ಸುಬ್ರಹ್ಮಣ್ಯ: ಶ್ರೀ ದೇವರ ಜಳಕದ ಕಟ್ಟೆ ಭಾಗಶಃ ಮುಳುಗಡೆ

KannadaprabhaNewsNetwork |  
Published : Aug 02, 2026, 02:45 AM IST
ಸುಬ್ರಹ್ಮಣ್ಯ  | Kannada Prabha

ಸಾರಾಂಶ

Subrahmanya: Partial inundation of Sri Deva's water dam

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರ ಹಾಗೂ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಭಾರಿ ಗಾಳಿ ಮಳೆಯು ಶುಕ್ರವಾರದಿಂದ ಆರಂಭವಾಗಿದ್ದು, ಶನಿವಾರವೂ ನಿರಂತರವಾಗಿ ಮುಂದುವರೆದಿದೆ. ಇದರಿಂದಾಗಿ ಪುಣ್ಯ ನದಿ ಕುಮಾರಧಾರದಲ್ಲಿ ಪ್ರವಾಹ ಅಧಿಕಗೊಂಡಿದ್ದು, ನದಿ ತಟದಲ್ಲಿನ ಶ್ರೀ ದೇವರ ಜಳಕದ ಕಟ್ಟ ಭಾಗಶಃ ಮುಳುಗಡೆಗೊಂಡಿದೆ.

ಕುಮಾರಧಾರ ನದಿಯಲ್ಲಿ ಭಾರಿ ಪ್ರವಾಹ ಏರಿಕೆಯಾದ ಕಾರಣ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಶ್ರೀ ದೇವರ ಜಳಕದ ಕಟ್ಟೆ, ಶೌಚಾಲಯ ಕಟ್ಟಡ, ಡ್ರೆಸ್ಸಿಂಗ್ ಕೊಠಡಿಗಳು ಭಾಗಶಃ ಮುಳುಗಡೆಗೊಂಡಿವೆ. ಕುಮಾರಧಾರ ನದಿ ನೀರು ಸ್ನಾನ ಘಟ್ಟದಿಂದ ಸುಮಾರು ೧೦೦ ಮೀ. ದೂರ ವ್ಯಾಪಿಸಿದೆ. ಅಲ್ಲದೆ ಇಲ್ಲಿರುವ ಲಗೇಜ್‌ ಕೊಠಡಿಯ ಮೆಟ್ಟಿಲುಗಳು ಮುಳುಗಡೆಯಾಗಿವೆ. ಅಲ್ಲದೆ ಸ್ನಾನಘಟ್ಟದಲ್ಲಿನ ಅಂಗಡಿಗಳು ಮುಳುಗಡೆಯಾಗಿವೆ. ಕುಮಾರಧಾರದಲ್ಲಿನ ಅಂಗಡಿ ಮುಂಗಟ್ಟುಗಳು ಜಲಾವೃತಗೊಂಡಿವೆ. ಅಲ್ಲದೆ ಕುಮಾರಧಾರದ ಉಪನದಿ ದರ್ಪಣತೀರ್ಥದಲ್ಲಿನ ಪ್ರವಾಹದಿಂದಾಗಿ ನದಿ ನೀರು ತೋಟಗಳಿಗೆ ನುಗ್ಗಿದೆ.

ಕಡಬ ತಹಸೀಲ್ದಾರ್ ಭೇಟಿ: ಪ್ರವಾಹದಿಂದ ತುಂಬಿ ಹರಿಯುತ್ತಿರುವ ಕುಮಾರಧಾರ ನದಿಯನ್ನು ಶನಿವಾರ ಕಡಬ ತಹಸೀಲ್ದಾರ್ ಗಣೇಶ್ ಸವಣೂರ ಪರಿಶೀಲಿಸಿದರು. ಅಲ್ಲದೆ ಇಲ್ಲಿನ ಭದ್ರತೆಯನ್ನು ಪರಿಶೀಲಿಸಿದರು. ಇಲ್ಲಿದ್ದ ಭದ್ರತಾ ಸಿಬ್ಬಂದಿಗಳಲ್ಲಿ ರಕ್ಷಣೆ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೆ ಸ್ನಾನಘಟ್ಟ ಪರಿಸರವನ್ನು ಪರಿಶೀಲಿಸಿದರು. ಈ ಸಂದರ್ಭ ಪ್ರಮುಖರಾದ ಪುರುಷೋತ್ತಮ್, ಲೋಕನಾಥ್ ಪರ್ವತಮುಖಿ ಮತ್ತಿತರರು ಉಪಸ್ಥಿತರಿದ್ದರು.

ಬಳ್ಪ ಮಳೆ: ಬಳ್ಪ, ಕೇನ್ಯ, ಬೀದಿಗುಡ್ಡೆ, ಎಣ್ಣೆಮಜಲು, ಸಂಪ್ಯಾಡಿ, ಅಡ್ಡಬೈಲು, ಪಂಜ, ಬೊಳ್ಮಲೆ, ಕರಿಕ್ಕಳ, ನಿಡ್ವಾಳ, ನಿಂತಿಕಲ್ಲು, ಅಲೆಕ್ಕಾಡಿ, ನಿಂತಿಕಲ್ಲು ಪ್ರದೇಶದಲ್ಲಿ ಶನಿವಾರ ಭಾರಿ ಮಳೆ ಸುರಿದಿದೆ.ಇದರಿಂದಾಗಿ ಇಲ್ಲಿ ನದಿ, ತೊರೆ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.

ಪಂಜ ಹೊಳೆಯು ತುಂಬಿ ಹರಿಯುತ್ತಿದ್ದು ಬೊಳ್ಮಲೆ ಸೇತುವೆ ಮುಳುಗಡೆಯಾಗಿದೆ.ಇದರಿಂದಾಗಿ ಬೊಳ್ಮಲೆ, ಬಸ್ತಿಕಾಡು ಪ್ರದೇಶದ ನಡುವೆ ಸಂಪರ್ಕ ಕಡಿತಗೊಂಡಿತು..ನದಿಯಲ್ಲಿ ನೀರಿನ ಪ್ರವಾಹ ಅಧಿಕವಾದ ಕಾರಣ ಸಮೀಪದ ತೋಟಗಳಿಗೆ ನೀರು ನುಗ್ಗಿ ಫಲವಸ್ತುಗಳು ಕೊಚ್ಚಿ ಹೋಗಿವೆ.

ಗ್ರಾಮೀಣ ಪ್ರದೇಶ ತತ್ತರ: ಗ್ರಾಮೀಣ ಪ್ರದೇಶವು ಶನಿವಾರ ಸುರಿದ ಭಾರಿ ಮಳೆಗೆ ತತ್ತರಗೊಂಡಿದೆ. ಬಾಳುಗೋಡು ಪರಿಸರದಲ್ಲಿ ಸುರಿದ ಮಳೆಗೆ ಬಾಳುಗೋಡು ಹೊಳೆಯಲ್ಲಿ ಪ್ರವಾಹ ಹರಿದು ಬಂದಿದೆ. ಗ್ರಾಮೀಣ ಪ್ರದೇಶಗಳಾದ ಹರಿಹರ ಪಲ್ಲತ್ತಡ್ಕ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು, ನಡುಗಲ್ಲು, ಗುತ್ತಿಗಾರು, ಐನೆಕಿದು ಮೊದಲಾದ ಕಡೆ ಭಾರಿ ಮಳೆ ಸುರಿದೆ. ಮಳೆಯಿಂದಾಗಿ ಈ ಭಾಗದ ಜನರು ಸಂಕಷ್ಠಕ್ಕೀಡಾಗಿದ್ದಾರೆ. ಹರಿಹರ ಹೊಳೆಯಲ್ಲಿ ಪ್ರವಾಹ ಅಧಿಕಗೊಂಡಿದೆ. ಹರಿಹರ ಹೊಳೆಯಲ್ಲಿ ಪ್ರವಾಹ ಬಂದುದರಿಂದ ಹರಿಹರೇಶ್ವರ ಸಂಗಮ ಕ್ಷೇತ್ರ ಜಲಾವೃತ್ತವಾಗಿದೆ. ಯೇನೆಕಲ್ಲಿನ ಕಲ್ಲಾಜೆ ಹೊಳೆಯು ಪ್ರವಾಹದಿಂದ ತುಂಬಿ ಹರಿಯುತ್ತಿದೆ. ಗ್ರಾಮೀಣ ಭಾಗದಲ್ಲಿ ಭಾರಿ ಮಳೆಯಿಂದಾಗಿ ರಸ್ತೆಯಲ್ಲೇ ನೀರು ಹರಿದು ರೋಡು ತೋಡಾಗಿ ಮಾರ್ಪಟ್ಟಿದೆ. ಇದರಿಂದಾಗಿ ಕೆಲ ಕಾಲ ಸಂಚಾರಕ್ಕೆ ತೊಂದರೆಯಾದ ಘಟನೆಯೂ ನಡೆದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನುಷ್ಯನ ಅಸ್ತಿತ್ವವೇ ಪ್ರಕೃತಿ ಮೇಲಿದೆ
ಡಾ.ಮಹಾಂತ ಶ್ರೀಗಳಿಂದ ಸಮಾಜದಲ್ಲಿ ದೊಡ್ಡ ಪರಿವರ್ತನೆ