- ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ, ತರೀಕೆರೆಮಕ್ಕಳು ಸತತ ಪರಿಶ್ರಮ, ಶಿಸ್ತು ಮತ್ತು ಸಂಸ್ಕಾರವನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡರೆ ಯಾವುದೇ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಗೆಲುವು ಪಡೆಯಲು ಸಾಧ್ಯ ಎಂದು ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಸಹಶಿಕ್ಷಕಿ ಮಂಜುಳಾ ಮಲ್ಲಿಗವಾಡ ಹೇಳಿದರು.ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲಾ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಗ್ರಾಪಂನಿಂದ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾಷಣ ಮತ್ತು ಬರವಣಿಗೆಗಳು ಕೇವಲ ಕಲೆಗಳಲ್ಲ. ಅವು ಮಕ್ಕಳ ಭವಿಷ್ಯದ ಬಾಗಿಲು ತೆರೆಯುವ ಕೀಗಳು, ಮಕ್ಕಳು ಉತ್ತಮವಾಗಿ ಅಭ್ಯಸಿಸುವ ಮೂಲಕ ಈ ವಿಷಯಗಳಲ್ಲಿ ಪ್ರೌಢಿಮೆ ಗಳಿಸಬಹುದು ಎಂದು ತಿಳಿಸಿ, ಮಕ್ಕಳು ತಮ್ಮ ವಿದ್ವತ್ತು ಬೆಳೆಸಿಕೊಂಡು ಇಂತಹ ಆಯಾಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಪುರಸ್ಕಾರಕ್ಕೆ ಒಳಗಾಗಬಹುದು. ಯಾವುದೇ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳು ವುದೇ ಪ್ರಮುಖ ಗುರಿಯಾಗಿರಬೇಕೇ ಹೊರತು ಬಹುಮಾನ ಗೆಲ್ಲುವುದಲ್ಲ. ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಬಹುಮಾನ ಗೆಲ್ಲುವ ಅವಕಾಶ ಎಲ್ಲರಿಗೂ ದೊರೆಯುತ್ತದೆ ಎಂದು ಹೇಳಿದರು.
ಶ್ರೀ ಅಮೃತೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಹಾಲೇಶ್ ಕೆ. ಟಿ ಮಾತನಾಡಿ ಮಕ್ಕಳು ಉತ್ತಮ ಅಭ್ಯಾಸ ಕೈ ಗೊಂಡರೆ ಪ್ರತಿಭಾನ್ವಿತರಾಗಬಹುದು. ಅಲ್ಲದೆ ಅವರನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದೇ ಅವರ ಪ್ರತಿಭೆ. ಈ ಪ್ರತಿಭೆ ಬೆಳೆಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಕ್ಕಳು ಮಾಡಬೇಕೆಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಸಂಘಟಿಸಿದ್ದ ಬಾಲ್ಯ ವಿವಾಹ ಪ್ರಬಂಧ ಸ್ಪರ್ಧೆಯಲ್ಲಿ ಶರತ್ ನೀರಲಗಿ(ಪ್ರ), ಸೌಜನ್ಯ(ದ್ವಿ) ಮತ್ತು ವರ್ಷ ಗೊಡಚನ್ನವರಮಠ(ತೃ) ಸ್ಥಾನ ಹಾಗೂ ಸಮಧಾನಕರ ಬಹುಮಾನ ಪಡೆದಿರುವ ದೀಪಿಕಾಬಾಯಿ, ಭವ್ಯ, ವಿದ್ಯಾಬಾಯಿ ಮತ್ತು ಪದ್ಮಾವತಿ ಅವರನ್ನು ಅಭಿನಂದಿಸಲಾಯಿತು. ನೇರಲಕೆರೆ ಗ್ರಾಪಂನಿಂದ ನಡೆಸಿದ ನಮ್ಮ ಸಂವಿಧಾನ ವಿಷಯದ ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದ ರೇಖಾ ಟಿ, ತೃತೀಯ ಸ್ಥಾನ ಪಡೆದಿರುವ ಲೇಖನ ಡಿ ಎಲ್ ಅವರನ್ನು ಅಭಿನಂದಿಸಲಾಯಿತು. ಶಾಲೆಯ ಶಿಕ್ಷಕರಾದ ಖಿಜರ್‌ಖಾನ್, ರಮಾಕಾಂತ್, ಸವಿತಮ್ಮ ಬಿ, ಸತೀಶ್ ನಂದಿಹಳ್ಳಿ ಮತ್ತು ದೈಹಿಕ ಶಿಕ್ಷಕ ಪಂಚಾಕ್ಷರಪ್ಪ ಭಾಗವಹಿಸಿದ್ದರು.--5ಕೆಟಿಆರ್.ಕೆ.1ಃ
ತರೀಕೆರೆ ಸಮೀಪದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳನ್ನು ಸನ್ಮಾನಿಸಲಾಯಿತು.