ವಕೀಲ ವೃತ್ತಿ ಯಶಸ್ಸಿಗೆ ಕಠಿಣ ಪರಿಶ್ರಮ, ಅಧ್ಯಯನ ಅಗತ್ಯ

KannadaprabhaNewsNetwork | Published : May 7, 2025 12:48 AM

ಸಾರಾಂಶ

ಸರಸ್ವತಿ ಕಾನೂನು ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆದ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಸಮಾರೋಪದಲ್ಲಿ ವಿಜೇತರಿಗೆ ಪ್ರೊ.ಸುರೇಶ್ ವಿ.ನಾಡಗೌಡರ್ ಬಹುಮಾನ ವಿತರಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಕೀಲ ವೃತ್ತಿ ಯಶಸ್ಸಿಗೆ ಬದ್ಧತೆ, ಕಠಿಣ ಪರಿಶ್ರಮ, ನಿರಂತರ ಅಧ್ಯಯನ ಅಗತ್ಯವೆಂದು ಕರ್ನಾಟಕ ರಾಜ್ಯ ಪಂಚಾಯತ್‌ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿಯ ಉಪ ಕುಲಪತಿ ಪ್ರೊ.ಸುರೇಶ್ ವಿ.ನಾಡಗೌಡರ್ ಪ್ರತಿಪಾದಿಸಿದರು.

ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆದ 2ನೇ ರಾಷ್ಟ್ರೀಯ ಕಲ್ಪಿತ ನ್ಯಾಯಾಲಯ ಸ್ಪರ್ಧೆಯ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಕಾನೂನು ವಿದ್ಯಾರ್ಥಿಗಳು ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಗ್ರಾಮೀಣ ಭಾಗದಿಂದ ಬಂದವರು ಇಂಗ್ಲಿಷ್ ಲಾಂಗ್ವೇಜ್ ಇಲ್ಲ ಎನ್ನುವ ಕೀಳರಿಮೆ ಬೇಡ. ವಕೀಲ ವೃತ್ತಿ ಅತ್ಯಂತ ಪವಿತ್ರವಾದುದು. ನಿಮ್ಮ ಬಳಿ ಬರುವ ಕಕ್ಷಿದಾರರಿಗೆ ನ್ಯಾಯ ಒದಗಿಸುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ. ಎರಡು ಮೂರು ವರ್ಷವಾದರೂ ಟ್ರಯಲ್ ಕೋರ್ಟ್ ನಲ್ಲಿ ಪ್ರಾಕ್ಟಿಸ್ ಮಾಡಿದರೆ ಬೇಸಿಕ್ ನಾಲೆಡ್ಜ್ ಸಿಗುತ್ತದೆ ಎಂದರು.

ಕಲ್ಪಿತ ನ್ಯಾಯಾಲಯ ಸ್ಪರ್ಧೆ ಕಾನೂನು ವಿದ್ಯಾರ್ಥಿಗಳಿಗೆ ಅರ್ಥಪೂರ್ಣ ಹಾಗೂ ಪರಿಣಾಮಕಾರಿಯಾದುದು. ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜಿಗೆ ಇತಿಹಾಸವಿದೆ. ಇಲ್ಲಿ ಕಾನೂನು ಪದವಿ ಪಡೆದವರಲ್ಲಿ ಮೂವರು ನ್ಯಾಯಾಧೀಶರುಗಳಾಗಿದ್ದಾರೆ. ನಲವತ್ತು ಮಂದಿ ನ್ಯಾಯಾಂಗ ಇಲಾಖೆಯಲ್ಲಿ ಅಧಿಕಾರಿಗಳಾಗಿದ್ದಾರೆ. ಸರ್ಕಾರಿ ಅಭಿಯೋಜಕರು ಹಾಗೂ ಸಾವಿರಾರು ವಕೀಲರುಗಳನ್ನು ಸಮಾಜಕ್ಕೆ ಕೊಟ್ಟಿದೆ ಎಂದರು. ಕಾನೂನು ಪದವಿ ಪಡೆದವರು ವಕೀಲರುಗಳೆ ಆಗಬೇಕೆಂದಿಲ್ಲ. ವಿಫುಲ ಅವಕಾಶಗಳಿವೆ.

ಐಎಎಸ್, ಕೆಎಎಸ್ ಅಧಿಕಾರಿಗಳಾಗಬಹುದು. ಸಿವಿಲ್ ಸರ್ವಿಸ್‌ಗೆ ಸೇರಿ ಉತ್ತಮ ಆಡಳಿತ ನೀಡಬಹುದು. ನ್ಯಾಯವಾದಿಗಳಿಗೆ ಸಂವಹನ ಕೌಶಲ್ಯವಿರಬೇಕು. ತಂತ್ರಜ್ಞಾನಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು. ಸೋಲು-ಗೆಲುವಿಗಿಂತ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಪ್ರೊ.ಸುರೇಶ್ ನಾಡಗೌಡರ ಹೇಳಿದರು.

ಸರಸ್ವತಿ ಕಾನೂನು ಕಾಲೇಜಿನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಡಿ.ಕೆ.ಶೀಲಾ ಮಾತನಾಡಿ, ಬೇರೆ ಯಾವ ವೃತ್ತಿಯಲ್ಲಿಯೂ ಇಂತಹ ಸ್ಪರ್ಧೆಗಳು ಇರುವುದಿಲ್ಲ. ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ಸೋಲು-ಗೆಲುವಿಗಿಂತಲೂ ಭಾಗವಹಿಸುವಿಕೆ ಮುಖ್ಯ. ವಕೀಲ ವೃತ್ತಿಯಲ್ಲಿ ಹೆಣ್ಣು ಮಕ್ಕಳು ಕಡಿಮೆಯಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಾಸ್ತಿಯಾಗಬಹುದು. ನಿರಂತರ ಅಧ್ಯಯನ ವಕೀಲ ವೃತ್ತಿಗೆ ಅತ್ಯವಶ್ಯಕ. ಇಲ್ಲದಿದ್ದರೆ ಹೆಸರು ಗಳಿಸುವುದು ಕಷ್ಟವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸರಸ್ವತಿ ಕಾನೂನು ಕಾಲೇಜು ಅಧ್ಯಕ್ಷ ಎಚ್.ಹನುಮಂತಪ್ಪ ಮಾತನಾಡಿ, ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಕಾಲೇಜುಗಳಿಂದ 102 ವಿದ್ಯಾರ್ಥಿಗಳು ಭಾಗವಹಿಸಿರುವುದು ಅತ್ಯಂತ ಸಂತೋಷ. ಬಹುಮಾನ ಪಡೆಯುವುದು ಮುಖ್ಯವಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಿದರೆ ಜ್ಞಾನ ಬೆಳೆಯುತ್ತದೆ. ಸರಸ್ವತಿ ಕಾನೂನು ಕಾಲೇಜಿನ ಬೆಳವಣಿಗೆಯ ಹಿಂದೆ ಎಲ್ಲರ ಶ್ರಮವಿದೆ ಎಂದರು.

ಸರಸ್ವತಿ ಕಾನೂನು ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ಎಸ್.ಸುಧಾದೇವಿ ಮಾತನಾಡಿ, ಸ್ಪರ್ಧೆಯನ್ನು ಸ್ಪೋರ್ಟಿವ್ ಆಗಿ ತೆಗೆದುಕೊಳ್ಳಬೇಕು. ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ಸೋತವರು ಮುಂದೆ ಗೆಲ್ಲುವ ಛಲವಿಟ್ಟುಕೊಳ್ಳಿ ಎಂದು ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಸರಸ್ವತಿ ಕಾನೂನು ಕಾಲೇಜು ಉಪಾಧ್ಯಕ್ಷ ಹಿರಿಯ ನ್ಯಾಯವಾದಿ ಫಾತ್ಯರಾಜನ್ ವೇದಿಕೆಯಲ್ಲಿದ್ದರು. ದೈಹಿಕ ಶಿಕ್ಷಕ ಪಿ.ಸಿ.ಮುರುಗೇಶ್ ನಿರೂಪಿಸಿದರು.

Share this article