ಮಂಡ್ಯಕ್ಕೆ ಲೋಕಾಯುಕ್ತ ತಂಡ ದಿಢೀರ್ ಭೇಟಿ; ಪರಿಶೀಲನೆ

KannadaprabhaNewsNetwork |  
Published : Dec 21, 2025, 02:15 AM IST
೨೦ಕೆಎಂಎನ್‌ಡಿ-೧ಮಂಡ್ಯದ ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿತು. | Kannada Prabha

ಸಾರಾಂಶ

ಮಂಡ್ಯಕ್ಕೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳ ತಂಡ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಕಚೇರಿಗಳಿಗೆ ತೆರಳಿ ಬೆಳಗ್ಗೆಯಿಂದ ಸಂಜೆಯವರೆಗೂ ತೀವ್ರ ಪರಿಶೀಲನೆ ನಡೆಸಿದರು. ಅನಿರೀಕ್ಷಿತ ದಾಳಿಯಿಂದ ಅಧಿಕಾರಿಗಳು-ನೌಕರರು ಬೆಚ್ಚಿಬಿದ್ದಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯಕ್ಕೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳ ತಂಡ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಕಚೇರಿಗಳಿಗೆ ತೆರಳಿ ಬೆಳಗ್ಗೆಯಿಂದ ಸಂಜೆಯವರೆಗೂ ತೀವ್ರ ಪರಿಶೀಲನೆ ನಡೆಸಿದರು. ಅನಿರೀಕ್ಷಿತ ದಾಳಿಯಿಂದ ಅಧಿಕಾರಿಗಳು-ನೌಕರರು ಬೆಚ್ಚಿಬಿದ್ದಿದ್ದರು.

ಅಧಿಕಾರಿಗಳು ಮತ್ತು ನೌಕರರ ಹಾಜರಾತಿ, ಬಯೋ ಮೆಟ್ರಿಕ್ ವ್ಯವಸ್ಥೆ, ವಿಲೇವಾರಿಯಾಗದ ಕಡತಗಳು, ಕಡತಗಳ ನಿರ್ವಹಣೆ, ಬಾಕಿ ಉಳಿಸಿಕೊಂಡಿರುವ ಕಡತಗಳ ಬಗ್ಗೆ ಪರಿಶೀಲನೆ ನಡೆಸಿದರು. ತಡವಾಗಿ ಬಂದ ಅಧಿಕಾರಿಗಳು-ನೌಕರರನ್ನು ಒಳಗೆ ಬಿಡದೆ ಕಾರಣ ನೀಡುವಂತೆ ತಿಳಿಸಿ ಬಿಸಿ ಮುಟ್ಟಿಸಿದರು.

ಬೆಂಗಳೂರಿನಿಂದ ಏಳು ಮಂದಿ ಲೋಕಾಯುಕ್ತ ಅಧಿಕಾರಿಗಳ ತಂಡ ಶನಿವಾರ ಬೆಳಗ್ಗೆ ೧೦ ಗಂಟೆಗೆ ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್ ಕಚೇರಿಯ ಒಳಹೊಕ್ಕಿದರು. ಮೊದಲಿಗೆ ಅಧಿಕಾರಿಗಳು ಮತ್ತು ನೌಕರರ ಹಾಜರಾತಿಯನ್ನು ಪರಿಶೀಲಿಸುವ ಸಲುವಾಗಿ ಕಚೇರಿಯ ಗೇಟ್‌ಗೆ ಬೀಗ ಹಾಕಿಸಿದರು. ತಡವಾಗಿ ಬಂದ ಅಧಿಕಾರಿಗಳು ಮತ್ತು ನೌಕರರನ್ನು ಒಳಗೆ ಬಿಟ್ಟುಕೊಳ್ಳದೆ ಕಾರಣ ನೀಡುವಂತೆ ಸೂಚನೆ ನೀಡಿ ಹೊರಗಡೆಯೇ ನಿಲ್ಲಿಸಿದರು.

ಬಯೋ ಮೆಟ್ರಿಕ್ ವ್ಯವಸ್ಥೆ ಇಲ್ಲ:

ಉಪವಿಭಾಗಾಧಿಕಾರಿ ಕಚೇರಿ ಮತ್ತು ತಹಸೀಲ್ದಾರ್ ಕಚೇರಿಯಲ್ಲಿ ಬಯೋ ಮೆಟ್ರಿಕ್ ವ್ಯವಸ್ಥೆ ಇಲ್ಲದಿರುವುದನ್ನು ಕಂಡು ಲೋಕಾಯುಕ್ತ ಅಧಿಕಾರಿಗಳ ತಂಡ ಅಚ್ಚರಿಗೊಂಡರು. ಬಯೋ ಮೆಟ್ರಿಕ್ ವ್ಯವಸ್ಥೆ ಅಳವಡಿಸಲಿಲ್ಲವೇಕೆ ಎಂದು ಪ್ರಶ್ನಿಸಿದಾಗ, ಯಾರಿಂದಲೂ ಸಮರ್ಪಕ ಉತ್ತರ ಸಿಗಲಿಲ್ಲ. ಹಾಗಾದರೆ ಅಧಿಕಾರಿಗಳು, ನೌಕರರು ಎಷ್ಟೊತ್ತಿಗಾದರೂ ಬರಬಹುದು, ಎಷ್ಟೊತ್ತಿಗಾದರೂ ಹೋಗಬಹುದು. ಯಾರೂ ಕೇಳುವವರೇ ಇಲ್ಲ. ಪ್ರತಿದಿನ ಹೀಗೇನಾ ನಡೆಯೋದು ಎಂದು ಪ್ರಶ್ನಿಸಿ ಚುರುಕು ಮುಟ್ಟಿಸಿದರು.

ಲೋಕಾಯುಕ್ತ ಅಧಿಕಾರಿಗಳು ೧೦ ಗಂಟೆಗೇ ಕಚೇರಿಗೆ ಬಂದರೂ ೧೧ ಗಂಟೆಯಾದರೂ ಕೆಲವು ಅಧಿಕಾರಿ, ನೌಕರರು, ಸಿಬ್ಬಂದಿ ಹಾಜರಿರಲಿಲ್ಲ. ಕಚೇರಿಯ ಅಧಿಕಾರಿಗಳು- ನೌಕರರು ತಮಗಿಷ್ಟ ಬಂದಂತೆ ಕಚೇರಿಗೆ ಬರುತ್ತಿದ್ದಾರೆ. ಕಚೇರಿಯಲ್ಲಿ ಸಿಗುವುದೇ ಇಲ್ಲ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದವು. ಆ ಹಿನ್ನೆಲೆಯಲ್ಲಿ ತಡವಾಗಿ ಬಂದ ಅಧಿಕಾರಿ, ನೌಕರರು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಕೂಡಲೇ ಬಯೋ ಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಿ ತಡವಾಗಿ ಹಾಜರಾಗುವ ಅಧಿಕಾರಿಗಳು, ನೌಕರರು, ಸಿಬ್ಬಂದಿಗೆ ಹಾಜರಾತಿ ನೀಡದಂತೆ ಸೂಚಿಸಿದರು.

ಕಡತಗಳ ಪರಿಶೀಲನೆ:

ಕಚೇರಿಯಲ್ಲಿ ಹಾಜರಿದ್ದ ಅಧಿಕಾರಿ, ಸಿಬ್ಬಂದಿಯಿಂದಲೇ ಕಡತಗಳ ತರಿಸಿಕೊಂಡು ಪರಿಶೀಲನೆ ನಡೆಸಿದರು. ಕೆಲವು ಅಧಿಕಾರಿಗಳು ಕಡತಗಳ ಮಾಹಿತಿ ನೀಡಲು ತಡವರಿಸಿದರು. ಕಡತಗಳ ನಿರ್ವಹಣೆಗೆ ಡಿಜಿಟಲೈಜ್ ಮಾಡಿರುವ ಹಿನ್ನೆಲೆಯಲ್ಲಿ ಕಂಪ್ಯೂಟರ್‌ಗಳಲ್ಲಿಯೂ ದತ್ತಾಂಶಗಳ ಪರಿಶೀಲನೆ ನಡೆಸಿದರು. ಲೋಪ ಕಂಡ ಕಡತಗಳು, ನಾಪತ್ತೆಯಾಗಿರುವ ಕಡತಗಳ ಬಗ್ಗೆಯೂ ಮಾಹಿತಿ ಕಲೆ ಹಾಕಿದರು.

ವಿಲೇವಾರಿ ಮಾಡದ ಕಡತಗಳ ಮಾಹಿತಿ ಸಂಗ್ರಹ:

ಸಾರ್ವಜನಿಕರು, ರೈತರು ಸಲ್ಲಿಸಿರುವ ಅರ್ಜಿಗಳು, ಸಕಾಲದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು, ನಿಗದಿತ ಸಮಯಕ್ಕೆ ವಿಲೇವಾರಿಯಾಗಿರುವ ಅರ್ಜಿಗಳೆಷ್ಟು, ಸಮಯ ಮೀರಿ ಉಳಿದಿರುವ ಅರ್ಜಿಗಳೆಷ್ಟು ಎಂಬುದರ ಬಗ್ಗೆಯೂ ಮಾಹಿತಿ ಪಡೆದರು. ಕಡತಗಳ ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಂಡಿರುವ ಕಡತಗಳ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೆ, ವಿಲೇವಾರಿ ಮಾಡಲು ಏನು ಸಮಸ್ಯೆ, ವಿಳಂಬಕ್ಕೆ ಕಾರಣಗಳೇನು ಎಂಬ ಬಗ್ಗೆಯೂ ಅಧಿಕಾರಿಗಳನ್ನು ಪ್ರಶ್ನಿಸಿದರು. ಎಲ್ಲಾ ದಾಖಲೆಗಳಿದ್ದರೂ ಕಡತಗಳು ವಿಲೇವಾರಿ ಮಾಡದಿರುವ ಬಗ್ಗೆ ಕೇಳಿದಾಗ ಕೆಲವು ಅಧಿಕಾರಿಗಳು-ನೌಕರರು ಸಬೂಬು ಹೇಳಿದರೆ, ಮತ್ತೆ ಕೆಲವರು ಮೌನವಾಗಿದ್ದರು.

ಭೂದಾಖಲೆಗಳ ಪರಿಶೀಲನೆ:

ಲೋಕಾಯುಕ್ತ ಅಧಿಕಾರಿಗಳ ತಂಡ ಭೂ ದಾಖಲೆಗಳ ಕಚೇರಿ ಅಧಿಕಾರಿಗಳಿಂದಲೂ ಕಡತಗಳ ನಿರ್ವಹಣೆ, ಬಾಕಿ ಇರುವ ಕಡತಗಳು, ರೈತರ ಜಮೀನಿಗೆ ಸಂಬಂಧಪಟ್ಟ ದಾಖಲೆಗಳ ಬಗ್ಗೆಯೂ ಮಾಹಿತಿ ಪಡೆದರು. ಬಾಕಿ ಉಳಿಸಿಕೊಂಡಿರುವ ಕಡತಗಳ ಬಗ್ಗೆ ಪ್ರಶ್ನೆ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಕೆಲವು ಕಡತಗಳನ್ನು ಸಲ್ಲಿಸದಿರುವ ಬಗ್ಗೆ ಕಾರಣ ತಿಳಿಸುವಂತೆ ಸೂಚಿಸಿದರು.

ಬೆಂಗಳೂರಿನ ಲೋಕಾಯುಕ್ತ ಡಿವೈಎಸ್ಪಿ ಸತೀಶ್ ನೇತೃತ್ವದ ಏಳು ಅಧಿಕಾರಿಗಳ ತಂಡ ಆಗಮಿಸಿದ್ದರು. ಜೊತೆಗೆ ಮಂಡ್ಯ ಲೋಕಾಯುಕ್ತ ಎಸ್‌ಪಿ ಸುರೇಶ್‌ಬಾಬು, ಡಿವೈಎಸ್ಪಿ ಸುನೀಲ್, ಬ್ಯಾಟರಾಯಗೌಡ, ಇನ್ಸ್‌ಪೆಕ್ಟರ್‌ಗಳಾದ ರವಿಕುಮಾರ್, ಲೇಪಾಕ್ಷ ಪಾಲ್ಗೊಂಡಿದ್ದರು.ಹಣದ ವಹಿಯಲ್ಲಿ ನಮೂದಿಸಿಲ್ಲ:

ಅಧಿಕಾರಿಗಳು, ನೌಕರರು ಹಾಗೂ ಸಿಬ್ಬಂದಿ ಕಚೇರಿ ಬರುವಾಗ ಎಷ್ಟು ನಗದನ್ನು ಇಟ್ಟುಕೊಂಡಿರುತ್ತಾರೆ, ಹೋಗುವಾಗ ಅವರಲ್ಲಿ ಎಷ್ಟಿರುತ್ತದೆ ಎಂಬ ಬಗ್ಗೆ ಹಣದ ವಹಿಯಲ್ಲಿ ಸಮರ್ಪಕವಾಗಿ ನಮೂದಿಸಿರಲಿಲ್ಲ. ಕೆಲವರು ನಮೂದಿಸಿದ್ದರೂ ಅನುಮಾನಾಸ್ಪದವಾಗಿತ್ತು. ಆ ಅಧಿಕಾರಿಗಳು-ನೌಕರರ ಬಗ್ಗೆ ಮಾಹಿತಿ ಪಡೆದು ಅವರ ಮೊಬೈಲ್‌ನ ಗೂಗಲ್ ಪೇ, ಫೋನ್ ಪೇ ಮೂಲಕ ನಡೆದಿರುವ ಹಣಕಾಸಿನ ವಿವರ, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ಪರಿಶೀಲನೆ ನಡೆಸಿದರು.ಸಾರ್ವಜನಿಕರಿಂದ ದೂರು ಸ್ವೀಕಾರ

ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿದ ಸಾರ್ವಜನಿಕರಿಂದಲೂ ಲೋಕಾಯುಕ್ತ ಅಧಿಕಾರಿಗಳು ದೂರು ಸ್ವೀಕಾರ ಮಾಡಿದರು. ಸಮಸ್ಯೆಗಳ ಅರ್ಜಿಗಳಿಗೆ ಬಗೆಹರಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿನ ಕಡತಗಳ ಪರಿಶೀಲನೆ, ಅಧಿಕಾರಿ, ಸಿಬ್ಬಂದಿ ಹಣದ ವಹಿವಾಟು, ಹಾಜರಾತಿ ಸೇರಿದಂತೆ ಲೋಪದೋಷಗಳ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಸಂಪೂರ್ಣ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದರು.ಸುಮೋಟೋ ಕೇಸ್ ದಾಖಲು: ಸುರೇಶ್‌ಬಾಬು

ಉಪನೋಂದಣಾಧಿಕಾರಿಗಳ ಕಚೇರಿಗೂ ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಅಲ್ಲಿ ಸಿಸಿ ಕ್ಯಾಮೆರಾ ಅಳವಡಿಸದಿರುವುದು, ಕಣ್ಣಿನ ಸ್ಕ್ಯಾನರ್ ಕೆಟ್ಟಿದ್ದರೂ ಸರಿಪಡಿಸದಿರುವುದು ಕಂಡುಬಂದಿತು. ಇದರ ಬಗ್ಗೆ ಜಿಲ್ಲಾ ನೋಂದಣಾಧಿಕಾರಿ, ಉಪ ನೋಂದಣಾಧಿಕಾರಿ ವಿರುದ್ಧ ಸುಮೋಟೋ ಕೇಸ್ ದಾಖಲಿಸುವಂತೆ ಸೂಚಿಸಿದೆ. ಉಪವಿಭಾಗಾಧಿಕಾರಿ ಕಚೇರಿ, ತಹಸೀಲ್ದಾರ್ ಕಚೇರಿಗಳಲ್ಲಿ ದಾಖಲೆಗಳು, ಕಡತಗಳ ಪರಿಶೀಲನೆ ಮಾಡಲಾಗಿದೆ.

- ಸುರೇಶ್‌ಬಾಬು, ಲೋಕಾಯುಕ್ತ ಎಸ್‌ಪಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ