ಮಕ್ಕಳನ್ನು ಸರ್ಕಾರಿ ಶಾಲೆಗೆ ಸೆಳೆಯಲು ದಾಖಲಾತಿ ಆಂದೋಲನ

KannadaprabhaNewsNetwork |  
Published : May 28, 2026, 02:30 AM IST
ಹರಪನಹಳ್ಳಿಯಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯಲು  ಆಯೋಜಿಸಿದ್ದ ವಿಜೃಂಬಣೆಯ ದಾಖಲಾತಿ ಆಂದೋಲನಾ ಕಾರ್ಯಕ್ರಮಕ್ಕೆ ತಹಶೀಲ್ದಾರ ಬಿ.ವಿ.ಗಿರೀಶಬಾಬು ಚಾಲನೆ ನೀಡಿದರು. ಎಂ.ವಿ.ಅಂಜಿನಪ್ಪ, ಬಿಇಒ ಲೇಪಾಕ್ಷಪ್ಪ, ಬಸವರಾಜ ಸಂಗಪ್ಪನವರ್ ಇತರರು ಇದ್ದರು. | Kannada Prabha

ಸಾರಾಂಶ

ಬಿಸಿಯೂಟ ಸೇರಿದಂತೆ ವಿವಿಧ ಯೋಜನೆಗಳ ನಾಮಫಲಕಗಳನ್ನು ಪ್ರದರ್ಶಿಸಿದರು.

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕುಸಿಯುತ್ತಿರುವುದನ್ನು ಮನಗಂಡು ಸರ್ಕಾರದ ಮಾರ್ಗಸೂಚಿಯಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ವಿವಿಧ ಯೋಜನೆಗಳನ್ನು ಹಾಕಿಕೊಂಡು ಶಾಲೆಗೆ ಮಕ್ಕಳನ್ನು ಸೆಳೆಯಲು ಹರಸಾಹಸ ಪಡುತ್ತಿದ್ದಾರೆ.

ಹರಪನಹಳ್ಳಿಯಲ್ಲಿ ಮಂಗಳವಾರ ಇಲ್ಲಿಯ ಶಿಕ್ಷಣ ಇಲಾಖೆಯವರು ದಾಖಲಾತಿ ಆಂದೋಲನವನ್ನು ವಿಜೃಂಭಣೆಯಿಂದ ನಡೆಸಿದರು. ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆತರಲು ತೆರೆದ ವಾಹನಗಳಲ್ಲಿ ವಿವಿಧ ರೀತಿಯ ಬ್ಯಾನರ್‌ ಅಳವಡಿಸಿ ಹೂವುಗಳಿಂದ ಅಲಂಕೃತ ಮಾಡಿ ಸರ್ಕಾರದಿಂದ ಸರ್ಕಾರಿ ಶಾಲೆಗಳಿಗೆ ಏನೇನು ಸೌಲಭ್ಯ ಸಿಗುತ್ತವೆ ಎಂಬ ಅರಿವು ಮೂಡಿಸುವ ಪ್ರಯತ್ನ ಮಾಡಿದರು.

ಮೊದಲಿಗೆ ಬಿಇಒ ಕಚೇರಿ ಆವರಣದಲ್ಲಿ ವಿವಿಧ ಕ್ಲಸ್ಟರಿನ ಮುಖ್ಯ ಶಿಕ್ಷಕರು, ಶಿಕ್ಷಕರು, ವಿವಿಧ ಹಂತದ ಅಧಿಕಾರಿಗಳು ಜಮಾವಣೆಗೊಂಡು ಅಲ್ಲಿಂದ ಹಿರೆಕೆರೆ ವೃತ್ತ, ನಂತರ ಡಾ.ಬಿ.ಆರ್. ಅಂಬೇಡ್ಕರ್‌ (ಐ.ಬಿ. ವೃತ್ತ) ವೃತ್ತ ನಂತರ ವಿವಿಧ ವಾರ್ಡಗಳಲ್ಲಿ ಸಂಚರಿಸಿ ಪೋಷಕರಿಗೆ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ ಎಂದು ಮನವಿ ಮಾಡಿದರು.

ಸಮಗ್ರ ಹಾಗೂ ವ್ಯಾಪಕ ಶಿಕ್ಷಣ ಪದ್ದತಿ ಮೂಲಕ ಶಿಕ್ಷಣ, ಉಚಿತ ಪಠ್ಯಪುಸ್ತಕ ಎರಡು ಜೊತೆ ಸಮವಸ್ತ್ರ, ವಿದ್ಯಾರ್ಥಿ ವೇತನ, ಬಿಸಿಯೂಟ ಸೇರಿದಂತೆ ವಿವಿಧ ಯೋಜನೆಗಳ ನಾಮಫಲಕಗಳನ್ನು ಪ್ರದರ್ಶಿಸಿದರು.

ಸರ್ಕಾರ ಈ ರೀತಿ ಸೌಲಭ್ಯ ನೀಡಿದ ಮೇಲೂ ಸ್ಥಳೀಯವಾಗಿ ಕೆಲವೊಂದು ಶಾಲೆಗಳು ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ದಾನಿಗಳಿಂದ ಉಚಿತ ಬ್ಯಾಗ್‌ ಮತ್ತು ದಾಖಲಾಗುವ ವಿದ್ಯಾರ್ಥಿಗಳ ಹೆಸರಿನಲ್ಲಿ 1 ಸಾವಿರ ಹಣ ನಿಶ್ಚಿತ ಠೇವಣಿ ಇಡುವುದು ಸೇರಿದಂತೆ ಮುಂತಾದ ಸೌಲಭ್ಯ ನೀಡಲು ಮುಂದಾಗಿವೆ.

ಶಾಸಕಿ ಎಂ.ಪಿ.ಲತಾ ಸಹ ಕೆಕೆಆರ್‌ಡಿಬಿಯಲ್ಲಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಕಟ್ಟಡ, ಚಾವಣಿ, ಕಂಪೌಂಡ್‌ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಒದಗಿಸುತ್ತಿದ್ದಾರೆ. ಇಷ್ಟಾದರೂ ನಗರದ ಅನೇಕ ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಸೋಜಿಗದ ಸಂಗತಿ.

ಜೂನ್‌ ತಿಂಗಳು ಪೂರ್ತಿ ಶಿಕ್ಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ತರಲು ಶತ ಪ್ರಯತ್ನ ಮಾಡುತ್ತಿದ್ದಾರೆ. ದಾಖಲಾತಿ ಆಂದೋಲನಕ್ಕೆ ತಹಶೀಲ್ದಾರ ಬಿ.ವಿ. ಗಿರೀಶಬಾಬು ಹಿರೆಕೆರೆ ವೃತ್ತದಲ್ಲಿ ಚಾಲನೆ ನೀಡಿದರು.

ತಾಪಂ ಇಒ ಚಂದ್ರಶೇಖರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ವಕೀಲ ಬಸವರಾಜ ಸಂಗಪ್ಪನವರ್, ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕಟೇಶ, ಅಬ್ದುಲ್‌ ರಹಿಮಾನ್ ಸಾಹೇಬ್, ವಸಂತಪ್ಪ, ಬಿಇಒ ಲೇಪಾಕ್ಷಪ್ಪ, ಬಿಆರ್‌ಸಿ ಹೊನ್ನತ್ತೆಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೆಶಕ ನಾಗರಾಜ, ದೈಹಿಕ ಶಿಕ್ಷಣ ಪರಿವೀಕ್ಷಕ ಷಣ್ಮುಖಪ್ಪ, ಮುಖ್ಯ ಶಿಕ್ಷಕರು, ಶಿಕ್ಷಕರು ದಾಖಲಾತಿ ಆಂದೋಲನದಲ್ಲಿ ಪಾಲ್ಗೊಂಡಿದ್ದರು.

ನೂರಕ್ಕೆ ನೂರು ಹಾಜರಾತಿ ದಾಖಲಾತಿ, ಗುಣಮಟ್ಟದ ಕಲಿಕೆ ಸೇರಿದಂತೆ ಹಲವು ಸೌಲಭ್ಯಗಳು ಸರ್ಕಾರಿ ಶಾಲಾ ಮಕ್ಕಳಿಗೆ ದೊರಕುತ್ತಿವೆ. ಇಲ್ಲಿಯ ಶಾಸಕರು ಸಹ ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ನಾವು ಸಹ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೆಳೆಯಲು ಅವಿರತ ಪ್ರಯತ್ನ ನಡೆಸುತ್ತಿದ್ದೇವೆ. ಪೋಷಕರು ತಮ್ಮ ಮಕ್ಕಳನ್ನು ತಪ್ಪದೇ ಸರ್ಕಾರಿ ಶಾಲೆಗೆ ದಾಖಲಿಸಿ ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎನ್ನುತ್ತಾರೆ ಹರಪನಹಳ್ಳಿ ಬಿಇಒ ಎಚ್.ಲೇಪಾಕ್ಷಪ್ಪ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕತಾರ್ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸುಬ್ರಮಣ್ಯ ಹೆಬ್ಬಾಗಿಲು ಅವಿರೋಧ ಆಯ್ಕೆ
ಕಾಲೇಜು ಅಭಿವೃದ್ಧಿಗೆ ಅಗತ್ಯ ಸಹಕಾರ: ಪ್ರೊ. ಅಶೋಕ್ ಸಂಗಪ್ಪ ಆಲೂರ