ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೩೯ನೇ ಕರ್ನಾಟಕ ರಾಜ್ಯ ಮಟ್ಟದ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿಗೆ ಸಹಾಯ ಮಾಡಿದ ದಾನಿಗಳಿಗೆ ನೆನಪಿನ ಕಾಣಿಕೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕಲ್ಪತರು ನಾಡಿನಲ್ಲಿ ಒಂದಿಲ್ಲೊಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತವೆ. ಸಂಸ್ಕೃತಿ ಕ್ರೀಡೆ ಹೆಚ್ಚು ಒತ್ತು ಕೊಡುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ವಿಶ್ವದೆಲ್ಲೆಡೆ ಹೆಸರು ಮಾಡಿರುವ ಕ್ರೀಡೆಗಳೆಂದರೆ ಕ್ರಿಕೆಟ್ ಮತ್ತು ಫುಟ್ಬಾಲ್ ಆಟಗಳಾಗಿವೆ. ಖೋ ಖೋ ಕ್ರೀಡೆಯು ೧೯೩೬ ರಿಂದ ಪ್ರಸಿದ್ಧಿಗೆ ಬಂದಿತು. ಕ್ರೀಡೆಯೊಂದಿಗೆ ಜನರ ಮನಸ್ಸನ್ನು ಒಂದುಗೂಡಿಸುವದರ ಜೊತೆಗೆ ಜನರಿಗೆ ಸ್ವಾಭಿಮಾನವನ್ನು ಬೆಳೆಸುತ್ತದೆ. ಬೇರೆ ಬೇರೆ ರಾಜ್ಯ ಬೇರೆ ಬೇರೆ ಜನಾಂಗ ಧರ್ಮ ಎಲ್ಲವನ್ನು ಸಮಾನವಾಗಿ ಕಾಣುವ ಏಕೈಕ ಮಾರ್ಗ ಎಂದರೆ ಕ್ರೀಡಾಮಾರ್ಗವಾಗಿದೆ. ಕ್ರೀಡೆಯಲ್ಲಿ ಸಾಕಷ್ಟು ಹೆಸರುವಾಸಿ ಆದ ಕ್ರೀಡಾಪಟುಗಳಿದ್ದಾರೆ. ಇವರ ಹಿಂದೆ ಗುರು, ಮುಂದೆ ಗುರಿ ಇರುವುದರಿಂದ ಯಶಸ್ಸು ಸಾಧ್ಯವಾಗಿದೆ ಎಂದರು. ತಾಲೂಕು ದಂಡಾಧಿಕಾರಿಗಳಾದ ಮೋಹನ್ ಕುಮಾರ್ ಮಾತನಾಡಿ ಸಾಂಸ್ಕೃತಿಕ ಕ್ರೀಡೆಗಳಿಂದ ಜನರು ಒಂದೆಡೆ ಸೇರುತ್ತಾರೆ. ಎಲ್ಲರೂ ಅನ್ಯೋನ್ಯತೆಯಿಂದ ಬೆಸೆದುಕೊಳ್ಳುತ್ತಾರೆ. ಅನೇಕ ಒತ್ತಡಗಳ ಮಧ್ಯೆ ಕ್ರೀಡೆಯು ಮನುಷ್ಯನಿಗೆ ಅವಶ್ಯಕವಾಗಿ ಬೇಕಾಗುತ್ತದೆ ಎಂದರು. ನಗರಸಭೆಯ ಮಾಜಿ ಉಪಾಧ್ಯಕ್ಷ ಸೊಪ್ಪು ಗಣೇಶ್ ಮಾತನಾಡಿ ಕ್ರೀಡೆಯನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಧರ್ಮವಾಗಬೇಕು. ಆಗ ಮಾತ್ರ ತಾಲೂಕುಗಳ ಅಭಿವೃದ್ಧಿ ಸಾಧ್ಯವೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಮಾತನಾಡಿ, ತಿಪಟೂರಿನ ಸ್ಪೋರ್ಟ್ಸ್ ಕ್ಲಬ್ ಸುಮಾರು ೩೦ ವರ್ಷಗಳಿಂದ ಎಲ್ಲಾ ಕ್ರೀಡೆಗಳಿಗೂ ಪ್ರೋತ್ಸಾಹ ಕೊಡುತ್ತಾ ಬಂದಿದೆ. ರಾಜ್ಯ ಅಂತ ರಾಜ್ಯ ಹಾಗೂ ವಿವಿಧ ಬಗೆಯ ದೇಶಿ ಆಟಗಳನ್ನು ಸೇರಿದಂತೆ ಎಲ್ಲಾ ಕ್ರೀಡೆಗಳಿಗೂ ತಿಪಟೂರ್ ಕ್ರೀಡಾ ಕ್ಲಬ್ ತೆರವು ನೀಡುತ್ತಾ ಬಂದಿದೆ. ಗ್ರಾಮೀಣ ಕ್ರೀಡೆಗಳು ನಶಿಸುತ್ತಿರುವುದು ವಿ?ಧಕರವಾಗಿದೆ. ಇಂದಿನ ಜನರು ಸೋಶಿಯಲ್ ಮೀಡಿಯಾ ಬಳಕೆ ಕಡಿಮೆ ಮಾಡಿ ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ತೊಡಗಿಕೊಳ್ಳಬೇಕೆಂದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ತಮ್ಮಡಿಹಳ್ಳಿ ಮಠದ ಶ್ರೀ ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಶ್ರೀಗಳು ಎಲ್ಲಾ ದಾನಿಗಳಿಗೂ ಹಾಗೂ ಕ್ರೀಡಾ ತರಬೇತುದಾರರಿಗೂ ಕ್ರೀಡಾರ್ತಿಗಳಿಗೂ ಬಹುಮಾನವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕಲ್ಪತರು ಸೆಂಟ್ರಲ್ ಸ್ಕೂಲಿನ ವಿದ್ಯಾರ್ಥಿಗಳಿಂದ ವಿಶೇಷ ಭರತನಾಟ್ಯ ಕಾರ್ಯಕ್ರಮ ನಡೆಸಲಾಯಿತು. ಪೆಂಟಲ್ ಜಪಾನ್ ಕಂಪನಿಯ ಪೆನ್ ಅನ್ನು ಬಿಡುಗಡೆಗೊಳಿಸಿ ಕ್ರೀಡಾಸ್ಪರ್ಧಿಗಳಿಗೆ ಬಹುಮಾನವಾಗಿ ವಿತರಿಸಲಾಯಿತು. ತಿಪಟೂರು ಸ್ಪೋರ್ಟ್ಸಕ್ಲಬ್ ಖಜಾಂಚಿ ಟಿ.ಎಸ್. ಬಸವರಾಜ್, ಕಸಪಾಧ್ಯಕ್ಷ ಬಸವರಾಜ್, ಕಾರ್ಯಕ್ರಮದ ಆಯೋಜಕರಾದ ರಾಜ್ಯ ಕೋಕೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ ಮತ್ತಿತರರು ಇದ್ದರು.