ಹೊಸಪೇಟೆ: ಮೀನುಗಾರರ ಆರ್ಥಿಕ ಸುಧಾರಣೆ, ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ತರಕಾರಿ ಮಾರುಕಟ್ಟೆಯ ಮಾದರಿಯಲ್ಲೇ ಕೆಎಂಇಆರ್‌ಸಿ ಅನುದಾನದಡಿ ₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ, ಪ್ರತ್ಯೇಕ ಮೀನು ಮಾರುಕಟ್ಟೆ ನಿರ್ಮಿಸಲಾಗುವುದು ಎಂದು ಶಾಸಕ ಎಚ್.ಆರ್. ಗವಿಯಪ್ಪ ಭರವಸೆ ನೀಡಿದರು.
ರಸ್ತೆ ಬದಿಯಲ್ಲಿ ಕುಳಿತು ಮೀನು ಮಾರಾಟ ಮಾಡುವುದನ್ನು ತಪ್ಪಿಸಿ, ಮೀನುಗಾರರಿಗೆ ಗೌರವಯುತ ಸ್ಥಾನ ನೀಡಲು ನಾನೇ ಖುದ್ದಾಗಿ ಮಾರುಕಟ್ಟೆ ನಿರ್ಮಾಣಕ್ಕೆ ಬೇಕಾದ ಸ್ಥಳ ಹುಡುಕಿ ಕೊಡುತ್ತೇನೆ. ಮುಂದಿನ ಎರಡು ವರ್ಷಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಬಡ ಮೀನುಗಾರರು, ರೈತರು ಬದುಕಬೇಕಾದರೆ ಹಳೆಯ ಮಾದರಿಯ ಲೈಸೆನ್ಸ್ ಸಿಸ್ಟಮ್ ಮರುಜಾರಿಗೆ ಬರಬೇಕು. ಇದಕ್ಕಾಗಿ ಮುಂದಿನ ದಿನಗಳಲಿ ರಾಜ್ಯ ಮತ್ತು ಆಂಧ್ರ ಸರ್ಕಾರಗಳನ್ನು ಒಗ್ಗೂಡಿಸಿ, ಬೋರ್ಡ್ ಅಧಿಕಾರಿಗಳಿಗೆ ಮತ್ತೊಮ್ಮೆ ಮನವಿ ಸಲ್ಲಿಸಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಅಥವಾ ತಮಿಳುನಾಡಿನ ಯಾವುದೇ ಒಬ್ಬನೇ ಒಬ್ಬ ದೊಡ್ಡ ಗುತ್ತಿಗೆದಾರನಿಗೆ ಇಡೀ ವ್ಯವಸ್ಥೆಯ ಲಾಭ ಸಿಗಬಾರದು. ದುಡಿಯುವ ಸ್ಥಳೀಯ ಬಡ ಮೀನುಗಾರರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ಕನಿಷ್ಠ ಶುಲ್ಕದೊಂದಿಗೆ ಲೈಸೆನ್ಸ್ ನೀಡಿ, ಅವರು ಸ್ವತಂತ್ರವಾಗಿ ಮೀನು ಹಿಡಿದು ಬದುಕಲು ಅವಕಾಶ ಕಲ್ಪಿಸಿಕೊಡಬೇಕು. ಅಧಿಕಾರಿಗಳು ಯಾವುದೇ ದೊಡ್ಡ ಕಾಂಟ್ರಾಕ್ಟರ್‌ಗಳಿಗೆ ಪ್ರೋತ್ಸಾಹ ನೀಡದೆ, ನಿಜವಾದ ಸ್ಥಳೀಯ ಫಲಾನುಭವಿಗಳಿಗೆ ಮಾತ್ರ ಮೀನು ಹಿಡಿಯುವ ಹಕ್ಕನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದರು.
ಟಿ.ಬಿ. ಡ್ಯಾಂ ಆವರಣದಲ್ಲಿ ಲಭ್ಯವಿರುವ ಪ್ಯಾಕೇಜಿಂಗ್ ಯೂನಿಟ್ ಮತ್ತು ಕೋಲ್ಡ್ ಸ್ಟೋರೇಜ್ ಯೂನಿಟ್ ಸರ್ಕಾರಿ ಸ್ವಾಮ್ಯದಲ್ಲೇ ಸೂಕ್ತ ಶುಲ್ಕದೊಂದಿಗೆ ಸಾರ್ವಜನಿಕವಾಗಿ ನಡೆಸಿ, ಮೀನುಗಾರಿಕಾ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಟಿಬಿ ಡ್ಯಾಂ, ಕಮಲಾಪುರ, ಮಲಪನಗುಡಿ ಮುಂತಾದ ಪ್ರದೇಶಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಮೀನುಗಾರರ ಕುಟುಂಬ ವಾಸಿಸುತ್ತಿವೆ. ಇವರಲ್ಲಿ ಹೆಚ್ಚಿನವರಿಗೆ ವಸತಿ ಸೌಲಭ್ಯಗಳಿಲ್ಲ. ಅಂತಹವರನ್ನು ಗುರುತಿಸಿ ವಸತಿ ರಹಿತರ ಅರ್ಹ ಫಲಾನುಭವಿಗಳ ಪಟ್ಟಿ ನೀಡಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಫಲಾನುಭವಿಗಳಿಗೆ ಮೀನು ಹಿಡಿಯುವ ಉಚಿತ ಕಿಟ್ ವಿತರಿಸಲಾಯಿತು.