ಹೊಸಪೇಟೆ: ಇತ್ತೀಚೆಗೆ ಕೆಲವರು ಜಾತಿ, ಧರ್ಮದ ಹೆಸರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಜಾತಿ, ಧರ್ಮದ ಹೆಸರಲ್ಲಿ ಸಮಾಜದಲ್ಲಿ ಒಡಕು ತರುವುದೇ ಅವರ ಉದ್ದೇಶವಾಗಿರುತ್ತದೆ. ಈ ಕುರಿತು ಸಮಾಜ ಎಚ್ಚರದಿಂದ ಇರಬೇಕು ಎಂದು ಸಾಹಿತಿ, ಚಿಂತಕ ಪಿ.ಪೀರ್‌ಬಾಷಾ ಹೇಳಿದರು.
ದೇಶದಲ್ಲಿ ಎಲ್ಲ ಧರ್ಮೀಯರಿಗೂ ಸಮಾನತೆಯಿಂದ ಬಾಳುವ ಹಕ್ಕು ಇದೆ. ಇದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಬುದ್ಧನ ಕಾಲದಿಂದಲೂ ಧಾರ್ಮಿಕ ಸಮಾನತೆ ಬಗ್ಗೆ ಹೆಚ್ಚಿನ ಒತ್ತು ಕೊಡಲಾಗಿತ್ತು. ಬಸವಣ್ಣನವರ ವಚನಗಳ ಮೂಲಕ ಅದಕ್ಕೆ ಹೊಸ ರೂಪ ಸಿಕ್ಕಿತು ಎಂದು ಹೇಳಿದರು.
ಹಿಟ್ನಾಳ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಪ್ರೊ.ಟಿ.ಎಚ್. ಬಸವರಾಜ್ ಮಾತನಾಡಿ, ಬಸವಣ್ಣನವರ ಅನುಭವ ಮಂಟಪ ಪರಿಕಲ್ಪನೆ ಅದ್ಭುತವಾಗಿತ್ತು. ಅದು ಸಮಾನತೆಯ ಸಂದೇಶವನ್ನು ಸಾರಿದ ಬಗೆ ಅಚ್ಚರಿ ತರುವಂತದ್ದು ಎಂದರು.ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಮೊಹಮ್ಮದ್ ಇಮಾಂ ನಿಯಾಜಿ ಕಾರ್ಯಕ್ರಮ ಉದ್ಘಾಟಿಸಿ ಸಭೆಯಲ್ಲಿ ಮಾತನಾಡಿದರು. ನಗರಸಭೆ ಅಧ್ಯಕ್ಷ ಎನ್.ರೂಪೇಶಕುಮಾರ್, ಸ್ಲಂ ಜನರ ಸಂಘಟನೆ ಕರ್ನಾಟಕದ ಹೊಸಪೇಟೆ ಘಟಕದ ಅಧ್ಯಕ್ಷ ಎಚ್.ಶೇಷು, ಜಿಲ್ಲಾ ಅಂಬೇಡ್ಕರ್ ಸಂಘದ ಗೌರವಾಧ್ಯಕ್ಷ ಎಂ.ಸಿ. ವೀರಸ್ವಾಮಿ, ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ ಉಪಸ್ಥಿತರಿದ್ದರು.
ಸಮಾನತೆ ವೇದಿಕೆಯ ಸಂಚಾಲಕರಾದ ಎನ್.ವೆಂಕಟೇಶ್, ಭರತಕುಮಾರ್ ಸಿ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು.