ಕನಕಪುರ: ರೈತರ ಅಭ್ಯುದಯವೇ ಒಕ್ಕೂಟದ ಮೂಲ ಉದ್ದೇಶವಾಗಿರುವುದರಿಂದ ಒಕ್ಕೂಟ ಗಳಿಸಿದ 60 ಕೋಟಿ ಲಾಭಾಂಶದಲ್ಲಿ ರೈತರಿಗೆ ಲೀಟರ್ ಗೆ 1 ರು. ಸಹಾಯಧನ ನೀಡಲಾಗುತ್ತಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.
ನಮ್ಮ ಪಕ್ಷದ ಮುಖಂಡರು ಹಾಗೂ ಹಾಲು ಒಕ್ಕೂಟದ ನಿರ್ದೇಶಕರ ಒತ್ತಡದಿಂದ ಒಲ್ಲದ ಮನಸ್ಸಿನಿಂದಲೇ ನಾನು ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡೆ. ಆಗ 14.5 ಕೋಟಿ ನಷ್ಟದಲ್ಲಿದ್ದ ಒಕ್ಕೂಟವನ್ನು 60 ಕೋಟಿ ಲಾಭ ಗಳಿಸಲು ಕಳೆದ 9 ತಿಂಗಳಿಂದ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ನೌತರರು ಹಗಲಿರುಳು ಶ್ರಮವಹಿಸಿದ್ದು ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಸುರೇಶ್, ಈ ಲಾಭವನ್ನು ರೈತರು ಹಾಗೂ ಕಾರ್ಮಿಕರಿಗೆ ನೀಡಲು ಒಮ್ಮತದಿಂದ ತೀರ್ಮಾನಿಸಿ ರೈತರ ಖಾತೆಗೆ ಲೀಟರ್‌ಗೆ 1.ರುಪಾಯಿಯಂತೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಾಕಿ, ಕಾರ್ಮಿಕರು ಮತ್ತು ಸಿಬ್ಬಂದಿಗೆ ಉಡುಗೊರೆ ರೂಪದಲ್ಲಿ ನೀಡುತ್ತಿರುವುದಾಗಿ ತಿಳಿಸಿದರು. ನಾವೆಲ್ಲರೂ ಬೆಂಗಳೂರು ಜಿಲ್ಲೆಯವರಾಗಿದ್ದು ಕೆಲವರಿಗೆ ಮಾತ್ರ ರಾಮನಗರ ಜಿಲ್ಲೆ ಎಂಬುದು ನೆಪದ ಮಾತಾಗಿದೆ. ಬೆಂಗಳೂರು ಹೆಸರೇ ಒಂದು ಗತ್ತಾಗಿದ್ದು ಇಡೀ ವಿಶ್ವವೇ ಬೆಂಗಳೂರನ್ನು ಪ್ರೀತಿಸುವುದರ ಜೊತೆಗೆ ವಿದ್ಯೆ, ವ್ಯಾಪಾರಕ್ಕಾಗಿ ಬೆಂಗಳೂರಿನತ್ತ ಆಗಮಿಸುತ್ತಿರುದನ್ನು ಯುವಕರು ಗಮನಿಸಬೇಕಾಗಿದೆ. ಪೋಷಕರ ಕಷ್ಟ, ಬವಣೆಗಳನ್ನು ಅರಿತು
ಶಿಕ್ಷಣಕ್ಕೆ ಒತ್ತು ನೀಡಿ, ಓದಿನ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಿದರು.ಕೊಲ್ಲಿ ರಾಷ್ಟ್ರಗಳ ನಡುವಿನ ಯುದ್ಧದ ಬಿಕ್ಕಟ್ಟಿನಿಂದ ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳಲಿದ್ದು, ಈ ನಿಟ್ಟಿನಲ್ಲಿ ಚಿಂತಿಸಿ ಒಕ್ಕೂಟದಲ್ಲಿ ಶೇಕಡ 30ರಷ್ಟು ರೈತರ ಮಕ್ಕಳಿಗೆ, ಶೇ.10ರಷ್ಟು ಸಿಬ್ಬಂದಿ ಹಾಗೂ ಶೇ.5ರಷ್ಟು ಕಾರ್ಮಿಕರಿಗೆ ಹಾಗೂ ಶೇ.5 ರಷ್ಟು ನಮ್ಮ ಡೀಲರ್‌ಗಳಿಗೆ ಮೀಸಲಿಡಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹಲವು ಬದಲಾವಣೆ ಮೂಲಕ ಅಭಿವೃದ್ಧಿಯ ಪರ್ವ ಆರಂಭವಾಗಲಿದ್ದು ಜಿಲ್ಲೆಯ ಚಿತ್ರಣವೇ ಬದಲಾಲಿದೆ ಎಂದು ಹೇಳಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಭಾಗದ ಮಕ್ಕಳ ಅನುಕೂಲಕ್ಕಾಗಿ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಸಲಹೆ, ಮಾರ್ಗದರ್ಶನದಲ್ಲಿ ತಾಲೂಕಾದ್ಯಂತ ಹತ್ತು ಪಬ್ಲಿಕ್ ಶಾಲೆಗಳನ್ನು ತೆರೆದು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಗೀಳನ್ನು ಬಿಟ್ಟು ಓದಿನ ಕಡೆಗೆ ಹೆಚ್ಚು ಗಮನ ನೀಡಿ ತಮ್ಮ ಪೋಷಕರಿಗೆ ಹಾಗೂ ತಾಲೂಕಿಗೆ ಕೀರ್ತಿ ತರುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬಮೂಲ್ ಉಪಾಧ್ಯಕ್ಷ ರಾಜಣ್ಣ, ನಿರ್ದೇಶಕ ಹರೀಶ್ ಕುಮಾರ್, ಮುನಿರಾಜು, ಕೃಷ್ಣಯ್ಯ, ಬೈರೇಗೌಡ, ಲಿಂಗೇಶ್ ಕುಮಾರ್, ಕೆ.ಆರ್.ರಮೇಶ್, ಸತೀಶ್ ಗೌಡ, ಪಿ.ನಾಗರಾಜು, ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಸಿ.ಸುರೇಶ್, ಮುಖಂಡರಾದ ಎಚ್.ಕೆ.ಶ್ರೀಕಂಠು, ದಿಲೀಪ್, ಕೆ.ಆರ್.ಮಧು, ಬಮೂಲ್ ಒಕ್ಕೂಟದ ಸಿಬ್ಬಂದಿ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಕನಕಪುರದ ಶಿವನಹಳ್ಳಿ ಬಳಿಯ ಮೆಗಾಡೈರಿ ಆವರಣದಲ್ಲಿ ಬಮೂಲ್ ಒಕ್ಕೂಟ ಹಾಗೂ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಉಡುಗೊರೆ ಕಾರ್ಯಕ್ರಮವನ್ನು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಉದ್ಘಾಟಿಸಿ, ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದರು.