ನಮ್ಮದೇ ನಿಜವಾದ ರೈತ ಸರ್ಕಾರ

KannadaprabhaNewsNetwork |  
Published : Apr 27, 2025, 01:30 AM IST
58 | Kannada Prabha

ಸಾರಾಂಶ

ಪಿರಿಯಾಪಟ್ಟಣದಲ್ಲಿ 439.88 ಕೋಟಿ ರು. ಕಾಮಗಾರಿಗಳಿಗೆ ಚಾಲನೆ

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ರಾಜ್ಯದಲ್ಲಿ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ನೀಡಿ ಕೃಷಿ ಉತ್ಪನ್ನವನ್ನು ಹೆಚ್ಚಿಸುವ ಮೂಲಕ ರೈತರಿಗೆ ಅನುಕೂಲ ಮಾಡುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ, ಇದು ನಿಜವಾದ ರೈತ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ರು. 439.88 ಕೋಟಿ ರು. ಮೌಲ್ಯದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಂ ಜಯಂತಿ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಇಂದು 380 ರೈತರಿಗೆ 3 ಕೋಟಿಗೂ ಅಧಿಕ ಸಹಾಯಧನದಲ್ಲಿ ಕೃಷಿ ಪರಿಕರಗಳು ನೀಡಿದೆ. ಶೇ. 50 ರಷ್ಟು ರಾಜ್ಯ ಸರ್ಕಾರ ನೀಡುತ್ತಿದೆ. ಈ ಹಿಂದೆಯೆ ಕೃಷಿ ಯಂತ್ರಧಾರೆ ಯೋಜನೆ ಆರಂಭಿಸಿ ರೈತರಿಗೆ ಯಂತ್ರೋಪಕರಣಗಳ ಬಾಡಿಗೆ ನೀಡುವ ಯೋಜನೆ ಜಾರಿ ಮಾಡಿದ್ದೆವು, ಈ ಬಾರಿ ಹವಾಮಾನ ಇಲಾಖೆ ಉತ್ತಮ ಮಳೆಯಾಗಲಿದೆ ಎಂಬ ವರದಿ ನೀಡಿವೆ. ರೈತರಿಗೆ ಇದು ಅನುಕೂಲವಾಗಲಿದೆ ಎಂದು ತಿಳಿಸಿದರು.

ಗ್ಯಾರಂಟಿ ನಿಲ್ಲೋಲ್ಲ

ಮುಂದಿನ ತಿಂಗಳಿಗೆ ನಾವು ಅಧಿಕಾರಕ್ಕೆ ಬಂದು ಎರಡು ವರ್ಷಗಳು ತುಂಬುತ್ತದೆ. ನಾವು ನೀಡಿದ ಗ್ಯಾರಂಟಿ ಭರವಸೆಗಳನ್ನು ಎಲ್ಲವನ್ನು ಈಡೇರಿಸಿ, ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಿದ್ಧೇವೆ. ಇದನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಮಾನ ಮರ್ಯಾದೆ ಇಲ್ಲದೆ ಸುಳ್ಳು ಹೇಳುತ್ತಿದ್ಧಾರೆ. ಗೃಹಲಕ್ಷ್ಮಿ ನೀಡಿ ಅತ್ತೆ ಸೊಸೆ ಬೇರೆ ಮಾಡಿದರು, ಸಂಸದರ ಚುನಾವಣೆ ಆದ ಮೇಲೆ ಗ್ಯಾರಂಟಿ ಇರುವುದಿಲ್ಲ ಎಂದೆಲ್ಲ ಸುಳ್ಳು ಸುದ್ದಿ ಹಬ್ಬಿಸಿ ಅಪಪ್ರಚಾರಕ್ಕೆ ತೊಡಗಿದ್ದಾರೆ. ನಾವು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ದಿ ಯೋಜನೆಗಳನ್ನು ಮಾಡುತ್ತಾ ಇದ್ದೇವೆ ಎಂದು ತಿಳಿಸಿದರು.

ಈ ಹಿಂದೆ ನೀಡುತ್ತಿದ್ದ 5 ಕೆ.ಜಿ ಅಕ್ಕಿ ಜೊತೆಗೆ 5 ಕೆಜಿ ಸೇರಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. 200 ಯುನಿಟ್ ಗಳವರೆಗೆ ಉಚಿತವಾಗಿ ವಿದ್ಯುತ್ ನ್ನು ನೀಡಲಾಗುತ್ತಿದೆ. 1.22 ಕೋಟಿ ಕುಟುಂಬಗಳ ಮನೆ ಯಜಮಾನಿಯರಿಗೆ ಎರಡು ಸಾವಿರ ಹಣವನ್ನು ನೀಡಲಾಗುತ್ತಿದೆ. ಯುವ ನಿಧಿ ಯೋಜನೆಯಡಿ ಪದವಿ ಹೊಂದಿದ ನಿರುದ್ಯೋಗಿಗಳಿಗೆ 3 ಸಾವಿರ ಹಾಗೂ ಡಿಪ್ಲೊಮಾ ಪಡೆದವರಿಗೆ 1,500 ರು. ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ 50,018 ಕೋಟಿಗಳನ್ನು ಮೀಸಲು ಇಡಲಾಗಿದೆ. ಆಸ್ತಿ ಸೃಜನೆ ಯೋಜನೆಗಳಿಗೆ 83 ಸಾವಿರ ಕೋಟಿಗಳನ್ನು ಮೀಸಲು ಇಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ರೈತರು ರೇಷ್ಮೆ ಬೆಳೆ ಬೆಳೆಯಲು ಮುಂದಾಗಬೇಕು

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಪಿರಿಯಾಪಟ್ಟಣ ತಾಲೂಕು ರೇಷ್ಮೆ ಬೆಳೆ ಬೆಳೆಯಲು ಉತ್ತಮವಾದ ಮಣ್ಣು ಇದೆ. ಈಗ ರೇಷ್ಮೆಗೆ ಉತ್ತಮ ಬೆಲೆ ಇದೆ, ಕಾರಣ ಚೀನಾ ದೇಶದಿಂದ ರೇಷ್ಮೆ ಆಮದು ಕಡಿಮೆ ಆಗಿದೆ. ಆದ್ದರಿಂದ ಜಿಲ್ಲೆಯ ರೈತರು ರೇಷ್ಮೆ ಬೆಳೆ ಬೆಳೆಯಲು ಮುಂದಾಗಬೇಕು. ನಿಮ್ಮ ಶಾಸಕ ಕೆ. ವೆಂಕಟೇಶ್‌ ಗೆ ಸಿಲ್ಕ್ ಮತ್ತು ಮಿಲ್ಕ್ ಖಾತೆ ನೀಡಿದ್ದಾರೆ. ರೈತರ ಪರವಾಗಿ ಅನೇಕ ಯೋಜನೆ ಜಾರಿ ಮಾಡಲಾಗುತ್ತಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ 147 ಕೋಟಿ ವೆಚ್ಚದಲ್ಲಿ 40 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಅನ್ನು ಉತ್ಪಾದನೆ ಮಾಡಲು ಯೋಜನೆ ರೂಪಿಸಲಾಗಿದೆ. ಕಾಡಂಚಿನ ರೈತರಿಗೆ ಹೆಚ್ಚು ಅನುಕೂಲವಾಗಲಿದ್ದು, ಕೃಷಿ ಚಟುವಟಿಕೆಗೆ ನಿರಂತರ ವಿದ್ಯುತ್ ಮತ್ತು ನೀರು ಪೂರೈಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ನಮ್ಮ ತಾಲೂಕು ಒಂದರಲ್ಲಿಯೇ 439.88 ಕೋಟಿ

ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆಯ ಸಚಿವ ಕೆ. ವೆಂಕಟೇಶ್ ಮಾತನಾಡಿ, ಖಜಾನೆ ಖಾಲಿಯಾಗಿದೆ, ಸರ್ಕಾರದಲ್ಲಿ ಹಣ ಇಲ್ಲ ಎನ್ನುವ ಪ್ರತಿಪಕ್ಷಗಳು ಇತ್ತ ತಿರುಗಿ ನೋಡಲಿ, ನಮ್ಮ ತಾಲೂಕು ಒಂದರಲ್ಲಿಯೇ 439.88 ಕೋಟಿ ಯೋಜನೆ ಜಾರಿಯಾಗಿದೆ, ಮಹದೇಶ್ವರ ಬೆಟ್ಟದ ಸಭೆಯಲ್ಲಿ ಮೈಸೂರು- ಚಾಮರಾಜನಗರ ಜಿಲ್ಲೆಗಳ ಅಭಿವದ್ಧಿಗೆ 3,600 ಕೋಟಿಗಳ ಅನುದಾನವನ್ನು ಬಿಡುಗಡೆ ಗೊಳಿಸಲಾಗಿದೆ. ಇದು ಅಭಿವೃದ್ದಿಯಲ್ಲವೇ, ರಾಜಕಾರಣಿಗಳು ಅಧಿಕಾರ ಮಾಡುತ್ತಾರೆ ಆದರೆ ಅಧಿಕಾರದಲ್ಲಿ ಇದ್ದಾಗ ನಾವು ಏನು ಅಭಿವೃದ್ದಿ ಮಾಡಿದ್ದೇವೆ, ಜನಪರವಾಗಿ ಕೆಲಸ ಮಾಡಿದ್ದೇವೆ ಎಂಬುದು ಮುಖ್ಯ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ನಮ್ಮ ಸರ್ಕಾರ ಸಮಾನತೆಯನ್ನು ಹೋಗಲಾಡಿಸಿ ಅಭಿವೃದ್ದಿ ಮಾಡುವ ಮೂಲಕ ಸಮಾನತೆಯನ್ನು ಜಾರಿಗೆ ತರಲು ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.

ನಗರಾಭಿವೃದ್ದಿ ಸಚಿವರಾದ ಬೈರತಿ ಸುರೇಶ್, ಉನ್ನತ ಶಿಕ್ಷಣ ಸಚಿವ ಸುಧಾಕರ್, ಶಾಸಕ ಡಿ. ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ, ಡಾ. ತಿಮ್ಮಯ್ಯ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಆಶ್ರಯ ಸಮಿತಿ ಅಧ್ಯಕ್ಷ ನಿತಿನ್‌ ವೆಂಕಟೇಶ್, ಪಶುಸಂಗೋಪನಾ ಇಲಾಖೆ ಆಯುಕ್ತರಾದ ರೂಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಮುಖಂಡ ಎಚ್.ಡಿ. ಗಣೇಶ್, ಪುರಸಭೆ ಅಧ್ಯಕ್ಷ ಪ್ರಕಾಶ್‌ ಸಿಂಗ್, ಉಪಾಧ್ಯಕ್ಷೆ ಸುವರ್ಣರವಿ, ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?