ಪದವಿಯೊಂದಿಗೆ ಕೌಶಲ್ಯವಿದ್ದರಷ್ಟೇ ಯಶಸ್ಸು: ಆಯನೂರು

KannadaprabhaNewsNetwork |  
Published : Sep 11, 2026, 01:45 AM IST
ಪೋಟೋ: 10ಎಸ್‌ಎಂಜಿಕೆಪಿ09ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಗುರುವಾರ ಡಾ. ಶರತ್ ಮರಿಯಪ್ಪ ಫೌಂಡೇಷನ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಕ-ಯುವತಿಯರಿಗಾಗಿ ಆಯೋಜಿಸಿದ್ದ ‘ಉದ್ಯೋಗ ಪಥ’ ಉಚಿತ ತರಬೇತಿ ಕಾರ್ಯಕ್ರಮವನ್ನು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಉನ್ನತ ಪದವಿ ಪಡೆದ ಮಾತ್ರಕ್ಕೆ ವ್ಯಕ್ತಿ ಶಿಕ್ಷಣ ಪಡೆದಿದ್ದಾನೆ ಎಂದು ಹೇಳಲಾಗದು. ಅಕ್ಷರಜ್ಞಾನಕ್ಕೂ ಶಿಕ್ಷಣಕ್ಕೂ ದೊಡ್ಡ ವ್ಯತ್ಯಾಸವಿದೆ. ವ್ಯಕ್ತಿಯಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಸೂಕ್ತ ತರಬೇತಿ ನೀಡಿ, ಸಮಾಜ ಹಾಗೂ ಜಗತ್ತಿನ ಬೆಳವಣಿಗೆಗಳ ಕುರಿತು ಅರಿವು ಮೂಡಿಸುವುದೇ ಸಮಗ್ರ ಶಿಕ್ಷಣದ ಉದ್ದೇಶವಾಗಬೇಕು ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಉನ್ನತ ಪದವಿ ಪಡೆದ ಮಾತ್ರಕ್ಕೆ ವ್ಯಕ್ತಿ ಶಿಕ್ಷಣ ಪಡೆದಿದ್ದಾನೆ ಎಂದು ಹೇಳಲಾಗದು. ಅಕ್ಷರಜ್ಞಾನಕ್ಕೂ ಶಿಕ್ಷಣಕ್ಕೂ ದೊಡ್ಡ ವ್ಯತ್ಯಾಸವಿದೆ. ವ್ಯಕ್ತಿಯಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಸೂಕ್ತ ತರಬೇತಿ ನೀಡಿ, ಸಮಾಜ ಹಾಗೂ ಜಗತ್ತಿನ ಬೆಳವಣಿಗೆಗಳ ಕುರಿತು ಅರಿವು ಮೂಡಿಸುವುದೇ ಸಮಗ್ರ ಶಿಕ್ಷಣದ ಉದ್ದೇಶವಾಗಬೇಕು ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಗುರುವಾರ ಡಾ. ಶರತ್ ಮರಿಯಪ್ಪ ಫೌಂಡೇಷನ್ ವತಿಯಿಂದ ಅಚೀವರ್ಸ್ ಟ್ರಸ್ಟ್ ಮತ್ತು ಕೋಚಿಂಗ್ ಸೆಂಟರ್, ಬೆಂಗಳೂರಿನ ಸ್ಪರ್ಧಾ ಅರಿವು ಅಕಾಡೆಮಿ ಹಾಗೂ ಶಿಕಾರಿಪುರದ ಸಾಧನಾ ಅಕಾಡೆಮಿ ಸಹಯೋಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಕ-ಯುವತಿಯರಿಗಾಗಿ ಆಯೋಜಿಸಿದ್ದ ‘ಉದ್ಯೋಗ ಪಥ’ ಉಚಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೈದ್ಯರು, ಇಂಜಿನಿಯರ್‌ಗಳು ಸಹಿತ ವಿವಿಧ ಕ್ಷೇತ್ರಗಳಲ್ಲಿ ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ಹೊರಬರುತ್ತಿದ್ದಾರೆ. ಆದರೆ ಪದವಿ ಪಡೆದ ಎಲ್ಲರೂ ತಮ್ಮ ವೃತ್ತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕೇವಲ ಪಠ್ಯಕ್ರಮದ ಜ್ಞಾನ ಸಾಕಾಗುವುದಿಲ್ಲ. ಕಾಮನ್‌ಸೆನ್ಸ್, ಸೃಜನಶೀಲತೆ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಹಾಗೂ ತಮ್ಮ ಪ್ರತಿಭೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮನೋಭಾವ ಅಗತ್ಯ ಎಂದರು.ಶಿಕ್ಷಣ ತಜ್ಞ ಹಾಗೂ ಆರ್ಯ ಪಿಯು ಕಾಲೇಜಿನ ಮುಖ್ಯಸ್ಥ ಎನ್. ರಮೇಶ್ ಮಾತನಾಡಿ, ಆರ್ಥಿಕವಾಗಿ ಸದೃಢರಾಗಲು ಉದ್ಯೋಗ ಅತ್ಯಗತ್ಯ. ಆದರೆ ಪ್ರಸ್ತುತ ದೇಶದಲ್ಲಿ ಸರ್ಕಾರಿ ಹಾಗೂ ಸಾರ್ವಜನಿಕ ವಲಯದ ಉದ್ಯೋಗಾವಕಾಶಗಳು ಸೀಮಿತವಾಗುತ್ತಿವೆ. ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದ್ದು, ಉದ್ಯೋಗಾವಕಾಶಗಳು ಅದೇ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ. ನೂರು ಉದ್ಯೋಗಗಳಿಗೆ ಸಾವಿರಾರು ಮಂದಿ ಅರ್ಜಿ ಸಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಡಾ. ಶರತ್ ಮರಿಯಪ್ಪ ಫೌಂಡೇಷನ್ ಸಂಸ್ಥಾಪಕ ಡಾ. ಶರತ್ ಮರಿಯಪ್ಪ ಮಾತನಾಡಿ, ಒಬ್ಬ ಯುವಕ ಸರ್ಕಾರಿ ಉದ್ಯೋಗ ಪಡೆದರೆ ಅದು ಕೇವಲ ಆತನ ವೈಯಕ್ತಿಕ ಆರ್ಥಿಕ ಬಲವಲ್ಲ. ಇಡೀ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುತ್ತದೆ. ಆತನ ಯಶಸ್ಸು ಸ್ನೇಹಿತರು ಹಾಗೂ ಸುತ್ತಮುತ್ತಲಿನ ಇತರ ಯುವಕರಿಗೂ ಪ್ರೇರಣೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಯುವಕರಿಗೆ ಉಚಿತ ತರಬೇತಿ ನೀಡುವ ಉದ್ದೇಶದಿಂದ ‘ಉದ್ಯೋಗ ಪಥ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಶಿಕ್ಷಕರ ನೇಮಕಾತಿಗೆ ಸಂಬಂಧಿಸಿ ಬಿಇಡ್ ವಿದ್ಯಾರ್ಥಿಗಳಿಗೂ ವಿಶೇಷ ಉಚಿತ ತರಬೇತಿ ನೀಡಲು ನಿರ್ಧರಿಸಲಾಗಿದೆ. ಸೆ.26ರಿಂದ 15 ದಿನಗಳ ಕಾಲ ತರಬೇತಿ ಆಯೋಜಿಸಲಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಸರ್ಕಾರಿ ಶಿಕ್ಷಕರಾಗಿ ಆಯ್ಕೆಯಾಗಬೇಕು ಎಂಬುದು ಇದರ ಉದ್ದೇಶ ಎಂದರು.

ಅಪರ ಜಿಲ್ಲಾಧಿಕಾರಿ ವಿ. ಅಭಿಷೇಕ್ ಮಾತನಾಡಿ, ಜೀವನದಲ್ಲಿ ಅವಕಾಶಗಳು ಎದುರಾದಾಗ ‘ಬೈ ಚಾನ್ಸ್’ಗಿಂತ ‘ಬೈ ಚಾಯ್ಸ್’ ಮೂಲಕ ನಿರ್ಧಾರ ಕೈಗೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಇಂದಿನ ನಿರ್ಧಾರವೇ ಮುಂದಿನ ದಿನಗಳಲ್ಲಿ ನಾವು ಏನಾಗಬೇಕು ಎಂಬುದನ್ನು ನಿರ್ಧರಿಸುತ್ತದೆ. ಮುಂದಿನ ವರ್ಷ, ಐದು ವರ್ಷ ಅಥವಾ 20 ವರ್ಷಗಳ ನಂತರ ನಮ್ಮನ್ನು ಯಾವ ಸ್ಥಾನದಲ್ಲಿ ನೋಡಿಕೊಳ್ಳಬೇಕು ಎಂಬ ಸ್ಪಷ್ಟ ಗುರಿಯೊಂದಿಗೆ ಪ್ರತಿಯೊಂದು ಆಯ್ಕೆಯನ್ನೂ ಮಾಡಿಕೊಳ್ಳಬೇಕು. ಯಾವುದೋ ಒಂದು ಕೆಲಸ ಸಿಕ್ಕಿತು ಎಂದು ಅದನ್ನು ಒಪ್ಪಿಕೊಳ್ಳುವುದಕ್ಕಿಂತ ನಮ್ಮ ಸಾಮರ್ಥ್ಯ ಮತ್ತು ಭವಿಷ್ಯಕ್ಕೆ ಸೂಕ್ತವಾದ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದು ಮುಖ್ಯ ಎಂದು ಹೇಳಿದರು.ತರಬೇತಿ ತಜ್ಞ ಶಂಕರ್ ಮಾತನಾಡಿ, ಭಾರತವನ್ನು ವಿಶ್ವದ ಯುವ ರಾಷ್ಟ್ರ ಎಂದು ಓದಿದ್ದೇವೆ, ಕೇಳಿದ್ದೇವೆ. ಆದರೆ ಶಿವಮೊಗ್ಗದ ಕುವೆಂಪು ಮೈದಾನದಲ್ಲಿ ಯುವಕರ ಉತ್ಸಾಹದ ಅಲೆ ಕಣ್ಣಾರೆ ನೋಡುತ್ತಿದ್ದೇವೆ. ಸಮುದ್ರವಿಲ್ಲದ ಶಿವಮೊಗ್ಗದಲ್ಲಿ ಜೇಸಿ ಅಲೆಯನ್ನೇ ಎಬ್ಬಿಸುವಂತೆ ಡಾ. ಶರತ್ ಮರಿಯಪ್ಪ ಫೌಂಡೇಷನ್ ಯುವಶಕ್ತಿಯನ್ನು ಒಗ್ಗೂಡಿಸುತ್ತಿರುವುದು ಶ್ಲಾಘನೀಯ ಎಂದರು.ಕೆ. ರಂಗನಾಥ್, ಜಿ.ಡಿ. ಮಂಜುನಾಥ್, ವಿನೋದ್ ಕೆ., ಪ್ರವೀಣ್ ಕುಮಾರ್, ರಾಜಶೇಖರ್, ಆಲ್ತಾಫ್ ಫರ್ವಿಜ್, ಕೇಶವ, ಎಚ್.ಪಿ. ಗಿರೀಶ್, ಕುಬೇಂದ್ರಪ್ಪ ಸಹಿತ ಹಲವು ಮುಖಂಡರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಾಧನಾ ಅಕಾಡೆಮಿಯ ಬಿ. ಮಂಜುನಾಥ್, ಸ್ಪರ್ಧಾ ಅರಿವು ಅಕಾಡೆಮಿಯ ಪಿ.ವಿ. ಬೈರಪ್ಪ, ಪಿಎಸ್‌ಐ ಕಿಟ್ಟಿ ಸರ್, ಸವಿತಾ ಮೊದಲಾದವರು ಭಾಗವಹಿಸಿದ್ದರು.

----ಕೋಟ್ಸ್----

ಯುವಕರು ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ನಿರಂತರ ಪರಿಶ್ರಮ ಹಾಗೂ ಸರಿಯಾದ ಮಾರ್ಗದರ್ಶನದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾದರೆ ಯಶಸ್ಸು ಸಾಧಿಸಬಹುದು. ಯುವಕರ ಕನಸುಗಳನ್ನು ನನಸು ಮಾಡುವುದೇ ಫೌಂಡೇಷನ್‌ನ ಪ್ರಮುಖ ಧ್ಯೇಯ

— ಡಾ. ಶರತ್ ಮರಿಯಪ್ಪ‌, ಫೌಂಡೇಷನ್‌ ಸಂಸ್ಥಾಪಕ

---ಬಾಕ್ಸ್‌------

ಕಿಕ್ಕಿರಿದ ಕುವೆಂಪು ರಂಗಮಂದಿರ

ಶಿಕ್ಷಕರ ನೇಮಕಾತಿಯೂ ಸಹಿತ ಮುಂದಿನ ಸರಿ ಸುಮಾರು 72 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಪೂರಕವಾಗಿ ಡಾ. ಶರತ್‌ ಮರಿಯಪ್ಪ ಫೌಂಡೇಷನ್‌ ವತಿಯಿಂದ ಆಸಕ್ತ ಯುವಕ-ಯುವತಿಯರಿಗೆ 2 ತಿಂಗಳ ಕಾಲ ಉಚಿತ ತರಬೇತಿ ನೀಡುತ್ತಿದ್ದು, ಇದರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಿಕ್ಕಿರಿದ ಕುವೆಂಪು ರಂಗಮಂದಿರ ಸಾಕ್ಷಿಯಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಬೆಂಗಳೂರಿನ ಪಿಎಸ್‌ಐ ಕಿಟ್ಟಿ ಸರ್‌, ಸಾಧನಾ ಅಕಾಡೆಮಿಯ ಬಿ. ಮಂಜುನಾಥ್, ಸ್ಪರ್ಧಾ ಅರಿವು ಅಕಾಡೆಮಿಯ ಪಿ.ವಿ. ಬೈರಪ್ಪ ಅವರಿಂದ ವಿದ್ಯಾರ್ಥಿಗಳು ಉಪಯುಕ್ತ ಮಾಹಿತಿ ಪಡೆದರು.----ಫೋಟೊ-----

10ಎಸ್‌ಎಂಜಿಕೆಪಿ09

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಗುರುವಾರ ಡಾ. ಶರತ್ ಮರಿಯಪ್ಪ ಫೌಂಡೇಷನ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಕ-ಯುವತಿಯರಿಗಾಗಿ ಆಯೋಜಿಸಿದ್ದ ‘ಉದ್ಯೋಗ ಪಥ’ ಉಚಿತ ತರಬೇತಿ ಕಾರ್ಯಕ್ರಮವನ್ನು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಉದ್ಘಾಟಿಸಿದರು.

--------

10ಎಸ್‌ಎಂಜಿಕೆಪಿ10

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಗುರುವಾರ ಡಾ.ಶರತ್ ಮರಿಯಪ್ಪ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಉದ್ಯೋಗ ಪಥ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುವಕ-ಯುವತಿಯರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲುಷಿತ ನೀರು ಸೇವನೆ: ಮೊರಾರ್ಜಿ ವಸತಿ ಶಾಲೆಯ 43 ಮಕ್ಕಳು ಅಸ್ವಸ್ಥ
ಮಿಲಿಟರಿಯಿಂದ ಶಿಸ್ತು ಬದ್ದ ಜೀವನ ಸಾಧ್ಯ