ಬಳ್ಳಾರಿ: ಜಿಲ್ಲೆಯಲ್ಲಿ ಆರೋಗ್ಯ ಸೇವೆಗಳು ಪ್ರತಿಯೊಬ್ಬರಿಗೂ ಸರಿಯಾದ ಸಮಯದಲ್ಲಿ ಲಭ್ಯವಾಗಬೇಕು. ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಪ್ರಸ್ತುತ 20 ನಮ್ಮ ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸುತ್ತಿವೆ. ನಗರ ಪ್ರದೇಶಗಳ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಕಾಲದಲ್ಲಿ ಆರೋಗ್ಯ ಸೇವೆ ಸಿಗುವಂತಾಗಲು, ಅವಶ್ಯಕತೆ ಇರುವ ಕಡೆಗಳಲ್ಲಿ ಹೊಸ ನಮ್ಮ ಕ್ಲಿನಿಕ್‌ಗಳನ್ನು ತೆರೆಯಲು ಪ್ರಸ್ತಾವನೆ ಸಲ್ಲಿಸುವಂತೆ ಸಿಇಒ ಸೂಚಿಸಿದರು.
ತಾಯಿ-ಶಿಶು ಮರಣ ತಡೆಗೆ ಕ್ರಮ:ಗರ್ಭಿಣಿಯರ ದಾಖಲಾತಿಯನ್ನು ಕಡ್ಡಾಯವಾಗಿ 12 ವಾರಗಳ ಒಳಗೆ ವರದಿ ನೀಡಬೇಕು. ಇದರಿಂದ ಗರ್ಭಿಣಿಯರಲ್ಲಿ ಆರೋಗ್ಯ ಸಮಸ್ಯೆಗಳಿದ್ದರೆ ಬೇಗನೆ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ತಾಯಿ-ಶಿಶು ಮರಣವನ್ನು ತಡೆಯಬಹುದು ಎಂದು ತಿಳಿಸಿದರು.
ಹೆಚ್ಚಿನ ಆರೋಗ್ಯ ಅಪಾಯ ಹೊಂದಿರುವ (ತೊಡಕಿನ) ಗರ್ಭಿಣಿಯರಿಗೆ ಪಿಎಂಎಸ್‌ಎಂಎ, ಇಪಿಎಂಎಸ್ಎಂಎ ಹಾಗೂ ನಿಯಮಿತ ಆರೋಗ್ಯ ತಪಾಸಣೆಗಳ ಸಮಯದಲ್ಲಿ ವಿಶೇಷ ಆದ್ಯತೆ ನೀಡಿ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.
ಆರ್ಬಿಎಸ್ಕೆ ವೈದ್ಯಕೀಯ ತಂಡ ಜಿಲ್ಲೆಯ ಸುಮಾರು 80 ಹಾಸ್ಟೆಲ್‌ಗಳಿಗೆ ಪ್ರತಿ ತಿಂಗಳು ಕನಿಷ್ಠ ಒಂದು ಬಾರಿಯಾದರೂ ಭೇಟಿ ನೀಡಬೇಕು. ಅಲ್ಲಿನ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಬೇಕು. ಮುಂಗಾರು ಮಳೆ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಜೊತೆಗೆ ನಾಯಿ ಕಡಿತ ಮತ್ತು ಹಾವು ಕಡಿತದ ಕುರಿತು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಜಿಲ್ಲೆಯ ಕುಡಿಯುವ ನೀರಿನ ಮೂಲಗಳನ್ನು ನಿಯಮಿತವಾಗಿ ಪರೀಕ್ಷಿಸಬೇಕು ಮತ್ತು ಗ್ರಾಮ ಪಂಚಾಯತ್‌ಗಳೊಂದಿಗೆ ಸಮನ್ವಯ ಸಾಧಿಸಿ ವರದಿಗಳನ್ನು ಪರಿಶೀಲಿಸಬೇಕು. ಜಿಲ್ಲಾ ಆಸ್ಪತ್ರೆ, ಎಲ್ಲ ಸಾರ್ವಜನಿಕ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕ್ಷಯರೋಗ (ಟಿಬಿ) ತಪಾಸಣೆ ವ್ಯಾಪಕ ನಡೆಸಿ, ಆದಷ್ಟು ಬೇಗ ರೋಗ ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸಲು ಸೂಚಿಸಿದರು.