4ಕಿಮೀ ದೂರದಿಂದ ಪಡಿತರ ಪಡೆಯುವ ನಿರ್ಲೂಟಿ ಗ್ರಾಮಸ್ಥರು

KannadaprabhaNewsNetwork |  
Published : May 28, 2026, 02:15 AM IST
ಪೋಟೋಸರ್ವರ್ ಸಮಸ್ಯೆಯ ನಡುವೆಯೂ ಕನಕಗಿರಿ ತಾಲೂಕಿನ ಬೊಮ್ಮಸಾಗರದಲ್ಲಿ ಪಡಿತರ ಹಂಚಿಕೆ ಮಾಡುತ್ತಿರುವುದು.   | Kannada Prabha

ಸಾರಾಂಶ

ತಾಲೂಕು ಕೇಂದ್ರದಿಂದ 4 ಕಿಮೀ ದೂರದಲ್ಲಿರುವ ನಿರ್ಲೂಟಿ ಗ್ರಾಮಸ್ಥರು ಹಲವು ತಿಂಗಳುಗಳಿಂದ ಪಟ್ಟಣಕ್ಕೆ ಬಂದು ಪಡಿತರ ಧಾನ್ಯ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ

ಕನಕಗಿರಿ: ಸರ್ವರ್ ಸಮಸ್ಯೆಯಿಂದ ಪಡಿತರ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದು, ಬುಧವಾರ ಸುರಿದ ಜಿಟಿಜಿಟಿ ಮಳೆಯಲ್ಲೂ ಜನ ಸರದಿಯಲ್ಲಿ ನಿಂತು ಅಕ್ಕಿ ಪಡೆಯುವುದು ಕಂಡು ಬಂದಿತು.

ಈ ಬಾರಿ ರಾಜ್ಯ ಸರ್ಕಾರದಿಂದ ಪಡಿತರ ಸರಬರಾಜು ಆಗಿಲ್ಲ. ಕೇಂದ್ರ ಸರ್ಕಾರದಿಂದ ಬಂದ ಅಕ್ಕಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ.ಅಕ್ಕಿ ವಿತರಣೆಗೆ ಸರ್ವರ್ ಸಮಸ್ಯೆ ಅಡ್ಡಿಯಾಗಿದ್ದು, ಫಲಾನುಭವಿಗಳು ಪಡಿತರಕ್ಕಾಗಿ ಪರದಾಡುವಂತಾಗಿದೆ. ಪಟ್ಟಣ ಸೇರಿದಂತೆ ನ್ಯಾಯ ಬೆಲೆ ಅಂಗಡಿಗಳಿರುವ ಗ್ರಾಮಗಳಲ್ಲಿಯೂ ನೂಕುನುಗ್ಗಲು ಉಂಟಾಗುತ್ತಿದೆ.ಒಂದು ಪಡಿತರ ಕಾರ್ಡ್‌ಗೆ 10 ರಿಂದ 15 ನಿಮಿಷ ತೆಗೆದುಕೊಳ್ಳುತ್ತಿದೆ. ಈ ಸಮಸ್ಯೆಯಿಂದ ಕೂಲಿ ಕಾರ್ಮಿಕರು, ವಯೋವೃದ್ದರು, ಅಂಗವಿಲಕರು, ರೈತರಿಗೆ ತೀವ್ರ ತೊಂದರೆಯಾಗಿದ್ದು, ದಿನವಿಡಿ ಸರದಿಯಲ್ಲಿ ನಿಂತು ಪಡಿತರ ಪಡೆಯುತ್ತಿದ್ದಾರೆ.ಈ ಬಗ್ಗೆ ಮೇಲಾಧಿಕಾರಿಗಳ ಹಾಗೂ ತಾಂತ್ರಿಕ ಸಿಬ್ಬಂದಿಯವರೊಂದಿಗೆ ಚರ್ಚಿಸಿದರೂ ಪ್ರಯೋಜನವಾಗಿಲ್ಲ. ಸರ್ವರ್ ಸಮಸ್ಯೆಯಿಂದ ಪಡಿತರ ವಿತರಿಸಲು ತೀವ್ರ ಸಮಸ್ಯೆಯಾಗಿದ್ದು, ಫಲಾನುಭವಿಗಳ ಜತೆ ಮಂಗಳಾರತಿ ಮಾಡಿಸಿಕೊಳ್ಳುವ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ನ್ಯಾಯಬೆಲೆ ಅಂಗಡಿ ಮಾಲೀಕರು.

4 ಕಿಮೀ ದೂರ ಬಂದು ಅಕ್ಕಿ ಪಡೆದ ಗ್ರಾಮಸ್ಥರು!: ತಾಲೂಕು ಕೇಂದ್ರದಿಂದ 4 ಕಿಮೀ ದೂರದಲ್ಲಿರುವ ನಿರ್ಲೂಟಿ ಗ್ರಾಮಸ್ಥರು ಹಲವು ತಿಂಗಳುಗಳಿಂದ ಪಟ್ಟಣಕ್ಕೆ ಬಂದು ಪಡಿತರ ಧಾನ್ಯ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗ್ರಾಮದಲ್ಲಿ ಸರ್ವರ್ ಸಮಸ್ಯೆಯಾಗುತ್ತಿರುವ ಕಾರಣ ಕನಕಗಿರಿ ಪಟ್ಟಣಕ್ಕೆ ಬಂದು ಅಕ್ಕಿ ಪಡೆಯಬೇಕಾಗಿರುವುದು ಅನಿವಾರ್ಯವಾಗಿದೆ. ಗ್ರಾಮದ ಹೊಸ ಶಾಲಾ ಆವರಣದಲ್ಲಿ ಸರ್ವರ್ ಬರುತ್ತಿದ್ದರೂ ಅಕ್ಕಿ ವಿತರಿಸಲು ಸಮಸ್ಯೆಯಾಗಲಿದೆ ಎನ್ನುವ ಕಾರಣಕ್ಕೆ ಕನಕಗಿರಿಯಲ್ಲಿ ಪಡಿತರ ಹಂಚಲಾಗುತ್ತಿದೆ. ಹಲವು ತಿಂಗಳುಗಳಿಂದ 4 ಕಿಮೀ ದೂರ ಹೋಗಿ ಫಲಾನುಭವಿಗಳು ಅಕ್ಕಿ ಪಡೆಯುವುದು ಕಷ್ಟವಾಗುತ್ತಿದ್ದು, ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಪಡಿತರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ಲಕ್ಷ್ಮಣ್ ಆಗ್ರಹಿಸಿದ್ದಾರೆ.

ಸರ್ವರ್ ಸಮಸ್ಯೆ ರಾಜ್ಯವ್ಯಾಪಿ ಇದೆ. ತಾಂತ್ರಿಕ ಸಮಸ್ಯೆ ಸರಿಪಡಿಸಲು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ತಿಂಗಳು ಮತ್ತು ಮುಂದಿನ ತಿಂಗಳು ಸರ್ವರ್ ಸಮಸ್ಯೆ ಆಗಲಿದೆ ಎಂಬ ಮಾಹಿತಿ ಇದೆ. ಫಲಾನುಭವಿಗಳು ನೂಕುನುಗ್ಗಲು ಮಾಡಿಕೊಳ್ಳಬೇಡಿ. ಎಲ್ಲ ಫಲಾನುಭವಿಗಳಿಗೆ ಅಕ್ಕಿ ಹಂಚಿಕೆ ಮಾಡಲಾಗುವುದು.ಇನ್ನೂ ನಿರ್ಲೂಟಿ ಗ್ರಾಮದಲ್ಲಿ ಸರ್ವರ್ ಸಮಸ್ಯೆ ಇರುವುದರಿಂದ ಕನಕಗಿರಿ ಪಟ್ಟಣದಲ್ಲಿ ಅಕ್ಕಿ ವಿತರಿಸಲಾಗುತ್ತಿದೆ. ನಿರ್ಲೂಟಿ ಗ್ರಾಮದಲ್ಲಿ ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದು ಆಹಾರ ನೀರಿಕ್ಷಕ ಬಸವರಾಜ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ: ಶಾಸಕ ಗವಿಯಪ್ಪ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಆದ್ಯತೆ ಕೊಡಿ