ಜು.15ರೊಳಗೆ ಶಾಲಾ ಕೊಠಡಿ, ದುರಸ್ತಿ ವರದಿ ಸಲ್ಲಿಸಿ

KannadaprabhaNewsNetwork |  
Published : Jun 07, 2025, 12:30 AM IST
6ಡಿಡಬ್ಲೂಡಿ2ಜಿಲ್ಲಾ ಪಂಚಾಯ್ತಿ ಸಿಇಓ ಭುವನೇಶ ಪಾಟೀಲ  | Kannada Prabha

ಸಾರಾಂಶ

ಈಗಾಗಲೇ ಶಾಲೆಗಳು ಆರಂಭವಾಗಿವೆ. ಹವಾಮಾನ ಇಲಾಖೆಯ ಸೂಚನೆ ಪ್ರಕಾರ ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ

ಧಾರವಾಡ: ಮಳೆಗಾಲದಲ್ಲಿ ಜಿಲ್ಲೆಯ ಯಾವುದೇ ಶಾಲೆಯಲ್ಲಿ ಮಕ್ಕಳ ಪಾಠಕ್ಕೆ ತೊಂದರೆ ಉಂಟಾದರೆ ಆಯಾ ತಾಲೂಕಿನ ಶಿಕ್ಷಣಾಧಿಕಾರಿಗಳನ್ನು ಜವಾಬ್ದಾರಿಗೊಳಿಸಲಾಗುವುದು. ಎಲ್ಲ ಕ್ಷೇತ್ರಶಿಕ್ಷಣಾಧಿಕಾರಿಗಳು ಪ್ರತಿ ಶಾಲೆಗೆ ಭೇಟಿ ನೀಡಿ ವಾಸ್ತವಿಕ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಓ ಭುವನೇಶ ಪಾಟೀಲ ಹೇಳಿದರು.

ಜಿಪಂ ಸಭಾಂಗಣದಲ್ಲಿ ಶಾಲಾ ಕಟ್ಟಡಗಳ ಕಾಮಗಾರಿ ಹಾಗೂ ಕೊಠಡಿಗಳ ದುರಸ್ತಿ ಕುರಿತು ಶಿಕ್ಷಣ ಇಲಾಖೆ ಹಾಗೂ ವಿವಿಧ ಅನುಷ್ಠಾನ ಏಜನ್ಸಿಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಈಗಾಗಲೇ ಶಾಲೆಗಳು ಆರಂಭವಾಗಿವೆ. ಹವಾಮಾನ ಇಲಾಖೆಯ ಸೂಚನೆ ಪ್ರಕಾರ ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಮಕ್ಕಳಿಗೆ ತೊಂದರೆ ಆಗದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಈ ಕುರಿತು ಕ್ರಿಯಾಯೋಜನೆ ರೂಪಿಸಿ ಜು.15ರೊಳಗೆ ಸೋರಿಕೆ ಆಗುವ ಮತ್ತು ಶಿಥಿಲಾವಸ್ಥೆಯ ಮಾಳಿಗೆ,ಗೋಡೆಗಳನ್ನು ದುರಸ್ತಿಗೊಳಿಸಿ ವರದಿ ಸಲ್ಲಿಸಲು ನಿರ್ದೇಶನ ನೀಡಿದರು.

ಈ ಕುರಿತು ಸೂಚನೆ ನೀಡಿದ್ದರೂ ಸರಿಯಾದ ಪಾಲನೆ ಆಗಿಲ್ಲ. ಶಾಲೆಯ ಸೋರಿಕೆ ಅಥವಾ ಶಿಥಿಲ ಕಟ್ಟಡದಿಂದ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾದರೆ ಅದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಇಓ ಎಚ್ಚರಿಸಿದರು.

ಶಾಲಾ ಶಿಕ್ಷಣ ಇಲಾಖೆ ಸಲ್ಲಿಸಿರುವ ಮಾಹಿತಿ ಪ್ರಕಾರ ಪ್ರಸಕ್ತ ಸಾಲಿಗೆ ದುರಸ್ತಿಗಾಗಿ ಜಿಲ್ಲೆಯ 147 ಶಾಲೆಗಳ ಸುಮಾರು 495 ಕೊಠಡಿ ಗುರುತಿಸಲಾಗಿದೆ. ಆದರೆ, ತಕ್ಷಣವೇ ಕ್ರಮ ವಹಿಸಬೇಕಾದ 62 ಶಾಲೆಗಳ 262 ಕೊಠಡಿಗಳನ್ನು ದುರಸ್ತಿಗೊಳಿಸಬೇಕಿದೆ. ಇದಕ್ಕೆ ತಗಲುವ ವೆಚ್ಚ ಜಿಪಂ ಹಾಗೂ ತಾಪಂ ಅನಿರ್ಭಂದಿತ ಅನುದಾನದಿಂದ ಪಡೆಯಲು ಪ್ರಸ್ತಾವನೆ ಸಲ್ಲಿಸಬೇಕೆಂದರು.

ಪ್ರತಿ ಶಾಲೆಗೆ ಅಗತ್ಯ ಶೌಚಾಲಯ, ಆಟದ ಮೈದಾನ, ಗ್ರಂಥಾಲಯ ಹಾಗೂ ಇತರ ಸೌಲಭ್ಯಗಳನ್ನು ಪಡೆಯಲು ಸೂಕ್ತ ಮತ್ತು ವಿವರ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಬೇಕೆಂದರು.

ವಿವಿಧ ಕಂಪನಿಗಳ ಸಿಎಸ್‌ಆರ್ ಅನುದಾನದಲ್ಲಿ ಜಿಲ್ಲೆಯ ವಿವಿಧ ಗ್ರಾಪಂಗಳ ವ್ಯಾಪ್ತಿಯಲ್ಲಿ ಬರುವ ಶಾಲೆಗಳನ್ನು ಮಾದರಿ ಶಾಲೆಗಳಾಗಿ ರೂಪಿಸಲು ಸರ್ಕಾರ ಸೂಚಿಸಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ ಮಾತನಾಡಿ, ಜಿಲ್ಲೆಯಲ್ಲಿ 217 ಕಿರಿಯ, 521 ಹಿರಿಯ ಮತ್ತು 112 ಪ್ರೌಢಶಾಲೆಗಳು ಸೇರಿ ಒಟ್ಟು 850 ಶಾಲೆಗಳಿವೆ. ಇವುಗಳ ಪೈಕಿ ಹಿಂದಿನ ವರ್ಷ 85 ಶಾಲೆಗಳ 286 ಕೊಠಡಿಗಳನ್ನು ರಿಪೇರಿ ಮಾಡಲಾಗಿದೆ. ಪ್ರಸಕ್ತ ವರ್ಷ 147 ಶಾಲೆಗಳ 495 ಕೊಠಡಿಗಳ ದುರಸ್ತಿಗೆ ಗುರುತಿಸಲಾಗಿದೆ. ಅಗತ್ಯ ಕ್ರಿಯಾ ಯೋಜನೆ, ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಜಿಪಂ ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಪಿಡಬ್ಲೂಡಿ ಅಭಿಯಂತರ ವಿಜಯಕುಮಾರ, ಆರ್.ಎಂ. ಸೋಪ್ಪಿಮಠ, ಸುಜಾತಾ ಕಾಳೆ, ನಿರ್ಮಿತಿ ಕೇಂದ್ರದ ಶಿವಕುಮಾರ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಅಶೋಕ ಸಿಂದಗಿ, ರಾಮಕೃಷ್ಣ ಸದಲಗಿ, ಶಿವಾನಂದ ಮಲ್ಲಾಡ, ಮಹಾದೇವಿ ಮಾಡಲಗಿ, ಉಮಾದೇವಿ ಬಸಾಪುರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?