ ಇಲಾಖೆಗಳು ತಮಗೆ ಅವಶ್ಯವಿರುವ ಅನುದಾನದ ಮಾಹಿತಿ ನೀಡಿದರೆ ಅಂತಿಮಗೊಳಿಸಿ ರಾಜ್ಯ ಯೋಜನಾ ಸಮಿತಿ ಸಭೆಗೆ ಮಾಹಿತಿ ಸಲ್ಲಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.ಸಭೆಯಲ್ಲಿ ರಾಮನಗರ ನಗರಸಭೆ ಅಧ್ಯಕ್ಷ ಹಾಗೂ ಜಿಲ್ಲಾ ಯೋಜನಾ ಸಮಿತಿ ಉಪಾಧ್ಯಕ್ಷರಾದ ಶೇಷಾದ್ರಿ (ಶಶಿ), ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಯೋಜನಾ ಸಮಿತಿ ಸದಸ್ಯ ಕಾರ್ಯದರ್ಶಿ ಅನ್ಮೋಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಅಪರ ಜಿಲ್ಲಾಧಿಕಾರಿ ಚಂದ್ರಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ, ಜಿಪಂ ಉಪ ಕಾರ್ಯದರ್ಶಿ ಧನರಾಜ್ ಉಪಸ್ಥಿತರಿದ್ದರು.
22ಕೆಆರ್ ಎಂಎನ್ 4.ಜೆಪಿಜಿರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರಥಮ ಯೋಜನಾ ಸಮಿತಿ ಸಭೆ ನಡೆಯಿತು.