ಮತದಾನದ ಬಹಿಷ್ಕಾರದ ಎಚ್ಚರಿಗೆ ನೀಡಿದ ಬಸವೇಶ್ವರ ಕಾಲೋನಿ ಗ್ರಾಮಸ್ಥರೊಂದಿಗೆ ಶಾಂತಿ ಸಭೆ

KannadaprabhaNewsNetwork | Published : Apr 16, 2024 1:03 AM

ಸಾರಾಂಶ

ಪೂರ್ವಜರ ಕಾಲದಿಂದಲೂ ಪೂಜಿಸಿಕೊಂಡು ಬಂದಿರುವ ಬಂಡೆ ಬಸವೇಶ್ವರ ದೇವಾಲಯಕ್ಕೆ ನಮಗೆ ಪೂಜೆ ಮಾಡಲು ಅವಕಾಶ ನೀಡಿಲ್ಲ, ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟರೆ ಎಲ್ಲರೂ ಒಟ್ಟಾಗಿ ಬಂದು ಮತದಾನದಲ್ಲಿ ಭಾಗವಹಿಸುತ್ತೇವೆ

ಕನ್ನಡಪ್ರಭ ವಾರ್ತೆ ಬೆಟ್ಟದಪುರ

ಬಂಡೆ ಬಸವೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ಬಸವೇಶ್ವರ ಕಾಲೋನಿಯ ಗ್ರಾಮಸ್ಥರೊಂದಿಗೆ ಸೋಮವಾರ ನಾಡಕಚೇರಿಯಲ್ಲಿ ಉಪತಹಸೀಲ್ದಾರ್ ಶಶಿಧರ್ ಅವರ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.

ಗ್ರಾಮದ ಮುಖಂಡ ಮಲ್ಲಯ್ಯ ಮಾತನಾಡಿ, ಪೂರ್ವಜರ ಕಾಲದಿಂದಲೂ ಪೂಜಿಸಿಕೊಂಡು ಬಂದಿರುವ ಬಂಡೆ ಬಸವೇಶ್ವರ ದೇವಾಲಯಕ್ಕೆ ನಮಗೆ ಪೂಜೆ ಮಾಡಲು ಅವಕಾಶ ನೀಡಿಲ್ಲ, ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟರೆ ಎಲ್ಲರೂ ಒಟ್ಟಾಗಿ ಬಂದು ಮತದಾನದಲ್ಲಿ ಭಾಗವಹಿಸುತ್ತೇವೆ ಎಂದರು.

ಶಿರಸ್ತೆದ್ದಾರ್ ನಂದಕುಮಾರ್ ಮಾತನಾಡಿ, ಮತದಾನ ಮಾಡುವುದು ಎಲ್ಲರ ಹಕ್ಕು, ಮತದಾನದಿಂದ ಯಾರು ಹಿಂದುಳಿಯಬಾರದು ಎಂಬ ಉದ್ದೇಶದಿಂದ ಶಾಂತಿ ಸಭೆಯನ್ನು ಆಯೋಜಿಸಿದೆ. ಬಂಡೆ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಅನುವು ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ನಾವು ಮನವಿ ಪತ್ರ ಕಳಿಸುತ್ತೇವೆ, ಇನ್ನು ಎರಡು ಮೂರು ದಿನದೊಳಗೆ ಅವರ ಆದೇಶವನ್ನು ನಿಮಗೆ ತಿಳಿಸುತ್ತೇವೆ ಎಲ್ಲರೂ ಶಾಂತಿಯುತವಾಗಿ ವರ್ತಿಸಿ ಮತದಾನ ಮಾಡಬೇಕು ಎಂದು ತಿಳಿಸಿದರು.

ಇದೇ ವೇಳೆ ಬಸವೇಶ್ವರ ಕಾಲೋನಿಯ ಗ್ರಾಮಸ್ಥರಿಗೆ ಸ್ಮಶಾನದ ಜಾಗದ ಸಮಸ್ಯೆ ಇದ್ದು, ಅದನ್ನು ತಕ್ಷಣದಲ್ಲಿಯೇ ಬಗೆಹರಿಸಿ ಕೊಡಬೇಕೆಂದು ಮನವಿ ಪತ್ರ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಸಿದ ಉಪ ತಹಸೀಲ್ದಾರ್ ಶಶಿಧರ್, ಬೆಟ್ಟದಪುರ ಗ್ರಾಮದಲ್ಲಿ ಒಟ್ಟು ನಾಲ್ಕು ಸ್ಮಶಾನ ಜಾಗಗಳಿದ್ದು, ಎಲ್ಲವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಬಿಡಲಾಗಿದೆ, ನಿಮ್ಮ ಭಾಗಕ್ಕೆ ಬೇಕೆಂದರೆ ಸರ್ಕಾರದ ಜಾಗವನ್ನು ಗುರುತಿಸಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಕಂದಾಯ ನಿರೀಕ್ಷಕ ಅಜ್ಮಲ್ ಶರೀಫ್, ಪಿಎಸ್ಐ ಪ್ರಕಾಶ್ ಎಂ ಎತ್ತಿನಮನಿ, ಗ್ರಾಮ ಲೇಖಾಧಿಕಾರಿ ಗುರು ನಾಯಕ್, ಮುಖಂಡರಾದ ಗಿರಿಗೌಡ ಮಹಾದೇವ್, ಬಸವರಾಜು, ಸುಬ್ರಮಣ್ಯ, ಕೃಷ್ಣನಾಯಕ್, ಸತೀಶ್ ಪಾಲ್ಗೊಂಡಿದ್ದರು.

Share this article